ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮನೆಯಲ್ಲೇ ಇದ್ದಾರೆ ಬಾಡಿಗಾರ್ಡ್‌ಗಳು!

Lingaraj Badiger
Updated On : 2 Jul 2013, 3:29 am

ಸ್ಟ್ರಾಬೆರಿ ಸೇರಿದಂತೆ ವಿಟಮಿನ್ ಸಿ ಮತ್ತು ಇ ಅಧಿಕ ಇರುವ ಹಣ್ಣು, ತರಕಾರಿ, ಪದಾರ್ಥಗಳು ಇನ್ನೂ ಒಂದು ಮಹತ್ವದ ಕಾರ್ಯವನ್ನು ನಿರ್ವಹಿಸುತ್ತವೆ. ಅದೆಂದರೆ ರಕ್ತನಾಳ ಶುದ್ಧೀಕರಣ. ಅವನ್ನು ಒಳ್ಳೆ ಕೊಲೆಸ್ಟರಾಲ್‌ನ ಬಾಡಿಗಾರ್ಡ್ ಎಂದೂ ಹೇಳಬಹುದು. ರಕ್ತನಾಳದಲ್ಲಿ ಸಿಕ್ಕಿಕೊಳ್ಳುವ ಸಣ್ಣಪುಟ್ಟ ಕಣಗಳನ್ನು ಅವು ನಿರಂತಕವಾಗಿ ಸ್ವಚ್ಛಗೊಳಿಸುತ್ತಲೇ ಇರುತ್ತವೆ. ಕೆಟ್ಟ ಕೊಲೆಸ್ಟ್ರರಾಲ್‌ಗೆ ಕಾರಣವಾಗುವ ಅಂಶಗಳ ವಿರುದ್ಧ ಸತತ ಹೋರಾಟ ನಡೆಸುವುದಲ್ಲದೆ ಅವುಗಳನ್ನು ನಾಶಗೊಳಿಸುವ ಪ್ರಕ್ರಿಯೆಯಲ್ಲೂ ತೊಡಗಿಕೊಳ್ಳುತ್ತವೆ. ಹೀಗಾಗಿ ಮೂರು ರೀತಿಯಲ್ಲಿ ಅವು ನಮಗೆ ನೆರವಾಗುತ್ತವೆ ಎನ್ನಬಹುದು. ಒಂದು- ಕೆಟ್ಟ ಕೊಲೆಸ್ಟರಾಲ್ ಕಡಿಮೆ ಮಾಡುವುದು, ಎರಡು- ಒಳ್ಳೆ ಕೊಲೆಸ್ಟರಾಲ್ ಹೆಚ್ಚಿಸುವುದು, ಮೂರು- ರಕ್ತನಾಳಗಳನ್ನು ಸ್ವಚ್ಛಗೊಳಿಸುವುದು. ಆದ್ದರಿಂದ ವಿಟಮಿನ್ ಸಿ ಮತ್ತು ಇ ಇರುವ ಹಣ್ಣು, ತರಕಾರಿಗಳನ್ನು ಸಾಧ್ಯವಾದಷ್ಟು ಹೆಚ್ಚು ಸೇವಿಸುವುದು ಒಳ್ಳೆಯದು.
ಇಲ್ಲೊಂದು ಪ್ರಶ್ನೆ ಏಳಬಹುದು. ವಿಟಮಿನ್ ಸಿ ಮತ್ತು ಇ ಜಾಸ್ತಿ ಇರುವ ಪದಾರ್ಥಗಳು ಯಾವವು ಎನ್ನುವುದು. ಪೇರಲೆಹಣ್ಣು, ಪಪ್ಪಾಯಿ, ಸ್ಟ್ರಾಬೆರಿ, ದ್ರಾಕ್ಷಿ, ಕಿವಿ ಫ್ರುಟ್, ಕಿತ್ತಳೆ, ಮೋಸಂಬಿ, ಟೊಮೆಟೊ, ಬ್ರಕೋಲಿ, ಕಾಲಿಫ್ಲವರ್, ಅವರೆ, ಕೋಸುಗಡ್ಡೆ ಇವುಗಳಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುತ್ತದೆ. ಆಕ್ರೋಟು, ಸೂರ್ಯಕಾಂತಿ ಬೀಜ, ಬಾದಾಮಿ, ಗೋಡಂಬಿ, ಗೋಧಿ ಮತ್ತು ಅದರ ಹಿಟ್ಟು, ಒಣಗಿದ ಸೋಯಾಬೀನ್ ಬೀಜ, ಅಕ್ಕಿ ತೌಡು, ಶೇಂಗಾ ಎಣ್ಣೆ, ಎಳ್ಳೆಣ್ಣೆ, ಕಾರ್ನ್ ಆಯಿಲ್‌ಗಳಲ್ಲಿ ವಿಟಮಿನ್ ಇ ಹೆಚ್ಚಾಗಿರುತ್ತದೆ. ಇವು ನಮಗೇನೂ ಹೊಸದಲ್ಲ ಅಲ್ಲವೆ?

