ಎಲ್ಲ ಬಾಣ ಕಚ್ಚಿಕೊಳ್ಳುವುದಿಲ್ಲ (ರನ್ ವೇ)
ಬದುಕೆಂಬುದು ಬಿಲ್ಲಿನಿಂದ ಬಿಟ್ಟ ಬಾಣದಂತೆಯೇ. ನೀವು ಎಷ್ಟೇ ಒಳ್ಳೆಯ ಬಿಲ್ವಿದ್ಯಾ ಪರಿಣಿತರಾಗಿರಿ. ನಿಮ್ಮ ಗುರಿ ಅದೆಷ್ಟೇ ಹತ್ತಿರದಲ್ಲಿಯೇ ಇರಲಿ. ನಿಮ್ಮಲ್ಲಿ ತಾಂತ್ರಿಕವಾಗಿ ಅತ್ಯಂತ ಉತ್ತಮ ಬಿಲ್ಲೂ ಇರುತ್ತದೆ. ಬಾಣವೂ ಉತ್ಕೃಷ್ಟ ಮಾದರಿಯದ್ದೇ. ಇವಿಷ್ಟೇ ಪಂದ್ಯದ ಫಲಿತಾಂಶವನ್ನು ನಿರ್ಧರಿಸಿಬಿಡಲು ಸಾಧ್ಯವಿಲ್ಲ. ಇಷ್ಟೆಲ್ಲ ಇದ್ದರೂ ನೀವು ಬಿಲ್ಲಿಗೆ ಹೂಡಿ ಬಿಟ್ಟ ಬಾಣ ನಿಖರವಾಗಿ ನಿಮ್ಮ ಗುರಿಯನ್ನೇ ತಲುಪಿಬಿಡುತ್ತದೆ ಎಂದು ಹೇಳಲಿಕ್ಕೆ ಬರುವುದಿಲ್ಲ. ಇನ್ನೇನು ಬೇಕು? ಇಷ್ಟೇ ಅಲ್ಲವೇ ಬಾಣಪ್ರಯೋಗಕ್ಕೆ ಬೇಕಿರುವುದು? ಹೀಗಿದ್ದೂ ನಮ್ಮ ಬಾಣವೇಕೆ ಗುರಿ ತಲುಪುವುದಿಲ್ಲ ಎಂದು ಪ್ರಶ್ನಿಸಿದರೆ ಖಂಡಿತಾ ನಿಮ್ಮ ದಡ್ಡತನದ ಪ್ರದರ್ಶನವಾಗುತ್ತದೆ. ಬಾಣ ಪ್ರಯೋಗದ ಸಂದರ್ಭದಲ್ಲಿ ಇವೆಲ್ಲಕ್ಕಿಂತ ಮುಖ್ಯವಾದುದು ನಿಮ್ಮ ಏಕಾಗ್ರತೆ. ಎಲ್ಲವೂ ಇದ್ದು ನೀವು ಏಕಾಗ್ರಚಿತ್ತರಾಗಿರಲು ಸಾಧ್ಯವಾಗದೇ ಹೋದರೆ, ಬೇರಿನ್ಯಾವವೋ ಸಂಗತಿಗಳು ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ ಎಂದಾದರೆ ಖಂಡಿತಾ ನೀವು ಹೂಡಿದ ಬಾಣ ಗುರಿಯನ್ನು ತಲುಪಲು ಸಾಧ್ಯವೇ ಇಲ್ಲ. ತೀರಾ ವಿಚಲಿತವಾಗಿದ್ದರೆ ಕನಿಷ್ಠ ಗುರಿಯ ಸಮೀಪಕ್ಕೂ ಹೋಗಲು ಸಾಧ್ಯವಾಗುವುದೇ ಇಲ್ಲ. ಎಷ್ಟೋ ಸಂಗತಿಗಳು ಜೀವನದಲ್ಲಿ ದಿನನಿತ್ಯ ನಿಮ್ಮನ್ನು ಕಾಡುತ್ತಲೇ ಇರುತ್ತವೆ. ಬೇಕಾದದ್ದು ಬೇಡದ್ದು ಹೀಗೆ ಎಲ್ಲವೂ ನಿಮ್ಮನ್ನು ಮುತ್ತುತ್ತಿರುತ್ತದೆ. ಹಾಗೆಂದು ಅದೆಲ್ಲವನ್ನೂ ಬಿಟ್ಟು ಏನೂ ಇಲ್ಲದ, ಅತ್ಯಂತ ಪ್ರಶಾಂತ ತಾಣದಲ್ಲಿ ಹೋಗಿ ಕುಳಿತು ಇದ್ದುಬಿಡುತ್ತೇನೆ ಎಂಬುದು ಸಾಧ್ಯವಾಗುವುದಿಲ್ಲ. ಒಂದೆರಡು ದಿನದ ಮಟ್ಟಿಗೆ ಇದು ಹಿತವೆನಿಸಿದರೂ ಯಾರೂ ಇಲ್ಲದ, ಏನೂ ಬಾಧಿಸದ ಸ್ಥಳವೇ ಹೆಚ್ಚು ರುಚಿಸುವುದಿಲ್ಲ. ಅಭ್ಯಾಸ ಸಂದರ್ಭದಲ್ಲಿ, ಏಕಾಗ್ರತೆ ಸಾಧನೆಗಾಗಿ ಹೇಗೆ ನೀವು ಪ್ರಶಾಂತ ಸ್ಥಳದಲ್ಲಿ ಹೋಗಿ ಬಾಣ ಪ್ರಯೋಗವನ್ನು ಮಾಡುತ್ತೀರೋ ಹಾಗೆಯೇ ಬದುಕು ಸಹ. ಮತ್ತೆ ನಿಮ್ಮ ಪ್ರದರ್ಶನವೇನಿದ್ದರೂ ತುಂಬಿದ ಕ್ರೀಡಾಂಗಣದಲ್ಲಿ ಕಿಕ್ಕಿರಿದ ಪ್ರೇಕ್ಷಕರ ನಡುವೆ, ಅವರ ಕೇಕೆ, ಕೂಗಾಟ ಕಿರುಚಾಟದ ಮಧ್ಯೆ, ತೀವ್ರ ಪೈಪೋಟಿಯೊಂದಿಗೇ ಆಗಬೇಕು. ಆಗಲೇ ನೀವು ವಿಜಯಿಯೆಂದು ಘೋಷಣೆಯಾಗುವುದು. ಜೀವನದಲ್ಲೂ ಎಲ್ಲ ರೀತಿಯ ಅಡೆತಡೆಗಳನ್ನೂ ಮೀರಿಯೇ ನೀವು ನಿಮ್ಮ ಗುರಿಯೆಡೆಗೆ ಏಗಾಗ್ರತೆ ಸಾಧಿಸಬೇಕು. ಹಾಗೂ ಕೆಲಮೊಮ್ಮೆ ನಮ್ಮ ಬಾಣ ವಿಫಲವಾಗಬಹುದು. ಅದನ್ನು ಜಸ್ಟ್ ನಿರ್ಲಕ್ಷಿಸಿ ಮುಂದೆ ಹೊರಟುಬಿಡಿ. ಸುತ್ತಲಿನಲ್ಲಿ ಯಾರೋ ನಗುತ್ತಾರೆ, ವ್ಯಂಗ್ಯವಾಡುತ್ತಾರೆ, ಕಿಚಾಯಿಸುತ್ತಾರೆ. ಅದರೆಡೆಗೆ ಗಮನ ಕೊಟ್ಟಿರೋ ಮುಂದಿನ ಬಾಣವೂ ಗುರಿತಲುಪಲು ಸಾಧ್ಯವಿಲ್ಲ. ಈ ಬದುಕನ್ನು ನಮಗೆ ಸರಿಯೆನಿಸುವಂತೆ, ನಮ್ಮ ಗುರಿಯೆಡೆಗೆ ಹೆದೆಯೆಳೆದು ಹೂಡಿ ಹೊರಟುಬಿಡಬೇಕು. ಅದು ತಾಕತ್ತು. ತನ್ನಿಂದ ತಾನೇ ನಾವು ಬಾಣಬಿಟ್ಟ ಕಡೆ ಉಳಿದವರ ಕತ್ತು ತಿರುಗುತ್ತದೆ.
-ಸಹನೆ