ಸ್ಥೂಲ ನೋಟ
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಅತಿ ಬೊಜ್ಜು ಸಾಮಾನ್ಯ, ಅಲ್ಲಿ ಚಿಕ್ಕ ಮಕ್ಕಳಿಗೂ ಇದು ತಪ್ಪಿದ್ದಲ್ಲ ಎಂಬ ವರದಿಗಳನ್ನು ಓದುತ್ತಿರುತ್ತೇವೆ.
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಅತಿ ಬೊಜ್ಜು ಸಾಮಾನ್ಯ, ಅಲ್ಲಿ ಚಿಕ್ಕ ಮಕ್ಕಳಿಗೂ ಇದು ತಪ್ಪಿದ್ದಲ್ಲ ಎಂಬ ವರದಿಗಳನ್ನು ಆಗಾಗ ಓದುತ್ತಿರುತ್ತೇವೆ. ವಿಪರ್ಯಾಸವೆಂದರೆ, ಇಂದು ಭಾರತದಲ್ಲಿ ಕೂಡಾ ದಢೂತಿ ದೇಹದವರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೀವನ ಶೈಲಿ ಬದಲಾವಣೆ, ಜಂಕ್‌ಫುಡ್ ಸೇವನೆಯಿಂದ ಬೊಜ್ಜು ಎಲ್ಲರ ದೇಹದಲ್ಲೂ ಮನೆ ಮಾಡುತ್ತಿದೆ. ಇದು ಮಧುಮೇಹ, ಹೃದಯ ಕಾಯಿಲೆಗಳಿಗೂ ದಾರಿ ಮಾಡಿಕೊಟ್ಟಂತೆ. ಆದರೆ ಬೊಜ್ಜು ಮಹಿಳೆಯರಲ್ಲಿ ಬಂಜೆತನಕ್ಕೂ ಕಾರಣವಾಗುತ್ತಿರುವುದು ಮತ್ತು ಅಂಥವರ ಸಂಖ್ಯೆ ಏರುತ್ತಿರುವುದು ಗಂಭೀರ ವಿಷಯ.
ಬೊಜ್ಜು ಮೈಯಿರುವ ಮಹಿಳೆಯರು ಕೇಳುವ ಪ್ರಶ್ನೆಯೊಂದಿದೆ- ನನ್ನ ಬೊಜ್ಜುತನದಿಂದ ನನಗೆ ಮಕ್ಕಳಾಗುವುದಕ್ಕೆ ತೊಂದರೆಯಾಗುತ್ತದೆಯಾ ಎಂದು. ಇದಕ್ಕೆ ಉತ್ತರ- ಹೌದು. ಶರೀರದ ಅಧಿಕ ತೂಕ ಮತ್ತು ಬೊಜ್ಜು ಮಹಿಳೆಯ ಫಲವತ್ತತೆ ಮೇಲೆ ಪರಿಣಾಮ ಬೀರುವ ಎರಡು ಪ್ರಮುಖ ಅಂಶಗಳು.
ಅಧ್ಯಯನಗಳ ಪ್ರಕಾರ, ಶೇ.40ರಷ್ಟು ಬೊಜ್ಜು ಮೈಯ ಮಹಿಳೆಯರಿಗೆ ಸಂತಾನ ಭಾಗ್ಯ ಕಾಣುವುದು ಕಷ್ಟವಾಗುತ್ತಿದೆ. ದೇಹದ ಬಿಎಂಐ (ಬಾಡಿ ಮಾಸ್ ಇಂಡೆಕ್ಸ್) 10ಕ್ಕಿಂತ ಕಡಿಮೆ ಇದ್ದರೆ ಅಥವಾ 28ಕ್ಕಿಂತ ಹೆಚ್ಚಾಗಿದ್ದರೂ ಫಲವತ್ತತೆಗೆ ತೊಂದರೆ. ಅಕಸ್ಮಾತ್ ಗರ್ಭಧಾರಣೆ ಆದರೂ ಗರ್ಭಪಾತವಾಗುವ ಸಂಭವ ಹೆಚ್ಚು.
