ಕರಗುವ ನಾರುಗಳ ಆಗರ ಕ್ಯಾರೆಟ್
ನಮ್ಮ ನಿತ್ಯದ ಆಹಾರ ಕ್ರಮದಲ್ಲಿ ಬಳಸುವ ಹಣ್ಣು, ತರಕಾರಿ, ಬೀಜಗಳಿಂದಲೇ ಕೊಲೆಸ್ಟರಾಲ್ ಅನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎನ್ನುವ ಬಗ್ಗೆ ಹೇಳುತ್ತಿದ್ದೆ. ಎಷ್ಟೇ ತುಟ್ಟಿಯಾದರೂ ಕ್ಯಾರೆಟ್ ಅಥವಾ ಗಜ್ಜರಿಯನ್ನು ಅನ್ನು ಬಹುತೇಕ ಎಲ್ಲರೂ ಖರೀದಿಸುತ್ತಾರೆ. ಪಲ್ಯ, ರೈಥಾ, ಸಾಂಬಾರ್, ಕೋಸಂಬರಿ ಎಲ್ಲದಕ್ಕೂ ಇದು ಹೊಂದಿಕೊಳ್ಳುತ್ತದೆ. ಮಕ್ಕಳಿಗೆ ಹಾಗೆಯೇ ಹೆಚ್ಚಿ ಕೊಟ್ಟರೂ ಖುಷಿಯಿಂದ ತಿನ್ನುತ್ತಾರೆ. ಮದ್ಯಪಾನದ ಚಟಕ್ಕೆ ಬಿದ್ದವರನ್ನು ಅದರಿಂದ ಹೊರಬರುವಂತೆ ಮಾಡಲೂ 'ಕ್ಯಾರೆಟ್ ಥೆರಪಿ'ಯನ್ನು ಕೆಲವೆಡೆ ಬಳಸುವುದುಂಟು. ಇಂಥ ಕ್ಯಾರೆಟ್ ಕೆಟ್ಟ ಕೊಲೆಸ್ಟರಾಲ್‌ನ ಕಡು ವಿರೋಧಿ. ನಿತ್ಯ ಕ್ಯಾರೆಟ್ ತಿನ್ನುವ ಅಭ್ಯಾಸವನ್ನು ಇಟ್ಟುಕೊಂಡರೆ ಕೊಲೆಸ್ಟರಾಲ್ ಚಿಂತೆಯಿಂದ ಸುಲಭವಾಗಿ ಮುಕ್ತಿ ಪಡೆಯಬಹುದು. ನಾವು ಈಗಾಗಲೇ ತಿಳಿದಿರುವ ಸೇಬು, ಸ್ಟ್ರಾಬೆರಿ ಮೊದಲಾದವುಗಳಂತೆ ಇದು ಕೂಡ ಕೆಟ್ಟ ಕೊಲೆಸ್ಟರಾಲ್ ಅನ್ನು ಗಣನೀಯವಾಗಿ ಕಡಿಮೆ ಮಾಡುವುದರ ಜತೆಗೆ ಒಳ್ಳೆ ಕೊಲೆಸ್ಟರಾಲ್ ಅನ್ನು ಹೆಚ್ಚಿಸುತ್ತದೆ.
ಕ್ಯಾರೆಟ್‌ನಲ್ಲಿ ಸೇಬುವಿನಲ್ಲಿರುವಂತೆ ಪೆಕ್ಟಿನ್ ಇದೆ. ಕರಗುವ ನಾರುಗಳಂತೂ ಹೇರಳವಾಗಿವೆ. ಇವೇ ಕೆಟ್ಟ ಕೊಲೆಸ್ಟರಾಲ್ ತಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ದಿನಕ್ಕೆ ಎರಡು ಸಾಧಾರಣ ಗಾತ್ರದ ಕ್ಯಾರಟ್ ಅನ್ನು ನಾಲ್ಕು ವಾರ ತಿಂದರೆ ಎಲ್‌ಡಿಎಲ್ ಕೊಲೆಸ್ಟರಾಲ್ ಶೇ 10ರಿಂದ 20ರಷ್ಟು ಕಡಿಮೆಯಾಗುತ್ತದೆ. ಇದನ್ನು ಪ್ರಯೋಗಗಳ ಮೂಲಕ ದೃಢಪಡಿಸಿರುವವರು ಅಮೆರಿಕದ ಕೃಷಿ ಇಲಾಖೆ ಪೂರ್ವ ವಲಯ ಪ್ರಾದೇಶಿಕ ಸಂಶೋಧನಾ ಕೇಂದ್ರದ ಡಾ.ಫಿಲಿಪ್ ಫೆಪ್ಪರ್. ಕೆಟ್ಟ ಕೊಲೆಸ್ಟರಾಲ್ ತೀರಾ ಹೆಚ್ಚಾಗಿರುವವರು ಕೂಡ ಮತ್ತೇನೂ ಮಾಡುವುದು ಬೇಡ, ದಿನಕ್ಕೆರಡು ಕ್ಯಾರೆಟ್ ಸೇವಿಸಿದರೆ ಸಾಕು. ಕೆಲವು ದಿನಗಳಲ್ಲಿಯೇ ಕೊಲೆಸ್ಟರಾಲ್ ಮಟ್ಟ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಎನ್ನುತ್ತಾರೆ ಅವರು. ಸ್ವತಃ ತಮ್ಮನ್ನೂ ಪ್ರಯೋಗಕ್ಕೆ ಒಡ್ಡಿಕೊಂಡು ಸತ್ಯ ಕಂಡುಕೊಂಡ ಬಳಿಕವೇ ಅವರು ಹೆಚ್ಚಿನ ಸಂಶೋಧನೆಗೆ ಮುಂದಾದದ್ದು. ನಾಲ್ಕು ವಾರಗಳಲ್ಲಿ ತಮ್ಮ ಎಲ್‌ಡಿಎಲ್ ಕೊಲೆಸ್ಟರಾಲ್‌ಶೇ 20ರಷ್ಟು ಕಡಿಮೆಯಾಗಿತ್ತು ಎಂದು ಹೇಳಿಕೊಂಡಿದ್ದಾರೆ ಅವರು. ಜರ್ಮನಿ ಮತ್ತು ಕೆನಡಾಗಳಲ್ಲಿ ನಡೆದ ಪ್ರಯೋಗಗಳು ಕೂಡ ಇದೇ ಫಲಿತಾಂಶವನ್ನು ನೀಡಿವೆ.
ಕ್ಯಾರೆಟ್ ಅನ್ನು ಹೇಗೆ ಬೇಕಾದರೂ ತಿನ್ನಬಹುದು. ಹಸಿಯಾಗಿಯೂ ಸೇವಿಸಬಹುದು. ಬೇಯಿಸಿ ತಿನ್ನಬಹುದು. ರಸ ಮಾಡಿಕೊಂಡು ಕುಡಿಯಬಹುದು. ರಸವನ್ನು ಫ್ರಿಡ್ಜ್‌ನಲ್ಲಿಟ್ಟುಕೊಂಡು ಬೇಕಾದರೂ ಕುಡಿಯಬಹುದು. 'ಹೇಗೆ ತಿನ್ನುತ್ತೀರಿ ಎನ್ನುವುದು ಮುಖ್ಯವಲ್ಲ. ದಿನಕ್ಕೆ ಸರಾಸರಿ ಎರಡು ಕ್ಯಾರೆಟ್ ನಿಮ್ಮ ದೇಹ ಪ್ರವೇಶಿಸುವುದು ಮುಖ್ಯ ಮತ್ತು ಕನಿಷ್ಠ ನಾಲ್ಕು ವಾರವಾದರೂ ಇದನ್ನು ಮುಂದುವರಿಸುವುದು ಅಗತ್ಯ' ಎನ್ನುತ್ತಾರೆ ಡಾ.ಫಿಲಿಪ್.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com