ತೊಂದರೆಗೀಡಾದಾಗ ಏನು ಮಾಡಬೇಕು?
ದಿನಬೆಳಗಾದರೆ ಕೊಲೆ, ಸುಲಿಗೆ, ದರೋಡೆ, ವಂಚನೆ, ಅಪಘಾತದಂತಹ ಅಪರಾಧ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಓದುತ್ತೇವೆ, ವಾಹಿನಿಗಳಲ್ಲಿ ನೋಡುತ್ತೇವೆ. ಯಾರೋ ಅನುಭವಿಸುವ ನೋವು, ಕಷ್ಟಗಳ ಬಗ್ಗೆ ಕೇಳುತ್ತೇವೆ. ಆದರೆ, ಅಪರಾಧ ಪ್ರಕರಣಗಳು ಯಾವಾಗ, ಎಲ್ಲಿ, ಎಷ್ಟು ಹೊತ್ತಿಗೆ ಸಂಭವಿಸುತ್ತವೆ ಎಂದು ಹೇಳಲು ಆಗುವುದಿಲ್ಲ.
ಆದರೆ, ಯಾವುದೇ ಅಪರಾಧ ಕೃತ್ಯ ನಡೆದಾಗ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಬರುವವರು ಪೊಲೀಸರು (ಅಗ್ನಿಯಂತಹ ಅನಾಹುತವಾದಾಗಲೂ ಪೊಲೀಸರು ಹಾಜರಿರಬೇಕು). ಪೊಲೀಸರ ಅರ್ಥಾತ್ ಆರಕ್ಷಕರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ. ಪೊಲೀಸರ ಬಗ್ಗೆ ಕೇಳಿದ್ದೀರಿ, ಸಾರ್ವಜನಿಕರು ಪೊಲೀಸರ ಕೆಲಸ, ಕಾರ್ಯವೈಖರಿಗಳ ಬಗ್ಗೆಯೂ ಒಂದಿಷ್ಟು ತಿಳಿದುಕೊಳ್ಳುವುದು ಒಳಿತು. ಅಷ್ಟೇ ಅಲ್ಲ, ಪ್ರತಿಯೊಬ್ಬರೂ ತೊಂದರೆ ಅನುಭವಿಸಿದಾಗ ಪೊಲೀಸರ ಮಹತ್ವ ತಿಳಿಯುತ್ತದೆ.
ಹಾಗಾಗಿ ನಿಮ್ಮ ದಿನನಿತ್ಯದ ಕೆಲಸದ ಜಂಜಾಟದಲ್ಲಿ ಪರ್ಸ್, ವಾಹನ ಕಳೆದುಹೋದಾಗ, ಮನೆಯಲ್ಲಿ ಕಳ್ಳತನವಾದಾಗ, ಅಗ್ನಿ ಅನಾಹುತ ಸಂಭವಿಸಿದಾಗ, ಅಪಘಾತವಾದಾಗ, ಸ್ನೇಹಿತರು ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಾಗ, ನಿಮ್ಮ ನೆರೆಮನೆಯಲ್ಲಿ ಯಾವುದೋ ಅನಾಹುತ ಸಂಭವಿಸಿದಾಗ... ಇಂತಹ ಸಾಕಷ್ಟು ಪ್ರಕರಣಗಳನ್ನು ನೋಡುತ್ತಿರುತ್ತೇವೆ.
ಸಾಕಷ್ಟು ಬಾರಿ ಅಂತಹ ಘಟನೆಗಳು ನಡೆದಾಗ ಏನು ಮಾಡಬೇಕು ಎಂಬುದು ತಕ್ಷಣಕ್ಕೆ ತೋಚುವುದಿಲ್ಲ. ಯಾರಿಗೆ ಹೇಳಬೇಕು ಎಂಬುದು ತಿಳಿಯದೆ ಚಡಪಡಿಸುವುದು, ಕೆಲವೊಮ್ಮೆ ತಮಗೆ ತಿಳಿಯದೇ ಸಾಕ್ಷಿ ನಾಶ ಮಾಡುವುದು ಸೇರಿದಂತೆ ಹಲವು ತಪ್ಪುಗಳನ್ನು ಮಾಡುತ್ತೇವೆ. ಅದನ್ನು ನಿಯಂತ್ರಣಕ್ಕೆ ತರುವುದು ಹೇಗೆ, ಏನು ಎಂಬಿತ್ಯಾದಿ ಬಗ್ಗೆ ಒಂದಿಷ್ಟು ಮಾಹಿತಿ ಮುಂದಿನ ಸಂಚಿಕೆಗಳಲ್ಲಿ.
-ಶಾಂತ ತಮ್ಮಯ್ಯ