ಬೇರೆ ಎಲ್ಲಾ ರೀತಿಯಲ್ಲೂ ಆರೋಗ್ಯವಾಗಿದ್ದು, ಸಮರ್ಪಕವಾಗಿ ಅಂಡಾಣು ಬಿಡುಗಡೆಯಾಗುತ್ತಿದ್ದು, ಋತು ಚಕ್ರ ಸರಿ ಇದ್ದಾಗಲೂ, ಬಿಎಂಇ ಮೂವತ್ತು ಅಥವಾ ಅದಕ್ಕಿಂತಲೂ ಮೇಲ್ಪಟ್ಟಿರುವ ಮಹಿಳೆಯರಲ್ಲಿ ಗರ್ಭಧಾರಣೆಯಾಗುವುದು ಕಷ್ಟ. ಗರ್ಭಧಾರಣೆಯಾಗಲು ಈಸ್ಟ್ರೋಜೆನ್ ಹಾರ್ಮೋನಿನ ಪಾತ್ರ ಮುಖ್ಯ. ಸ್ಥೂಲಕಾಯದ ಮಹಿಳೆಯರಲ್ಲಿ ಈಸ್ಟ್ರೋಜೆನ್ ಹೆಚ್ಚಾಗಿ, ಋತುಚಕ್ರವನ್ನು ಏರುಪೇರು ಮಾಡುತ್ತದೆ.
ಪರಿಸರ, ಹಾರ್ಮೋನ್ ವ್ಯತ್ಯಾಸ, ವಂಶಾವಳಿಯಿಂದಲೂ ಸ್ಥೂಲ ಶರೀರ ಬರಬಹುದು. ಈ ಬೊಜ್ಜು ಅಂಡಾಶಯ ಕಾರ್ಯಚಟುವಟಿಕೆ ಹಾಗು ಅಂಡಾಣು ಬಿಡುಗಡೆಯಲ್ಲಿ ಅಡೆತಡೆ ಮಾಡಬಹುದು. ಚಿಕ್ಕ ವಯಸ್ಸಿನಿಂದಲೆ ಸ್ಥೂಲಕಾಯ ಹೊಂದಿರುವ ಮಹಿಳೆಯರಲ್ಲಿ ಮುಟ್ಟು ಆಗದಿರುವಿಕೆ ಮತ್ತು ಋತುಚಕ್ರದ ಏರುಪೇರು ಕಂಡುಬರುತ್ತದೆ. ಇವರನ್ನು ಚಿಕಿತ್ಸೆಗೆ ಒಳಪಡಿಸಿದರೂ ಫಲಕಾರಿಯಾಗದು. ಮಿತಿಮೀರಿದ ದೇಹದ ತೂಕ ಬಂಜೆತನ ಚಿಕಿತ್ಸೆಯಲ್ಲಿ ಬಳಸುವ ಔಷಧಗಳ ಪರಿಣಾಮವನ್ನು ಕೂಡಾ ನಿಯಂತ್ರಿಸಬಲ್ಲದು.
ಗರ್ಭಧಾರಣೆ ಮತ್ತು ಫಲವತ್ತತೆಗೆ ಬೊಜ್ಜಿನಿಂದಾಗುವ ಮತ್ತೊಂದು ತೊಂದರೆಯೆಂದರೆ, ಇನ್ಸುಲಿನ್ ಏರಿಕೆ. ಬಿಎಂಐ 25ರಿಂದ 30 ಇರುವ ಮಹಿಳೆಯರಲ್ಲಿ ಮಧುಮೇಹದ ಅಪಾಯ ಸಾಧ್ಯತೆ ಹೆಚ್ಚು.
ಸ್ಥೂಲಕಾಯ, ಬಂಜೆತನ ಇದೆ ಎಂದರೆ ಭಯಪಡಬೇಕಿಲ್ಲ. ಇಂದು ಐವಿಎಫ್ ಚಿಕಿತ್ಸೆ ಅತ್ಯಂತ ಸುಧಾರಣೆ ಕಂಡಿದ್ದು, ಸಾವಿರಾರು ಮಹಿಳೆಯರು ತಾಯ್ತನದ ಸುಖ ಅನುಭವಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ: 080 26673585, 26673586.
ಐವಿಎಫ್ ಚಿಕಿತ್ಸೆಯ ವೇಳೆ
- ಸ್ಥೂಲಕಾಯದ ಮಹಿಳೆಯರಿಗೆ ಅಂಡಾಣುಗಳನ್ನು ಸಂಗ್ರಹಿಸುವ ಸಮಯದಲ್ಲಿ ಹೆಚ್ಚಿನ ತೊಡಕುಗಳು ಉಂಟಾಗುತ್ತದೆ.
- ಹೆಚ್ಚಿನ ಬೊಜ್ಜು ಇರುವ ಮಹಿಳೆಯರಲ್ಲಿ, ಅಂಡಾಶಯವು ಯೋನಿಯ ಮೇಲ್ಭಾಗದಿಂದ ಸೊಂಟದಲ್ಲಿ ಶೇಖರಣೆಯಾಗಿರುವ ಕೊಬ್ಬಿನ ಅಂಗಾಂಗಗಳಿಂದ ಎತ್ತರಕ್ಕೆ ತಳ್ಳಲ್ಪಡುತ್ತದೆ. ಇಂತಹ ಸಂದರ್ಭದಲ್ಲಿ ಅಂಡಾಣುಗಳನ್ನು ಯಶಸ್ವಿಯಾಗಿ ಅಂಡಾಶಯದಿಂದ ಹೊರತೆಗೆಯಲು ಬಹಳ ಪ್ರಯಾಸವಾಗುತ್ತದೆ.
- ಆಹಾರ ಸೇವನೆಯಲ್ಲಿ ಬದಲಾವಣೆ. ಅಧಿಕ ಕೊಬ್ಬಿನಂಶ ಒಳಗೊಂಡ ಮತ್ತು ಅತಿಯಾದ ಸಿಹಿತಿನಿಸು ಸೇವನೆ ತ್ಯಜಿಸುವುದು. ಧಾನ್ಯ, ತರಕಾರಿ, ಹಣ್ಣು ಮತ್ತು ಪೋಷಕಾಂಶವುಳ್ಳ ಲಘು ಆಹಾರ ಸೇವನೆ.
- ನಿಯಮಿತ ವ್ಯಾಯಾಮ. ಉದಾ: ವಾಕಿಂಗ್, ಏರೋಬಿಕ್ಸ್ ಮುಂತಾದವು ಆರೋಗ್ಯಕರ ತೂಕ ಕಾಪಾಡಲು ನೆರವಾಗುವುದು.
- ಉದರ ಸಂಬಂಧಿ ಶಸ್ತ್ರಚಿಕಿತ್ಸೆ (ಗ್ಯಾಸ್ಟ್ರಿಕ್ ಬೈಪಾಸ್ ಸರ್ಜರಿ).
- ಮನೆ ಊಟ, ತಿಂಡಿ, ಸರಿಯಾದ ನಿದ್ರೆ. ಹೀಗಾಗಿ ದುಡಿಮೆ, ಸಂತೋಷದ ಬಗ್ಗೆ ಎಷ್ಟು ಲಕ್ಷ್ಯ ವಹಿಸುತ್ತೇವೋ, ಅಷ್ಟೇ ಆರೋಗ್ಯದ ಬಗ್ಗೆಯೂ ವಹಿಸುವುದು ಮುಖ್ಯ.
- ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಬೇಕಾಗಬಹುದು.
- ಹುಟ್ಟುವ ಮಗು ದೊಡ್ಡ ಗಾತ್ರದಲ್ಲಿರಬಹುದು.
- ಗರ್ಭಧಾರಣೆಯ ಅವಧಿಯಲ್ಲಿ ಮಧುಮೇಹ ಮತ್ತು ರಕ್ತದೊತ್ತಡಕ್ಕೆ ಒಳಗಾಗುವುದು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.