ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ತಾಯಿ ದೀಪ

ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿ ಜನಿಸಿದ ಮೀನಾ ಅವರ ಬಾಲ್ಯ ಸುಂದರವಾಗಿತ್ತು. ಹೆಂಗಳೆಯರ ನಡುವೆ ಉದ್ದ ಜಡೆಯ...

Lingaraj Badiger
Updated On : 5 Jul 2013, 7:00 am

ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿ ಜನಿಸಿದ ಮೀನಾ ಅವರ ಬಾಲ್ಯ ಸುಂದರವಾಗಿತ್ತು. ಹೆಂಗಳೆಯರ ನಡುವೆ ಉದ್ದ ಜಡೆಯ ಅಂದಗಾತಿಯಾಗಿ ಎದ್ದು ಕಾಣುತ್ತಿದ್ದರು. ಯಾರೀಕೆ ಎಂದು ಮತ್ತೊಮ್ಮೆ ಕಣ್ಣರಳಿಸಿ ನೋಡುವವರಿಗೆ ಆಗ ಕೊರತೆ ಇರಲಿಲ್ಲ.
70- 80ರ ದಶಕದಲ್ಲಿ ಖ್ಯಾತ ಖಳನಾಯಕ ಪಾತ್ರಧಾರಿ ತೂಗುದೀಪ ಶ್ರೀನಿವಾಸ್ ಕಣ್ಣಿಗೆ ಬಿದ್ದಿದ್ದೇ ತಡ...  ಈ ಯುವತಿಯನ್ನಲ್ಲದೆ ಮತ್ತಾರನ್ನೂ ನಾ ಮದುವೆಯಾಗಲಾರೆ ಎಂದು ಶಪಥ ತೊಟ್ಟು ಬಿಟ್ಟರು. ತಂದೆ- ತಾಯಿಯ ಮಾತಿಗೆ ಎದುರಾಡದೆ, 19ರ ಹರೆಯದಲ್ಲಿಯೇ ಮೀನಾ ಅವರು ದಾಂಪತ್ಯದ ಮನೆಗೆ ನಡೆದುಬಿಟ್ಟರು.

ಬೆಳ್ಳಿಪರದೆಯಲ್ಲಿ ಭಯ ಹುಟ್ಟಿಸುವ ಖಳನಾಯಕನಾದರೂ ಅಂತರಂಗದಲ್ಲಿ ಮಗುವಿನಂತಹಾ ಸ್ವಭಾವ ಹೊಂದಿದ್ದ, ಕಷ್ಟಜೀವಿ ತೂಗುದೀಪ ಶ್ರೀನಿವಾಸ್ ಬಾಳಿನಲ್ಲಿ ಹೊಸ ಬೆಳಕಾಗಿ ಬಂದ ಕೆಲವೇ ವರ್ಷಗಳಲ್ಲಿ ಮುದ್ದು ಮುದ್ದು ಮೂರು ಕಂದಮ್ಮಗಳಿಗೆ ಮೀನಾ ತಾಯಿಯಾದರು. ಹಿರಿಮಗಳು ದಿವ್ಯಾ, ನಂತರ ದರ್ಶನ್, ಕೊನೆಯ ಮಗನಾಗಿ ದಿನಕರ್.
ಪೊನ್ನಂಪೇಟೆಯ ದಿ.ಟಿ.ಎನ್. ನಾರಾಯಣ ಸ್ವಾಮಿ ನಾಯ್ಡು ಹಾಗೂ ದಿ. ಲಕ್ಷ್ಮಮ್ಮ ಅವರ ಐವರು ಪುತ್ರರು, ನಾಲ್ವರು ಪುತ್ರಿಯರಲ್ಲಿ ಮೀನಾ ಹಿರಿಯ ಹಾಗೂ ಅಪ್ಪನ ಪ್ರೀತಿಯ ಮಗಳು. ಪೊನ್ನಂಪೇಟೆ ಸರ್ಕಾರಿ  ಶಾಲೆಯಲ್ಲಿಯೇ ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಪಿಯುಸಿ ಮುಗಿಸುತ್ತಿದ್ದಂತೆಯೇ ಕಂಕಣ ಭಾಗ್ಯ. 1973ರಲ್ಲಿ ಮೈಸೂರಿನಲ್ಲಿ ತೂಗುದೀಪ ಶ್ರೀನಿವಾಸ್ ಅವರೊಂದಿಗೆ ವಿವಾಹ.

