ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸೇಬು ತಿನ್ನಿ, ಕೊಲೆಸ್ಟರಾಲ್ ಓಡಿಸಿ

Lingaraj Badiger
Updated On : 3 Jul 2013, 4:15 am

'ಆ್ಯಪಲ್ ಎ ಡೇ, ಕೀಪ್ ಡಾಕ್ಟರ್ ಅವೆ' (ದಿನಕ್ಕೊಂದು ಸೇಬು ತಿನ್ನಿ, ವೈದ್ಯರನ್ನು ದೂರವಿಡಿ) ಎನ್ನುವುದು ಹಳೆ ಮಾತಾಯಿತು. ಈಗ ಏನಿದ್ದರೂ 'ಆ್ಯಪಲ್ ಎ ಡೇ, ಕೀಪ್ ಕೊಲೆಸ್ಟರಾಲ್ ಅವೆ' (ದಿನಕ್ಕೊಂದು ಸೇಬು ತಿನ್ನಿ, ಕೊಲೆಸ್ಟರಾಲ್‌ನಿಂದ ದೂರವಿರಿ) ಎಂಬುದು ಚಾಲ್ತಿಯಲ್ಲಿರುವ ಉಕ್ತಿ. ಸೇಬು ಸ್ವಲ್ಪ ತುಟ್ಟಿ ನಿಜ. ಆದರೆ ಕೊಲೆಸ್ಟರಾಲ್ ಕಡಿಮೆ ಮಾಡಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುವುದಕ್ಕಿಂತ ಇದು ಸುಲಭದ ದಾರಿ ಅಲ್ಲವೆ? 40ರಿಂದ 60 ವರ್ಷ ವಯೋವಾನದವರು ಎರಡು ತಿಂಗಳ ಕಾಲ ದಿನಕ್ಕೊಂದು ಸೇಬು ತಿಂದರೆ ಕೆಟ್ಟ ಕೊಲೆಸ್ಟರಾಲ್ ಅನ್ನು ಶೇ 40ರಷ್ಟು ಕಡಿಮೆ ಮಾಡಿಕೊಳ್ಳಬಹುದು. ಜತೆಗೆ, ಎಚ್‌ಡಿಎಲ್ ಅಂದರೆ ಒಳ್ಳೆ ಕೊಲೆಸ್ಟರಾಲ್ ಅನ್ನೂ ಗಣನೀಯವಾಗಿ ಹೆಚ್ಚಿಸಿಕೊಳ್ಳಬಹುದು. ಇದು ಆರೋಗ್ಯ ಪ್ರಪಂಚದ ಲೇಟೆಸ್ಟ್ ವಿದ್ಯಮಾನ. ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯಂತೂ ಸೇಬು ಹಣ್ಣನ್ನು 'ಮ್ಯಾಜಿಕ್ ಫ್ರುಟ್‌' ಎಂದೇ ಬಣ್ಣಿಸಿದೆ.
ಕೆಲವರ್ಷಗಳ ಹಿಂದೆಯೇ ಫ್ರೆಂಚ್ ಸಂಶೋಧಕರು ಸೇಬು ಹಣ್ಣಿನ ಬಗ್ಗೆ ಸಂಶೋಧನೆ ಕೈಗೊಂಡಿದ್ದರು. ಮಧ್ಯವಯಸ್ಕರನ್ನು ಆಯ್ಕೆ ಮಾಡಿಕೊಂಡು ಅವರಿಗೆ ನಿತ್ಯ 2-3 ಸೇಬು ತಿನ್ನುವಂತೆ ಸಲಹೆ ಮಾಡಿದರು. ಅವರ ನಿತ್ಯದ ಆಹಾರ ಕ್ರಮದಲ್ಲೇನೂ ವ್ಯತ್ಯಾಸ ಮಾಡಿರಲಿಲ್ಲ. ದಿನವೂ ಏನೇನು ತಿನ್ನುತ್ತಿದ್ದರೊ ಅದಕ್ಕೆ ಹೆಚ್ಚುವರಿಯಾಗಿ ಸೇಬು ತಿನ್ನುವುದು ಅಷ್ಟೆ. ಎರಡು ತಿಂಗಳ ನಂತರ ಅವರ ಕೊಲೆಸ್ಟರಾಲ್ ಮಟ್ಟ ಗಣನೀಯವಾಗಿ ಇಳಿದಿತ್ತು. ಅರ್ಧಕ್ಕಿಂತ ಹೆಚ್ಚಿನವರಲ್ಲಿ ಅದು ಶೇ 40ಕ್ಕಿಂತ ಜಾಸ್ತಿ ಇತ್ತು. ಉಳಿದವರಲ್ಲಿ ಎಲ್ಲರಲ್ಲೂ ಈ ಪ್ರಮಾಣ ಶೇ. 