ಜೀವವನ್ನೂ ಲೆಕ್ಕಿಸದ ದಿಟ್ಟತನ!
ಒಂದು ದಿನ ರಾಮಕೃಷ್ಣರು ನರೇಂದ್ರನನ್ನು ಕರೆದು, 'ನೋಡು, ನಾನು ಇವರನ್ನೆಲ್ಲ ನಿನ್ನ ರಕ್ಷಣೆಯಲ್ಲಿ ಬಿಟ್ಟು ಹೋಗುತ್ತಿದ್ದೇನೆ. ನಾನು ಶರೀರ ತ್ಯಾಗ ಮಾಡಿದ ಮೇಲೂ ಇವರು ಅಧ್ಯಾತ್ಮಿಕ ಸಾಧನೆ ಮಾಡುವಂತೆ ನೋಡಿಕೋ' ಎಂದು ಸ್ಪಷ್ಟ ಸೂಚನೆಯನ್ನಿತ್ತರು. ಅವರೆಲ್ಲರೂ ಮುಂದೆ ಸರ್ವಸಂಗ ಪರಿತ್ಯಾಗ ಮಾಡಿ ಸಂನ್ಯಾಸಿಗಳಾಗಬೇಕು ಎಂಬುದೇ ರಾಮಕೃಷ್ಣರ ಉದ್ದೇಶವಾಗಿತ್ತು.
ಈ ನಡುವೆ ರಾಮಕೃಷ್ಣರ ಗಂಟಲ ಕ್ಯಾನ್ಸರ್ ಉಲ್ಬಣವಾಗುತ್ತಿತ್ತು. ಹೀಗಿರುವಾಗ ಇದ್ದಕ್ಕಿದ್ದಂತೆ ರಾಮಕೃಷ್ಣರ ವ್ಯಾಧಿ ಸಾಂಕ್ರಾಮಿಕವಾದದ್ದು ಎಂದು ವದಂತಿ ಕೇಳಿಬಂತು. ಇದರ ಪರಿಣಾಮವಾಗಿ ತಮ್ಮ ಪ್ರಿಯ ಗುರುದೇವನ ಕಾಯಿಲೆ ವಾಸಿಯಾಗುವುದಿರಲಿ ತಮಗೇ ಅಂಟಿಕೊಂಡರೇನು ಗತಿ ಎಂದು ಅನೇಕ ಶಿಷ್ಯರು ಹಿಂಜರಿಯಲಾರಂಭಿಸಿದರು. ಇದನ್ನು ಕಂಡ ನರೇಂದ್ರ, ಸಹಶಿಷ್ಯರನ್ನೆಲ್ಲ ಒಟ್ಟುಗೂಡಿಸಿಕೊಂಡು ರಾಮಕೃಷ್ಣರ ಕೋಣೆಗೆ ಹೋದ.
ರಾಮಕೃಷ್ಣರು ಕುಡಿದು ಉಳಿಸಿದ್ದ ಅವರ ಎಂಜಲು ಬೆರೆತಿದ್ದ ಗಂಜಿಯ ಬಟ್ಟಲು ಅಲ್ಲಿತ್ತು. ಶಿಷ್ಯರೆಲ್ಲ ನೋಡುತ್ತಿದ್ದಂತೆ ನರೇಂದ್ರ ಆ ಬಟ್ಟಲನ್ನೆತ್ತಿ ಕುಡಿದುಬಿಟ್ಟ! 'ಒಂದು ವೇಳೆ ರಾಮಕೃಷ್ಣರ ಕಾಯಿಲೆ ಅಂಟುರೋಗವೇ ಆಗಿದ್ದು, ನಮಗೆ ತಗಲುವ ಸಂಭವವಿದ್ದರೆ ಅದಕ್ಕೆ ಮೊದಲು ಬಲಿಯಾಗಲು ನಾನು ಸಿದ್ಧನಿದ್ದೇನೆ' ಎಂದು ಸಾರಿದ.
ಇದನ್ನು ಕಂಡ ಶಿಷ್ಯರೆಲ್ಲ ಸ್ತಂಭೀಭೂತರಾಗಿ ನಿಂತುಬಿಟ್ಟರು. ನಾಚಿಕೆಯಿಂದ ತಲೆ ತಗ್ಗಿಸಿ ಪಶ್ಚಾತ್ತಾಪದ ಕಂಬನಿ ಹರಿಸಿದರು.
-ಆನಂದ ಎಸ್.ಎನ್.
anandsn193@gmail.com