ಮಾದರಿ  ತಾಯಿ ಪ್ರಶಸ್ತಿ
ಬೆಂಗಳೂರಿನ ಸ್ವರ ಸನ್ನಿಧಿ ಟ್ರಸ್ಟ್‌ನಿಂದ 2013ರ ಏ. 23ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 'ಅಪ್ಪ ಅವ್ವ ನಮ್ಮ ದೈವ' ಶಿರೋನಾಮೆಯಡಿ ಮೀನಾ ಅವರಿಗೆ 'ಮಾದರಿ ತಾಯಿ' ಪ್ರಶಸ್ತಿ ನೀಡಲಾಗಿದೆ. ಪತಿ ತೂಗುದೀಪ ಅವರ ಕಿಡ್ನಿ ವೈಫಲ್ಯಗೊಂಡಾಗ ತನ್ನ ಒಂದು ಕಿಡ್ನಿಯನ್ನೇ ಪತಿಗೆ ನೀಡಿ ಕೆಲವು ತಿಂಗಳು ಅವರನ್ನು ಉಳಿಸಿಕೊಂಡು ಬಂದಿದ್ದರು. ಪತಿ ಮರಣ ಹೊಂದಿದ ನಂತರ ಮೈಸೂರು ಸಿದ್ಧಾರ್ಥ ಬಡಾವಣೆಯ ನೀತಿ ಮಾರ್ಗದಲ್ಲಿ 'ತೂಗುದೀಪ' ಹೆಸರಿನ ಮನೆಯೊಂದು ಹೊರತು ಪಡಿಸಿದರೆ, ಕೈಯಲ್ಲಿ ಬಿಡುಗಾಸೂ ಇರಲಿಲ್ಲ. ಮೂವರು ಮಕ್ಕಳ ಭವಿಷ್ಯ ಕಣ್ಣ ಮುಂದೆ ಭಯ ಹುಟ್ಟಿಸುವಂತಿತ್ತು. ಆದರೆ ಅವರು ಬದುಕನ್ನು ಸವಾಲಾಗಿ ಸ್ವೀಕರಿಸಿದರು.

ಪತಿ ಶ್ರೀನಿವಾಸ್ ಸುಮಾರು 350 ಚಿತ್ರಗಳಲ್ಲಿ ನಟಿಸಿದ್ದರೂ ಯಾರ ನೆರವಿಗಾಗಿಯೂ ಕೈ ಚಾಚದ ಸ್ವಾಭಿಮಾನಿ. ಮೀನಾ ಸಮಾಜವನ್ನು ದಿಟ್ಟತನದಿಂದ ಎದುರಿಸಿದರು. ಈ ಹಂತದಲ್ಲಿಯೇ ಪದವಿ ಮುಗಿಸಿದ ಮಗಳು ದಿವ್ಯಾ ಮದುವೆಯನ್ನು ಅದ್ಧೂರಿಯಾಗಿಯೇ ನೆರವೇರಿಸಿ ಕಾರವಾರದ ಪತಿ ಮನೆಗೆ ಕಳುಹಿಸಿಕೊಟ್ಟರು. ಇನ್ನು ಎರಡು ಕಣ್ಣಿನಂತಿರುವ ದರ್ಶನ್ ಹಾಗೂ ದಿನಕರ್ ಭವಿಷ್ಯ.

ಮಗನಿಗಾಗಿ ಅಲೆದಾಟ
ಬೆಳೆದು ನಿಂತ ಮಗ ದರ್ಶನ್‌ಗೆ ನಟಿಸಲು ಅವಕಾಶ ಸಿಗಲಿಲ್ಲ. ಕಿರುತೆರೆ, ಫ್ಯಾಷನ್ ಶೋಗಳಲ್ಲಿ ಭಾಗವಹಿಸುತ್ತಿದ್ದ ದರ್ಶನ್ ಪ್ರಾಣಿ- ಪಕ್ಷಿಗಳನ್ನು ಸಾಕುತ್ತಲೇ ಬೆಳೆದು ನಿಂತ. ಅಂತೂ ಇಂತೂ ಮೈಸೂರಿನಲ್ಲೇ ಕುಳಿತರೆ ತನ್ನ ಮಗ ನಟನಾಗುವದಿಲ್ಲ ಎಂದು ಭಾವಿಸಿದ ತಾಯಿ ಬೆಂಗಳೂರಿಗೆ ಬಂದು ಮಗನನ್ನು ನಾಯಕನನ್ನಾಗಿಸಲು ಅಲೆದಾಟ ಆರಂಭಿಸಿದರು.
ಆರಂಭದಲ್ಲಿ ನಿರಾಶೆ ಕಾಡಿತು. ಈ ಹಂತದಲ್ಲಿ 'ಮೆಜೆಸ್ಟಿಕ್‌' ಚಿತ್ರ ನಿರ್ಮಾಣಕ್ಕೆ ಮನಸ್ಸು ಮಾಡಿದರು. ಮೊದಲ ಚಿತ್ರವೇ ದರ್ಶನ್‌ನನ್ನು ಗೆಲ್ಲಿಸಿತು. ದುಃಖದಲ್ಲಿ ಮುಳುಗಿದ್ದ ಮನೆಯಲ್ಲಿ ಸಂತಸದ ಮಿಂಚೊಂದು ಫಳ್ಳನೆ ಪ್ರಕಾಶಿಸಿತು. ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿ ಆಸರೆ ಎಂಬಂತೆ ಮೀನಾ ತಮ್ಮ ಪ್ರತಿಭೆಯನ್ನೆಲ್ಲಾ ಧಾರೆ ಎರೆದು ದರ್ಶನ್‌ನನ್ನು ಕರ್ನಾಟಕ ಚಲನಚಿತ್ರರಂಗದ ಯಶಸ್ವಿ ಹಾಗೂ ನಿರ್ಮಾಪಕನ ಕಿಸೆಗೆ ಮೋಸ ಮಾಡದ ಗ್ಯಾರಂಟಿ ನಟನನ್ನಾಗಿ ಮಾಡಿದರು.

ದಿನಕರ್ ಸರದಿ
ಅಗಾಧ ಪ್ರತಿಭೆಯ ದಿನಕರ್ ತೂಗುದೀಪನನ್ನು ನಿರ್ದೇಶಕನನ್ನಾಗಿ ಮಾಡಿ ಯಶಸ್ವಿಯಾದರು. 'ಜೊತೆಜೊತೆಯಲಿ' ಸಿನೆಮಾ ಮೂಲಕ ನಿರ್ದೇಶಕನಾಗಿ ದಿನಕರ್ ಬಡ್ತಿ ಹೊಂದಿದರು. ಎಲ್ಲರನ್ನೂ ಯಶಸ್ಸಿನ ದಡ ಸೇರಿಸಿಯಾಯಿತು. ಮೊಮ್ಮಕ್ಕಳ ಭಾಗ್ಯವನ್ನೂ ಕಂಡಿದ್ದಾಯಿತು. ಕೈಕಟ್ಟಿ ಕೂರುವ ಜಾಯಮಾನ ಮೀನ ಅವರದಲ್ಲ. ಯಶಸ್ವಿ ಚಿತ್ರ ನಿರ್ಮಾಪಕಿಯಾಗಿ ಕನ್ನಡ ಚಲನ ಚಿತ್ರರಂಗದಲ್ಲಿ ಇದೀಗ ಛಾಪು ಒತ್ತಿದ್ದಾರೆ. ಜೊತೆಗೆ ನವಗ್ರಹ, ಬುಲ್‌ಬುಲ್, ಇದೀಗ ಒಂದೂರಿನಲ್ಲಿ ಒಬ್ಬ ರಾಜನಿದ್ದ (ನಾಯಕ ದಿಗಂತ್) ಚಿತ್ರ ನಿರ್ಮಾಣದಲ್ಲಿ ಬ್ಯುಸಿ. ಕೊಡಗು ಧೈರ್ಯಕ್ಕೆ- ಶೌರ್ಯಕ್ಕೆ ಹೆಸರಾದ ಜಿಲ್ಲೆ ಪೊನ್ನಂಪೇಟೆಯ ಸ್ವಾಭಿಮಾನಿ ಹೆಣ್ಣು ಮಗಳೊಬ್ಬಳ ಸಾಹಸ ಗಾಥೆ ಎಂದರೂ ತಪ್ಪಾಗಲಾರದು.

7ರಂದು ಮೀನಾಗೆ ಸನ್ಮಾನ
ವಿರಾಜಪೇಟೆ ತಾಲೂಕು ಬಲಿಜ ಸಮಾಜದ ವತಿಯಿಂದ ವಿರಾಜಪೇಟೆ ಮಹಿಳಾ ಸಮಾಜದಲ್ಲಿ ಜು.7ರಂದು ಮೀನಾ ತೂಗುದೀಪ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಗುತ್ತಿದೆ.

- ಟಿ.ಎಲ್.ಶ್ರೀನಿವಾಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments