ಒಮ್ಮತ
ಹಿಂದೂಗಳ ಮಠ. ಕ್ರೈಸ್ತರ ಧರ್ಮಗ್ರಂಥ ಬೈಬಲ್ ಹಾಗೂ ಮುಸ್ಲಿಂ ಪಂಜಾಗಳಿಗೂ ನಿತ್ಯಪೂಜೆ! ಅಚ್ಚರಿಯಾಯಿತೆ? ಇದು ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ನಾಗಲಿಂಗ ಸ್ವಾಮಿ ಮಠದ ಪರಿಪಾಠ.
ಇಲ್ಲಿ ಪವಾಡ ಪುರುಷನೆಂದೇ ಖ್ಯಾತಿ ಪಡೆದ ನಾಗಲಿಂಗ ಸ್ವಾಮೀಜಿ ಪೂಜೆಯೊಂದಿಗೆ ಬೈಬಲ್ ಗ್ರಂಥ ಹಾಗೂ ಮುಸ್ಲಿಂ ಪಂಜಾಗಳ ಪೂಜೆಯೂ ನೆರವೇರುತ್ತದೆ.
ಬ್ರಿಟಿಷರ ಕಾಲದಲ್ಲಿ ಮುಷ್ಟಿಗಿರಿ ಕಾಳಪ್ಪ ಎಂಬವರು ಗ್ರಾಮದೇವತೆ ಗುಡಿಯಲ್ಲಿ ಬೈಬಲ್ ಓದುತ್ತಿದ್ದಾಗ ನಾಗಲಿಂಗ ಸ್ವಾಮಿಗಳು ಆಗಮಿಸಿದ್ದನ್ನು ನೋಡಿ ಅದನ್ನು ತೆಗೆದಿಟ್ಟನು. ಅದನ್ನು ಅಜ್ಜನವರು ತೆಗೆದು ರಂಧ್ರ ಹಾಕಿ, ಆ ರಂಧ್ರ ಮುಚ್ಚಿದಾಗ ಮತ್ತೆ ಅವತರಿಸುವೆ ಎಂದು ಹೇಳಿದ್ದರಂತೆ. ಇಂದಿಗೂ ಆ ಬೈಬಲ್ ಶ್ರೀ ಮಠದಲ್ಲಿ ನೋಡಲು ಲಭ್ಯವಿದೆ.
ಪಾಂಜಾಗಳ ಕಥೆ
ಹಿಂದೊಮ್ಮೆ ನವಲಗುಂದ ಸಮೀಪದ ಅಣ್ಣಿಗೇರಿಗೆ ಮೊಹರಂ ದಿವಸ ನಾಗಲಿಂಗ ಅಜ್ಜನವರು ಆಗಮಿಸಿದರು. ಮುಸ್ಲಿಮರು ಪಂಜಾಗಳನ್ನು ಹೊತ್ತು ಕುಣಿದಾಡುವುದನ್ನು ನೋಡಿ ತಾವೂ ಹೊತ್ತು ಕುಣಿದಾಡುತ್ತೇನೆಂದು ಕೇಳಿದರು. ಆದರೆ ಅವುಗಳನ್ನು ಕೊಡದೆ ಮುಂದೆ ಸಾಗಿದರು. ಆಗ ನಾಗಲಿಂಗ ಅಜ್ಜ ಪಂಜಾಗಳನ್ನು ಕಸಿದುಕೊಂಡು ನವಲಗುಂದ ಮಠದಲ್ಲಿಟ್ಟರು. ಅವುಗಳನ್ನು ಕೇಳಲು ಮಠಕ್ಕೆ ಬಂದಾಗ, ಅಲ್ಲಿವೆ ತೆಗೆದುಕೊಳ್ಳಿ ಎಂದರು. ಆದರೆ, ಪಂಜಾಗಳು ಅವರಿಗೆ ಕಾಣಲೇ ಇಲ್ಲವಂತೆ. ಹಾಗೆ ಇಲ್ಲಿರುವ ಪಂಜಾಗಳಿಗೆ ನಿತ್ಯ ಪೂಜೆ ನಡೆಯುತ್ತದೆ.
ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸಂಚರಿಸಿ ಪವಾಡ ಮೆರೆದು ಅಸಂಖ್ಯಾತ ಭಕ್ತರ ಆರಾಧ್ಯ ದೈವರಾದವರು ನವಲಗುಂದ ನಾಗಲಿಂಗಜ್ಜ. ಅವರು ರಾಜ್ಯದಲ್ಲಿ ಸಂಚರಿಸುತ್ತಾ ನವಲಗುಂದಕ್ಕೆ ಆಗಮಿಸಿದ ಸಂದರ್ಭ, ಇಲ್ಲಿನ ಮೌನೇಶ ಗುಡಿಯಲ್ಲಿ ಜ್ವರಪೀಡಿತರಾಗಿ ಮಲಗಿದ್ದರು. ಆರೈಕೆ ಮಾಡಲು ಬಂದ ಸಮಗಾರ ಭೀಮವ್ವನ ಎದೆ ಹಾಲನ್ನು ಕುಡಿದು ಮಹಿಮೆ ಮೆರೆದರು. ಭೀಮವ್ವನ ಭಕ್ತಿ ಪರೀಕ್ಷಿಸಲು ಬೆತ್ತಲೆಯಾಗಿ ಪೇಟೆಗೆ ಹೋಗಿ ಹಣ್ಣು-ಹಂಪಲ ತರಲು ಸೂಚಿಸಿದರಂತೆ. ಪರಮಭಕ್ತೆ ಭೀಮವ್ವ, ಸ್ವಾಮೀಜಿ ಹೇಳಿದಂತೆ ಪೇಟೆಗೆ ಬೆತ್ತಲೇಯಾಗಿಯೇ ಹೋದಳು. ಆದರೆ, ನೋಡುವವರ ಕಣ್ಣಿಗೆ ಮಾತ್ರ ಆಕೆ ಜರತಾರಿ ಸೀರೆ ಧರಿಸಿದಂತೆ ಕಂಡು ಬಂತು ಎಂಬುದು ಇಲ್ಲಿನ ದಂತಕತೆ.
ಹೊಸಳ್ಳಿ ಬೂದಿ ಸ್ವಾಮೀಜಿ, ಗರಗದ ಮಡಿವಾಳಜ್ಜನವರು, ಹುಬ್ಬಳ್ಳಿಯ ಸಿದ್ದಾರೂಢರು, ಶರೀಫ ಸಾಹೇಬರು ಹೀಗೆ ಇನ್ನಿತರ ಶರಣರು ಹಾಗೂ ಸಂತರೊಡನೆ ಪವಾಡಗಳನ್ನು ಮಾಡಿದ್ದು ಇತಿಹಾಸ. ಹಲವು ಲೀಲೆಗಳನ್ನು ಮಾಡಿದ ಅಜ್ಜನವರು 1881ರಲ್ಲಿ ಜೀವಂತ ಸಮಾಧಿಯಾದರು. ನಂತರ ಶ್ರೀಮಠದ ಪೀಠಾಧಿಪತಿಗಳಾದ ಜ.ಗು. ಅಭಿನವ ನಾಗಲಿಂಗ ಸ್ವಾಮಿಗಳು ಕೂಡ ನಿತ್ಯಸ್ಮರಣೀಯರೆನಿಸಿದ್ದಾರೆ. ಧಾರ್ಮಿಕ ಕಾರ್ಯಕಲಾಪಗಳಿಗೆ ಮಠವನ್ನು ಸೀಮಿತಗೊಳಿಸದೆ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲಿ ಮುನ್ನಡೆಸಿ 2006ರಲ್ಲಿ ಐಕ್ಯರಾದರು.
12ರಂದು ಆರಾಧನೆ
ಇಂದಿನ ಪೀಠಾಧಿಪತಿ ವೀರಯ್ಯ ಸ್ವಾಮೀಜಿ ಮಠಕ್ಕೆ ಮತ್ತಷ್ಟು ಶಕ್ತಿ ನೀಡುತ್ತಿದ್ದಾರೆ. ಈ ವರ್ಷ ಜು. 12ರಂದು 132ನೇ ಆರಾಧನಾ ಮಹೋತ್ಸವ ಹಾಗೂ ಮಾದಲಿ ಪೂಜೆ ನೆರವೇರಲಿದೆ. 13ರಂದು ಪಲ್ಲಕ್ಕಿ ಹಾಗೂ ಮೇಣಿ ಮಹೋತ್ಸವ. ಇದೇ ಸಂದರ್ಭ ಶ್ರೀಮಠದ ನೂತನ ವೆಬ್‌ಸೈಟ್ www.nagalingamath.com ಉದ್ಘಾಟನೆ. ಹೆಚ್ಚಿನ ಮಾಹಿತಿಗೆ: 08380-229144, 9480033134.
- ಪುಂಡಲೀಕ ಮುಧೋಳೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.