10ಕ್ಕಿಂತ ಹೆಚ್ಚಿತ್ತು. ಎಚ್‌ಡಿಎಲ್ ಕೊಲೆಸ್ಟರಾಲ್ ಕೂಡ ಗಮನಾರ್ಹ ರೀತಿಯಲ್ಲಿ ಹೆಚ್ಚಿತ್ತು. ಮಹಿಳೆಯರಿಗಂತೂ ಇದು ರಾಮಬಾಣ. ಸ್ತ್ರೀಯರು ಒಂದು ತಿಂಗಳ ಕಾಲ ದಿನಕ್ಕೊಂದು ಸೇಬು ತಿಂದರೆ ಅವರಲ್ಲಿ ಶೇ 30ರಷ್ಟು ಕೊಲೆಸ್ಟರಾಲ್ ಕಡಿಮೆ ಆಗುತ್ತದೆ. ಈ ಪ್ರಮಾಣ (ಒಂದು ತಿಂಗಳಲ್ಲಿ) ಪುರುಷರಲ್ಲಿ ಸರಾಸರಿ ಶೇ 10. ಆರಂಭದಲ್ಲಿ ಸೇಬು ಬೆಳೆಗಾರರ ಲಾಬಿ ಇಂಥ ಸಂಶೋಧನಾ ವರದಿ ಹಿಂದೆ ಕೆಲಸ ಮಾಡಿದೆ ಎಂದು ಅಪಪ್ರಚಾರ ಮಾಡಲಾಗಿತ್ತು. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಈ ಕುರಿತು ಸಂಶೋಧನೆಗಳು ತೀವ್ರಗೊಂಡಂತೆ ಸೇಬು ಹಣ್ಣಿನ ನಿಜವಾದ ಮೌಲ್ಯ ಅರಿವಿಗೆ ಬಂತು. ಸೇಬುವಿನಲ್ಲಿ ಪೆಕ್ಟಿನ್ ಎನ್ನುವ ರಾಸಾಯನಿಕವಿದೆ. ಅಲ್ಲದೆ ಕರಗುವ ನಾರು ಹೇರಳವಾಗಿದೆ. ಪೆಕ್ಟಿನ್ ಕೆಟ್ಟ ಕೊಲೆಸ್ಟರಾಲ್ ವಿರೋಧಿ. ಎಲ್‌ಡಿಎಲ್ ಕುಸಿಯಲು ಪೆಕ್ಟಿನ್ ಕಾರಣ ಎನ್ನುವುದು ಸಂಶೋಧಕರ ಅಭಿಪ್ರಾಯ.
ಸೇಬು ರಸವನ್ನೂ ಸೇವಿಸಬಹುದು. ಸಕ್ಕರೆ ಬೆರೆಸದಿದ್ದರೆ ಒಳ್ಳೆಯದು. ಬೇಯಿಸಿದ ಸೇಬು, ಸೇಬು ಕುಕ್ಕೀಸ್ ಕೂಡ ತಿನ್ನಬಹುದು. ಹಣ್ಣು ತಿಂದರೆ ಎಷ್ಟು ತೀವ್ರವಾಗಿ ಕೊಲೆಸ್ಟರಾಲ್ ಕಡಿಮೆಯಾಗುತ್ತದೆಯೊ ಆ ವೇಗ ಬೇಯಿಸಿದಾಗ ಅಥವಾ ಕುಕ್ಕೀಸ್‌ನಲ್ಲಿ ಸಿಗುವುದಿಲ್ಲ. ಆ್ಯಪಲ್ ಪೆಕ್ಟಿನ್ ಈಗೀಗ ಮಾತ್ರೆಗಳ ರೂಪದಲ್ಲಿಯೂ ದೊರೆಯುತ್ತಿದೆ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement