ಕಾಡಿನ ರಾಜ
ಸಂಜೆ 6 ಗಂಟೆಯ ಸಮಯ. ಬಂಡಿಪುರದ ರಾಷ್ಟ್ರೀಯ ಉದ್ಯಾನದಲ್ಲಿ ನಮ್ಮ ಸಫಾರಿ.
ಸಂಜೆ 6 ಗಂಟೆಯ ಸಮಯ. ಬಂಡಿಪುರದ ರಾಷ್ಟ್ರೀಯ ಉದ್ಯಾನದಲ್ಲಿ ನಮ್ಮ ಸಫಾರಿ. ನಾವಿದ್ದ ಜೀಪ್ ದಟ್ಟಾರಣ್ಯದ ನಡುವೆ ಹೋಗುತ್ತಿದ್ದಾಗ ಎದುರಿಗೆ ಕಾಡಾನೆಗಳ ಹಿಂಡು. ಆನೆಗಳನ್ನು ನೋಡಲೆಂದು ಚಾಲಕ ಸ್ಥಾನದಲ್ಲಿದ್ದವರು ಜೀಪ್‌ನ ಎಂಜಿನ್ ಆಫ್ ಮಾಡಿ ನಿಲ್ಲಿಸಿದರು. ನಮ್ಮ ಇರುವಿಕೆ ಆನೆಯೊಂದಕ್ಕೆ ಕಿರಿಕಿರಿ ಉಂಟು ಮಾಡಿತು. ಅದು ಕಾಲಿನಿಂದ ನೆಲ ಕೆರೆಯಲು ಶುರು ಮಾಡಿತು. ಆದರೂ ನಾವು ಸ್ಥಳ ಬಿಡದಿದ್ದಾಗ ರೊಚ್ಚಿಗೆದ್ದಿತು. ಏಕಾಏಕಿ ಘೀಳಿಡುತ್ತಾ ನಾವಿದ್ದ ಜೀಪ್‌ನತ್ತ ನುಗ್ಗಿ ಬರತೊಡಗಿತು. ಆಗ ಜೀಪ್‌ನಲ್ಲಿದ್ದ ನಮಗೆ ಜಂಘಾಬಲವೇ ಉಡುಗಿಹೋಗಿ ಮೈ ಬೆವೆತು ಹೋಯಿತು. ಆದರೆ, ಚಾಲಕ ಸ್ಥಾನದಲ್ಲಿದ್ದವರು ಮಾತ್ರ ನಿರಾಳವಾಗಿದ್ದರು. ಸಾರ್ ಜೀಪ್ ಸ್ಟಾರ್ಟ್ ಮಾಡಿ, ಮಾಡಿ ಎಂದು ಗೋಗರೆದರೂ ಅವರು ಕಿವಿಗೆ ಹಾಕಿಕೊಳ್ಳದೆ ತಣ್ಣಗೆ ಕುಳಿತಿದ್ದರು.
ಇನ್ನೇನು ಆನೆ ಜೀಪ್‌ಗೆ ಗುದ್ದಬೇಕು ಎನ್ನುವಷ್ಟರಲ್ಲಿ ಅವರ ಬಾಯಿಂದ ಒಂದು ಆದೇಶ ರೂಪದ ಧ್ವನಿ ಬಂತು. 'ಏಯ್...ಎಲ್ಲಿಗೋ ಬರೋದು, ಓಡು'. ಆವರ ಮಾತಿಗೆ ಬೆಚ್ಚಿದಂತೆ ಆನೆ ಸದ್ದಿಲ್ಲದೆ ನಮಗೆ ಬೆನ್ನು ಹಾಕಿ ಹೋಗಿ ಮೊದಲು ನಿಂತಿದ್ದ ಸ್ಥಳದಲ್ಲೇ ನಿಂತಿತು. ಜೀಪ್ ಚಾಲೂ ಆಗುತ್ತಿದ್ದಂತೆ ಮತ್ತೆ ಆನೆ ದಾಳಿಗೆ ಮುಂದಾಯಿತು. ಆಗಲೂ ಆದೇ ಕಮಾಂಡಿಂಗ್. ಮತ್ತೆ ಆನೆ ಕಾಲ್ಕಿತ್ತಿತು. ಹೋದ ಜೀವ ಬಂದ ಸ್ಥಿತಿಯಲ್ಲಿದ್ದ ನಮಗೆ ಒಂದೆಡೆ ಭಯ ಮತ್ತೊಂದೆಡೆ ಅಚ್ಚರಿ. ಆನೆಗಳು ಹೀಗೂ ಮಾತು ಕೇಳುವುದುಂಟೇ ? ಇಷ್ಟಕ್ಕೂ ಆದೇಶ ಕೊಟ್ಟ ಈ ವ್ಯಕ್ತಿ ಯಾರು?
ಜೀಪ್ ಮುಂದೆ ಸಾಗುತ್ತಿದ್ದಂತೆ ನಾವು ಚಾಲಕ ಸ್ಥಾನದಲ್ಲಿದ್ದವರ ಹಿನ್ನೆಲೆ ಕೆದಕಲು ಶುರು ಮಾಡಿದೆವು. ಆವರ ಹೆಸರು ರಾಜಕುಮಾರ್. ಕಳೆದ 15-20 ವರ್ಷದಿಂದ ಅರಣ್ಯದೊಂದಿಗೆ ಒಡನಾಟ. ಕಾಡಿನಲ್ಲಿ ಯಾವುದೇ ಪ್ರಾಣಿ, ಪಕ್ಷಿ ಕೂಗಿದರೂ ಅದು ಇದೇ ಜಾತಿ. ಇಂಥದ್ದೇ ಕಾರಣಕ್ಕೆ ಕೂಗುತ್ತಿದೆ ಎಂದು ಹೇಳುವ ಚಾಕಚಕ್ಯತೆ ಅವರಲ್ಲಿದೆ. ಮನೆ, ಪತ್ನಿ, ಮಕ್ಕಳನ್ನು ಬಿಟ್ಟು ಕಾಡಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ರಾಜ್‌ಕುಮಾರ್ ಒಂದು ರೀತಿಯಲ್ಲಿ ಸಲೀಂ ಅಲಿ ಇದ್ದಂತೆ. ಸಲೀಂ ಅವರು ತರಗತಿಗಳಿಗೆ ಚಕ್ಕರ್ ಹಾಕಿ ಪಕ್ಷಿಗಳ ಬಗ್ಗೆ ಅಧ್ಯಯನ ನಡೆಸಲು ಹೋಗುತ್ತಿದ್ದರು. ಇವರು ಪದವಿ ಮುಗಿದ ಬಳಿಕ ಪಕ್ಷಿಗಳ ಸಂರಕ್ಷಣೆಗೆ ಪಣತೊಟ್ಟವರು. ಮೈಸೂರಿನ ಡಿ. ರಾಜ್‌ಕುಮಾರ್ ವಾಣಿಜ್ಯ ವಿಭಾಗದಲ್ಲಿ ಪದವಿ ಮುಗಿಸಿ ಅದೇ ಊರಿನಲ್ಲಿ ಪಕ್ಷಿಗಳ ಸಂರಕ್ಷಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರಾರಂಭಿಸಿದರು. ನಂತರ ಕೊಕ್ಕರೆ ಬೆಳ್ಳೂರಿನ ಪಕ್ಷಿಧಾಮಕ್ಕೆ ತೆರಳಿ ಪಕ್ಷಿಗಳ ಬಗ್ಗೆ ಸಂಶೋಧನೆ ಪ್ರಾರಂಭಿಸಿದರು. ದಕ್ಷಿಣ ಭಾರತದಲ್ಲಿ ಪಕ್ಷಿಗಳ ಬಗ್ಗೆ ಸಂಶೋಧನೆ ಮಾಡಿದ ಮೊದಲಿಗರು ಇವರೇ. ಬಂಡೀಪುರಕ್ಕೆ ಬಂದು 20 ವರ್ಷಗಳಿಂದ ಅಲ್ಲೇ ಕಾಡಿನ ಸಮೀಪ ಪುಟ್ಟ ಮನೆ ಮಾಡಿಕೊಂಡು ನೆಲೆಸಿದ್ದಾರೆ.
