ಗುರು ಮಾರ್ಗ ತೋರಿದ ನರೇಂದ್ರ
1885ರ ಬೇಸಿಗೆಯಲ್ಲಿ ರಾಮಕೃಷ್ಣರಿಗೆ ಗಂಟಲನೋವು ಕಾಣಿಸಿಕೊಂಡಿತು. ಉಷ್ಣಕ್ಕಿರಬಹುದೆಂದು ಭಾವಿಸಿದರು. ಆದರೆ ಅದು ದಿನದಿಂದ ದಿನಕ್ಕೆ ಹೊಸ ರೂಪ ತಾಳುತ್ತ, ಪರಿಸ್ಥಿತಿ ಗಂಭೀರವಾಯಿತು. ಇದರಿಂದ ಭಕ್ತರೆಲ್ಲ ಆತಂಕಗೊಂಡರು. ಒಂದು ದಿನ ಅವರ ಗಂಟಲಿನಿಂದ ರಕ್ತಸ್ರಾವವಾಯಿತು. ಭಕ್ತರೆಲ್ಲ ಬೆಚ್ಚಿದರು. ನರೇಂದ್ರ ರಾಮಕೃಷ್ಣರ ದೇಹಸ್ಥಿತಿಯನ್ನು ಗಮನಿಸಿ ತನ್ನ ಸ್ನೇಹಿತರಿಗೆ ಹೇಳಿದ, 'ಬಹುಶಃ ನಮ್ಮೆಲ್ಲರ ಪ್ರೀತಿಪಾತ್ರವಾದ ವಸ್ತು ನಮ್ಮ ಕೈತಪ್ಪಿ ಹೋಗುತ್ತದೆ ಅಂತ ನನಗನ್ನಿಸುತ್ತಿದೆ. ವೈದ್ಯ ಸ್ನೇಹಿತರು ಹೇಳುವ ಪ್ರಕಾರ ಇದು ಕ್ಯಾನ್ಸರ್ಗೆ ತಿರುಗಿಕೊಂಡರೂ ಆಶ್ಚರ್ಯವಿಲ್ಲ.'
ಭಕ್ತರೆಲ್ಲ ಗುರುಸೇವೆಯಲ್ಲಿ ತೊಡಗಿಕೊಂಡರು. ಪವಾಡವನ್ನೇನಾದರೂ ಎಸಗಬಹುದೆಂಬ ನಿರೀಕ್ಷೆಯಲ್ಲೇ ಭಕ್ತರಿದ್ದರು. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದ ನರೇಂದ್ರ, ಭಕ್ತರೆಲ್ಲ ಭಾವಾವೇಶಕ್ಕೆ ಬಲಿಯಾಗುತ್ತಿರುವುದರ ಅಪಾಯವನ್ನು ನಿಚ್ಚಳವಾಗಿ ಕಂಡುಕೊಂಡ. ಪರಿಸ್ಥಿತಿ ವಿಕೋಪಕ್ಕಿಳಿಯುವುದನ್ನು ತಡೆಯಲು ಮುಂದಾದ. 'ಯಾವನು ಭಗವಂತನನ್ನು ನಿಜವಾಗಿಯೂ ಪ್ರೀತಿಸುತ್ತಾನೆಯೋ ಅಂಥವನ ಜೀವನವೂ ಸ್ವಯಂ ಭಗವಂತನ ರೀತಿಯಲ್ಲಿಯೇ ರೂಪುಗೊಳ್ಳುತ್ತದೆ. ಎಂದರೆ ಆ ದೈವೀ ಗುಣಗಳು ಅವನಲ್ಲೂ ಪ್ರಕಟಗೊಳ್ಳುತ್ತವೆ. ಆದ್ದರಿಂದ ಅವರಲ್ಲಿ ನಿಜವಾದ ಭಕ್ತಿ-ಪ್ರೀತಿ ಇರುವುದಾದಲ್ಲಿ, ನಾವು ಅವರ ಪರಮಾದ್ಭುತ ಗುಣವಿಶೇಷಗಳನ್ನು ಕಿಂಚಿತ್ತಾದರೂ ಅಳವಡಿಸಿಕೊಂಡು ತೋರಿಸಬೇಕು!' ಎಂದು ಅಂಧಶ್ರದ್ಧೆಯ ಮೌಢ್ಯಕ್ಕಿಳಿಯುವುದನ್ನು ತಪ್ಪಿಸಿ ಗುರುಮಾರ್ಗ ತೋರಿದ.
-ಆನಂದ ಎಸ್.ಎನ್.
anandsn193@gmail.com