ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಯಾರ್ಯಾಕೆ ಹೇಳಬೇಕು?

Lingaraj Badiger
Updated On : 5 Jul 2013, 4:26 am

ಕೆಲವರನ್ನು ನೋಡಿ, ಯಾವಾಗಲೂ 'ತಾನು ಹಾಗೆ, ಹೀಗೆ' ಎಂದು ಹೇಳಿಕೊಳ್ಳುತ್ತಲೇ ಇರುತ್ತಾರೆ. ಇಂಥವರು ತಮ್ಮನ್ನು ತಾವೇ ಹೊಗಳಿಕೊಳ್ಳುವವರಂತೆ ಕಾಣಬಹುದು. ಆದರೆ, ಅವರು ಬೇರೆಯವರಿಂದಲೂ ಹೊಗಳಿಕೆಗೆ ಕಾಯುತ್ತಿದ್ದಾರೆ ಎಂಬುದರ ಸೂಚನೆಯೂ ಹೌದು. ಯಾರೇ ಸಿಕ್ಕರೂ ಬಲವಂತದಿಂದ ಮಾತಿಗೆ ಎಳೆದು ಅದು ಇದೂ ಮುಗಿದ ಬಳಿಕ ಮೆಲ್ಲಗೆ ತಮ್ಮ ವಿಚಾರ, ತಮ್ಮ ಹೆಗ್ಗಳಿಕೆಯ ಬಗ್ಗೆ ಶುರು ಹಚ್ಚಿಕೊಳ್ಳುತ್ತಾರೆ. ಆ ಬಗ್ಗೆ ತಾನು ಹತ್ತು ಮಾತನಾಡಿದರೆ ಕನಿಷ್ಠ ಒಂದಾದರೂ ಹೊಗಳಿಕೆ ಎದುರಿನವರಿಂದ ಬಂದೇ ಬರುತ್ತದೆ ಎಂಬ ನಂಬಿಕೆ ಅಂಥವರದ್ದು. ಇಂಥ ಸ್ವಭಾವ ಮೇಲಧಿಕಾರಿಗಳಲ್ಲಿ, ನಾಯಕನೆನಿಸಿಕೊಂಡವರಲ್ಲಿ ಇದ್ದರಂತೂ ಮುಗಿದೇ ಹೋಯಿತು. ಅವರಿಂದ ಏನು ಬೇಕಾದರೂ ಮಾಡಿಸಿಕೊಳ್ಳಬಹುದು. ಒಂದೇ ಒಂದು ಹೊಗಳಿಕೆಯ ಮಾತಿಗೆ ಉಬ್ಬಿ ನಿಮ್ಮ ಮುಲಾಜಿಗೆ ಅವರು ಬಿದ್ದು ಬಿಟ್ಟಿರುತ್ತಾರೆ. ನಿಜಕ್ಕೂ ಇಂಥ ನಾಯಕತ್ವ ತೀರಾ ಅಪಾಯಕಾರಿ. ತಾವು ಹೊಗಳಿಕೆಗೆ ಬಗ್ಗುವವರಲ್ಲ ಎಂದು ಹೇಳಿಕೊಳ್ಳುತ್ತಲೇ ಅದಕ್ಕೆ ಅವರು ಪಕ್ಕಾಗುತ್ತಾರೆ. ಬೇಕಿದ್ದರೆ ಗಮನಿಸಿ, ಅಂಥವರು ತಮ್ಮನ್ನು ತುಂಬ ಸೂಕ್ಷ್ಮ, ಸಂಕೋಚದ ಸ್ವಭಾವದವರು ಎಂದುಕೊಂಡುಬಿಟ್ಟಿರುತ್ತಾರೆ. ಆದರೆ ಒಳಗೊಳಗೇ ಎಲ್ಲವನ್ನೂ ಅಪೇಕ್ಷಿಸುತ್ತಲೇ ಇರುತ್ತಾರೆ. ಜನ ತನ್ನನ್ನು ಆದರಿಸಿಲ್ಲ, ಹೊಗಳಲಿಲ್ಲ ಎಂಬುದಕ್ಕೇ ನೊಂದುಕೊಳ್ಳುತ್ತಾರೆ. ಹಾಗಿದ್ದ ಮಾತ್ರಕ್ಕೆ ಅವರದು ಸೂಕ್ಷ್ಮ ಮನಸ್ಸು ಎಂದೇನೂ ಅಲ್ಲ. ಅಸಲಿಗೆ ಸೂಕ್ಷ್ಮ ಮನಸ್ಸೆಂದರೆ ಎಲ್ಲದಕ್ಕೂ ಕೊರಗುತ್ತ, ಹೊಗಳಿಕೆ ಅಪೇಕ್ಷಿಸುತ್ತ, ಸಣ್ಣಪುಟ್ಟ ನಿಂದನೆಗೂ ನೋಯುತ್ತ ಕುಳಿತಿರುವುದು ಅಲ್ಲವೇ ಅಲ್ಲ. ಅಂಥವರು ಸೂಕ್ಷ್ಮಮತಿಗಳು ಹೇಗಾಗುತ್ತಾರೆ? ನಿಜವಾಗಿ ನೋಡಿದರೆ ಅವರಿಗೆ ಬದುಕನ್ನು ತುಂಬ ಜವಾಬ್ದಾರಿಯುತವಾಗಿ ಪರಿಗಣಿಸಲು ಬರುವುದಿಲ್ಲ. ನೆನಪಿಡಿ, ಜವಾಬ್ದಾರಿ ನಿಭಾಯಿಸಲು ಘನ ಗಂಭೀರವಾಗಿಯೇ ಇರಬೇಕೆಂದಿಲ್ಲ. ತಾವೂ ಸಮಾಧಾನದಿಂದಿದ್ದು, ನಲಿನಲಿಯುತ್ತ ಇತರರನ್ನೂ ನಲಿಸುವುದಿದದೆಯಲ್ಲಾ, ಅದು ನಿಜವಾದ ಸೂಕ್ಷ್ಮತೆ. ತಮ್ಮ ಜವಾಬ್ದಾರಿಯನ್ನು ಮುಲಾಜಿಲ್ಲದೇ ನಿಭಾಯಿಸಬಲ್ಲ, ಹೊಗಳಿಕೆಗೆ ಕಾಯದೇ ತಮ್ಮ ಕೆಲಸವನ್ನು ತಾವು ಅಚ್ಚುಕಟ್ಟಾಗಿ ಮಾಡುವವರು. ಅದರಲ್ಲಿ ತುಸು ವ್ಯತ್ಯಾಸವಾದರೂ ನೊಂದುಕೊಳ್ಳುವವರು ಅಲ್ಲವೇ ನಿಜವಾದ ಸೂಕ್ಷ್ಮ ಮನಸ್ಸಿನವರು? ಅವರಿಗೆ ಬೇರೆಯವರಿಂದ ಕಾಂಪ್ಲಿಮೆಂಟ್ ಬೇಕಾಗಿರುವುದಿಲ್ಲ. ಅವರ ಮನಸ್ಸು ಯಾವಾಗಲೂ ಉಲ್ಲಸಿತವಾಗಿರುತ್ತದೆ. ತಾವು ಮಾಡುವ ಕೆಲಸದಿಂದಲೇ ಕ್ಷಣಕ್ಷಣವೂ ಉತ್ಸಾಹ ಪಡೆದುಕೊಳ್ಳುತ್ತಿರುತ್ತಾರೆ. ಅಂಥ ಉತ್ಸಾಹ ಎಲ್ಲರಲ್ಲೂ ಮೂಡಿದರೆ ಅದಕ್ಕಿಂತ ಇನ್ನೇನು ಬೇಕು?

-ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement