ಎಲ್ಲರೊಳಗಿದ್ದೂ ಎಲ್ಲರಂತಾಗದಿರಿ
ತಪ್ಪೇನಿಲ್ಲ, ನೀವು ನೀವಾಗಿಯೇ ಇರಿ. ಯಾರಿಗಾಗಿಯೂ ನೀವು ಬದಲಾಗಬೇಕಿಲ್ಲ. ಏಕೆಂದರೆ ನಾವು ಯಾರಿಗಾಗಿಯೋ ಬದುಕುವುದಲ್ಲ. ನಮ್ಮ ಬದುಕಿಗೆ ಅಲ್ಟಿಮೇಟ್ ಯಾರೂ ಹೊಣೆಯಾಗುವುದೂ ಇಲ್ಲ. ಹೀಗಿರುವಾಗ ನಾವು ಯಾರೋ ಏನೋ ಹೇಳುತ್ತಾರೆಂಬ ಕಾರಣಕ್ಕೆ ಯಾಕೆ ತಲೆ ಕೆಡಿಸಿಕೊಳ್ಳಬೇಕು? ಅವರಿಗಾಗಿ ನಮ್ಮ ಸ್ವಭಾವವನ್ನೋ, ನಡವಳಿಕೆಯನ್ನೋ ಬದಲಿಸಕೊಳ್ಳಬೇಕೇಕೆ? ಸತ್ಯವಾದ ಮಾತೇ. ಆದರೂನಾವು ಬದುಕುತ್ತಿರುವುದು ಒಂಟಿಯಾಗೇನೂ ಅಲ್ಲ. ಈ ಜಗತ್ತಿನಲ್ಲಿ ನಾವೊಬ್ಬರೇ ಜೀವಿಸಲೂ ಸಾಧ್ಯವಿಲ್ಲ. ಹತ್ತು ಜನರ ನಡುವೆ ನಮ್ಮ ಬದುಕು ನಡೆಯಬೇಕಾದ ಅನಿವಾರ್ಯತೆ ಇದ್ದೇ ಇದೆ. ಆ ಹತ್ತೂ ಜನಕ್ಕೆ ಸಮ್ಮತವಾದ ನಡವಳಿಕೆ ಎಂಬುದೊಂದು ನಿಯಮಗಳ ರೂಪದಲ್ಲಿ ಪಾಲನೆಯಾಗುತ್ತಿರುತ್ತದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅವರವರಿಗೆ ತೋಚಿದಂತೆ ವರ್ತಿಲಾರಂಭಿಸಿದರೆ ಬಹುಶಃ ಜಗತ್ತೆಂಬುದು ಬೆಳಗಾಗುವುದರೊಳಗೆ ಹುಚ್ಚರ ಸಂತೆಯಾಗಿ ಮಾರ್ಪಡಬಹುದು. ವೈರುಧ್ಯಗಳ ಸಮರಾಂಗಣದಲ್ಲಿ ಪ್ರತಿಯೊಬ್ಬರ ಜೀವಿತವೂ ಆಹುತಿಯಾಗಿ ಹೋಗಬಹುದು. ಬಹುಶಃ ಇದೇ ಕಾರಣಕ್ಕೇ ನಮ್ಮಲ್ಲಿ ನೈತಿಕತೆ, ಪಾಪಭೀತಿ ಎಂಬಿತ್ಯಾದಿಗಳು ಸೃಷ್ಟಿಯಾಗಿವೆ. ಯಾವುದೇ ಕಟ್ಟುಪಾಡುಗಳಿಲ್ಲದಿದ್ದರೂ, ಕಾನೂನು-ಶಿಕ್ಷೆಗಳ ಹಂಗಿಲ್ಲದಿದ್ದರೂ ಪ್ರಾಣಿಗಳು ಸಹ ಒಂದು ಮಿತಿಯನ್ನು ಮೀರಿ ವರ್ತಿಸುವುದಿಲ್ಲ. ಹಾಗಿರುವಾಗ ಅವುಗಳೆಲ್ಲವುಗಳಿಗಿಂತ ಶ್ರೇಷ್ಠ ಎನಿಸಿಕೊಂಡಿರುವ ವಿವೇಚನಾವಂತ ಮನುಷ್ಯ ಬೇಕಾಬಿಟ್ಟಿ ವರ್ತಿಸುವುದು ಎಷ್ಟು ಸರಿ? ಕಟ್ಟುಪಾಡು ಎನ್ನುವುದು ನಮಗೆ ನಾವೇ ವಿಧಿಸಿಕೊಂಡ ಲಕ್ಷಣರೇಖೆ. ಇದನ್ನು ದಾಟಿದಾಕ್ಷಣವೇ ಏನೋ ಅನಾಹುತವಾಗದೇ ಹೋಗಬಹುದು. ಆದರೆ ನಮ್ಮನ್ನು ನಾವೇ ಧಿಕ್ಕರಿಸಿದಂತೆ, ನಮ್ಮನ್ನು ನಾವೇ ಅಗೌರವಿಸಿಕೊಂಡಂತೆ ಅಲ್ಲವೇ? ಜೀವನದ ಮಿತಿಯೊಳಗೆ ಹದ್ದು ಮೀರಿದ ವರ್ತನೆಗಳು ಕೆಲವೊಮ್ಮೆ ನಮ್ಮನ್ನು ಇನ್ನಿಲ್ಲದ ಸಿನಿಕತನಕ್ಕೆ ದೂಡಿಬಿಡುತ್ತವೆ. ಯಾವುದನ್ನೂ, ಯಾರನ್ನೂ ಲೆಕ್ಕಿಸಿದ ಹಂತದಲ್ಲಿ ನಮ್ಮ ಗೌರವವನ್ನು ಕಳಕೊಳ್ಳವ ಜತೆಗೆ ಎಲ್ಲದರ ಬಗ್ಗೆಯೂ ಜುಗುಪ್ಸಾ ದೃಷ್ಟಿ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ನಾವು ದಾಢಸೀತನಕ್ಕೆ ಹೊರಳಿ ದಾಷ್ಟ್ರ್ಯದ ತೆಕ್ಕೆಗೆ ಆತುಕೊಂಡುಬಿಡುತ್ತೇವೆ. ಕೆಲ ಬಾರಿ ಸಂಕಷ್ಟಗಳ ಸುಳಿಗೆ ಸಿಲುಕಿ ಬದುಕು ಸೂತ್ರ ಹರಿದ ಗಾಳಿಪಟವಾಗಿ ಬಿಡಬಹುದು. ಆ ಹಂತದಲ್ಲೇ ಮನಸ್ಸು ತತ್ತರಿಸಿತೊಡಗುತ್ತದೆ. ಅಂಥ ಕ್ಷಣದಲ್ಲಿ ಬಯಸುವ ಸಣ್ಣದೊಂದು ಸಾಂತ್ವನವೂ ಸಿಗದೇ ಪರಿಸ್ಥಿತಿಯನ್ನು ಎದುರಿಸಿ ನಿಲ್ಲಲಾಗದ ಅಸಹಾಯಕತೆ ನಮ್ಮನ್ನು ಇನ್ನಿಲ್ಲದಂತೆ ಬಾಧಿಸುತ್ತದೆ. ಎಲ್ಲರೊಳಗೊಂದಾಗಿಯೂ ನಾವು ನಾವೇ ಆಗಿ ಉಳಿದು ನಮ್ಮ ಹೆಚ್ಚುಗಾರಿಕೆಯನ್ನು, ವೈಶಿಷ್ಟ್ಯವನ್ನು ಮೆರೆಯುವುದು ಯಶಸ್ವಿಯೊಬ್ಬನ ಸಾಧನೆ ಎನಿಸಿಕೊಳ್ಳುತ್ತದೆ. ಹತ್ತು ಮಂದಿಯಲ್ಲಿ ಹೊರಗಿನವರಾಗುವುದಕ್ಕಿಂತ ಹೆಚ್ಚಿನವರಾಗಿ ನಿಲ್ಲಿ.
- ಸಹನೆ