ಹೇಳದೇ ಕೇಳಿಸಿದ್ದು !
'ನಾನು ಮಗುವನ್ನು ನೋಡಬಹುದಾ?' ಕಾತರ, ನಿರೀಕ್ಷೆಯಿಂದ ಕೇಳಿದಳು ಬಾಣಂತಿ. 'ಖಂಡಿತ' ಎಂದ ಡಾಕ್ಟರ್ ಅಳುಕುತ್ತಲೇ ಶಿಶುವನ್ನು ನೀಡಿದರು. ಅಕ್ಕರೆಯಿಂದ ನೋಡುತ್ತಿದ್ದವಳ ಮುಖ ಕಪ್ಪಿಟ್ಟಿತು, ಮರುನಿಮಿಷವೇ ಮಾತೃಸಹಜ ಪ್ರೇಮ ಉಕ್ಕಿತು. ಆ ಪಾಪು ಕಿವಿಗಳಿಲ್ಲದೇ ಹುಟ್ಟಿತ್ತು!
ಅನೇಕ ತಪಾಸಣೆಗಳ ಬಳಿಕ ಮಗುವಿನ ಶ್ರವಣ ಶಕ್ತಿ ಚೆನ್ನಾಗಿದೆ ಎನ್ನುವುದು ದೃಢಪಟ್ಟಿತು. ಆತ ಚೂಟಿಯಾಗಿದ್ದ, ತುಂಟನಾಗಿದ್ದ, ಬುದ್ಧಿವಂತನಾಗಿದ್ದ. ಅಪ್ಪನಿಗೆ ಮಗನ ಕಿವಿಯದೇ ಚಿಂತೆ. ಖ್ಯಾತ ಕಿವಿರೋಗ ತಜ್ಞರಲ್ಲಿ ಕರೆದೊಯ್ದ. ಅವರು ಹೇಳಿದರು, 'ಯಾರಾದರೂ ಕಿವಿಗಳನ್ನು ದಾನವಾಗಿ ಕೊಟ್ಟರೆ ಜೋಡಿಸಲು ನಾನು ಸಿದ್ಧ.' ಆ ದಿನವೂ ಬಂದಿತು. ಆಪರೇಶನ್ ಸಕ್ಸಸ್. ಹುಡುಗನಿಗೆ ಕಿವಿ ಬಂತು. ಡಿಗ್ರಿ ಮುಗಿಸಿದ. ಮದುವೆಯಾದ. ಒಳ್ಳೆಯ ಉದ್ಯೋಗ ಗಿಟ್ಟಿಸಿದ. ಅವನಿಗೆ ಒಂದೇ ಆಸೆ. ತನಗೆ ಕಿವಿ ಕೊಟ್ಟ ದಾನಿಯನ್ನು ನೋಡಬೇಕು! ಕೇಳಿದಾಗಲೆಲ್ಲ ಅಪ್ಪ ಹೇಳುತ್ತಿದ್ದ, 'ಅದು ಸಾಧ್ಯವಿಲ್ಲ ಮಗು. ನಮ್ಮ ಮತ್ತು ಅವರ ಶರತ್ತೇ ಹಾಗಿದೆ.'
'ಅಮ್ಮ ಬದುಕಿರೋವಾಗಂತೂ ಅವಳೂ ಹೇಳಲಿಲ್ಲ, ನೀನೂ ಹೇಳಲಿಲ್ಲ' ಎಂದು ಅಂದು ವ್ಯಥೆಪಟ್ಟುಕೊಂಡ. ಅಪ್ಪ ಆ ಶವದ ಬಳಿ ಕರೆದೊಯ್ದ. ಕಿವಿ ಪಕ್ಕದ ಕೂದಲುಗಳನ್ನು ಸರಿಸಿದ ಮತ್ತು ಹೇಳಿದ, 'ಮಗನೇ, ನಿನ್ನಮ್ಮ ಯಾವಾಗಲೂ ಕಿವಿಯನ್ನು ಕೂದಲುಗಳಿಂದ ಮುಚ್ಚಿಕೊಂಡಿರುತ್ತಿದ್ದಳಲ್ಲ. ಅದರ ಗುಟ್ಟು ಇದು. ನೋಡು'. ಆಕೆಯ ಎರಡೂ ಕಿವಿಗಳನ್ನು ಕತ್ತರಿಸಿದ ಗುರುತು ಇತ್ತು!