ಪಕ್ಷಿ ತಜ್ಞ
ಗುಬ್ಬಚ್ಚಿ, ಕೊಕ್ಕರೆ, ಗಿಳಿ, ನವಿಲು ಸೇರಿದಂತೆ ಕೆಲವು ಪಕ್ಷಿಗಳ ಹೆಸರು ಸಾಮಾನ್ಯ ಜನರಿಗೂ ತಿಳಿದಿದೆ. ರೆಡ್ ವ್ಯಾಟೆಲ್ಡ್, ವುಡ್ ಸ್ಯಾಂಡ್‌ಪೀರ್, ಇಂತಹ ಪಕ್ಷಿಗಳ ಹೆಸರೇ ನಮಗೆ ತಿಳಿದಿರುವುದಿಲ್ಲ. ಆದರೆ, ರಾಜ್‌ಕುಮಾರ್ ಅವರು ಪಕ್ಷಿ ನೋಡಿದ ತಕ್ಷಣವೇ ಇಂತಹದ್ದೆ ಪಕ್ಷಿ, ಇದೇ ಜಾತಿಯದ್ದು ಎಂದು ಥಟ್ ಎಂದು ಹೇಳಬಲ್ಲರು. ಇದಕ್ಕಿಂತ ಸ್ವಾರಸ್ಯಕರ ವಿಷಯ ಎಂದರೆ, ಅವರಿಗೆ ಪಕ್ಷಿಗಳ ಮಾತು ಅರ್ಥವಾಗುತ್ತದೆ. ಪಕ್ಷಿಗಳು ಕೂಗುವ ಸದ್ದು ಕೇಳಿ, ಹಸಿವಿನಿಂದ ಕೂಗುತ್ತಿದೆಯೋ, ಮತ್ತೊಂದು ಪಕ್ಷಿಗಾಗಿ ಕೂಗುತ್ತಿದೆಯೋ ಎಂಬವುದನ್ನು ಹೇಳುತ್ತಾರೆ.
ಬೆಂಕಿ ಆಪತ್ತು
ಬೇಸಿಗೆ ಬಂದರೆ ಸಾಕು ಅರಣ್ಯ ಪ್ರದೇಶಕ್ಕೆ ಬೆಂಕಿ ಭಯ. ಬಿಸಿಲಿನ ತಾಪಮಾನದಿಂದ ಒಣಗಿದ ಮರ- ಗಿಡಗಳು ಒಂದರ ಮೇಲೊಂದು ಬಿದ್ದು ಘರ್ಷಣೆ ಉಂಟಾಗಿ ಕಾಡ್ಗಿಚ್ಚು ಉಂಟಾಗುತ್ತದೆ. ಇಂತಹ ಅನಾಹುತ ತಪ್ಪಿಸಲು ರಾಜ್‌ಕುಮಾರ್ ಅವರು ಗಿರಿಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಇಷ್ಟೆಲ್ಲಾ ಕಾರ್ಯನಿರ್ವಹಿಸುತ್ತಿರುವ ರಾಜ್‌ಕುಮಾರ್ ಊಟ, ಬಟ್ಟೆಗೆ ಏನು ಮಾಡುತ್ತಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಇವರು ಅರಣ್ಯ ಸಂರಕ್ಷಣಾ ಸಂಸ್ಥೆಗೆ ಕಾರ್ಯನಿರ್ವಹಿಸುತ್ತಿದ್ದು, ಇವರ ಸಂಪೂರ್ಣ ಖರ್ಚು-ವೆಚ್ಚವನ್ನು ಸಂಸ್ಥೆ ನೋಡಿಕೊಳ್ಳುತ್ತಿದೆ.
- ಲೇಖನ: ದೇವರಾಜ್ ಎಲ್.
djtrupti@gmail.com
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.