ಪುರುಷರಿರಲಿ, ಮಹಿಳೆಯರಿರಲಿ. ವಿಟಮಿನ್ ಇ ಮತ್ತು ಸಿ ಸಮಾನ ಪರಿಣಾಮ ಬೀರುತ್ತವೆ. ದಿನವೊಂದಕ್ಕೆ 180 ಮಿಲಿಗ್ರಾಂ ವಿಟಮಿನ್ ಸಿ (ಎರಡು ದೊಡ್ಡ ಕಿತ್ತಳೆ ಹಣ್ಣು) ಸೇವಿಸಿದರೆ ಎಚ್‌ಡಿಎಲ್ ಕೊಲೆಸ್ಟರಾಲ್ ಶೇ 11ರಷ್ಟು ಹೆಚ್ಚಾಗುತ್ತದೆ. ಮಾತ್ರವಲ್ಲ, ಅದು ಕೆಟ್ಟ ಕೊಲೆಸ್ಟರಾಲ್ ವಿರುದ್ಧ ಸೆಣೆಸಾಡಲು ಅಗತ್ಯ ಶಕ್ತಿಯನ್ನೂ ಧಾರಾಳವಾಗಿ ನೀಡುತ್ತದೆ.
ಅಮೆರಿಕದ ತಜ್ಞರೊಬ್ಬರು ಈ ವಿಚಾರವಾಗಿ ಆರು ವರ್ಷ ಮಂಗಗಳ ಮೇಲೆ ಪ್ರಯೋಗ ನಡೆಸಿದರು. ಮಂಗಗಳಿಗೆ ವಿಟಮಿನ್ ಸಿ ಮತ್ತು ಇ ಇರುವ ಪದಾರ್ಥಗಳನ್ನು ಕಡಿಮೆ ನೀಡಿದಾಗ, ಅವುಗಳ ರಕ್ತನಾಳಗಳಿಗೆ ಭಾರಿ ತೊಂದರೆ ಆಗಿತ್ತು. ಅದನ್ನು ಸರಿಪಡಿಸಲು ವಿಟಮಿನ್ ಸಿ ಮತ್ತು ಇ ನೀಡಿದಾಗ ಅಲ್ಪಕಾಲದಲ್ಲೇ ಅತ್ಯುತ್ತಮ ಫಲಿತಾಂಶ ಬಂದಿತ್ತು. ಮಾನವನ ಶರೀರದ ಮೇಲೂ ಇದೇ ಪರಿಣಾಮ ಉಂಟಾಗುತ್ತದೆ ಎನ್ನುವುದನ್ನು ನಂತರದ ಪ್ರಯೋಗಗಳಲ್ಲಿ ಕಂಡುಕೊಂಡರು.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement