ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕುಣಿಘಲ್ ಕುದುರೆ

Vishwanath S
Updated On : 9 Jul 2013, 7:39 am

ಸಾಮಾನ್ಯವಾಗಿ ಓಟ ಬಿಟ್ಟು ಕುದುರೆಗಳಿಗೆ ಬೇರೇನೂ ಗೊತ್ತಿರುವುದಿಲ್ಲ. ಆದರೆ ಇಲ್ಲೊಂದು ಕುದುರೆ ಮಾತ್ರ ಓಡಲು, ನರ್ತನ ಎರಡಕ್ಕೂ ಸೈ.
ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಯಾಳವಾರ ಗ್ರಾಮದ ಮಲ್ಲನಗೌಡ ಕೇಶಪ್ಪಗೋಳ (ಮಾಡಗಿ) ಅವರ ಕುಟುಂಬದ ಬಳಿ ಇದೆ ಈ ಕುದುರೆ. ಹವ್ಯಾಸಿಯಾಗಿ ಕುದುರೆ ಸಾಕಣೆ ಮಾಡುತ್ತಿರುವ ಈ ಕುಟುಂಬ ಆರು ತಿಂಗಳ ಹಿಂದಷ್ಟೇ ಮಹಾರಾಷ್ಟ್ರದ ಅಕಲೋಜದಲ್ಲಿ ಕಾಠೇವಾಡಿ ತಳಿಯ ಬಿಳಿ ಬಣ್ಣದ ಹೆಣ್ಣು ಕುದುರೆಯನ್ನು 2 ಲಕ್ಷ ರು.ಗಳಿಗೆ ಖರೀದಿಸಿದೆ. ಈ ಕುದುರೆಗೆ ಬೇರೆ ಏನೂ ಕೆಲಸವಿಲ್ಲ. ಜಾತ್ರೆ, ಮದುವೆ, ಉತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ಇಡೀ ದಿನ ಕುಣಿದು ನೆರೆದ ಜನರನ್ನು ಖುಷಿ ಪಡಿಸುವುದಷ್ಟೇ ಕೆಲಸ!
5 ವರ್ಷದ ಈ ಕುದುರೆ 5.5 ಕ್ವಿಂಟಲ್ ತೂಕ, 5.5 ಫೂಟು ಎತ್ತರವಿದೆ. ಹೆಸರು ಭಾಗ್ಯಲಕ್ಷ್ಮಿ. ದಿನವೂ ಒಂದಿಲ್ಲ ಒಂದು ಕಡೆ ಕುದುರೆ ಕುಣಿತಕ್ಕೆ ಬೇಡಿಕೆ ಇದ್ದೇ ಇರುತ್ತದೆ. ಈ ಕುದುರೆ ನೆಲ, ಹೊರಸು, ಟೇಬಲ್ ಮೇಲೆ ಮೂರು ವಿಧದಲ್ಲಿ ಸುಂದರವಾಗಿ ಕುಣಿಯುತ್ತದೆ. ಬೆಳಗ್ಗೆ 9ರಿಂದ ಕುಣಿಯಲು ಶುರು ಮಾಡಿದರೆ ಬರೋಬ್ಬರಿ 3- 4 ತಾಸು ನಿರಂತರವಾಗಿ ಕುಣಿಯುತ್ತದೆ. ಮಧ್ಯಾಹ್ನ 2 ತಾಸುಗಳ ಬಿಡುವು. ಮತ್ತೆ ಸಂಜೆವರೆಗೂ ಹಲಗೆ ವಾದನಕ್ಕೆ ತಕ್ಕಂತೆ ಹೆಜ್ಜೆ.
ಹೊರಸಿನ ಮೇಲೆ ಕುಣಿಯುವುದು ತೀರಾ ಕಷ್ಟ. ಆದರೂ ಕುದುರೆ ತಾಳ ತಪ್ಪುವುದಿಲ್ಲ. ಕಿರಿದಾದ ಟೇಬಲ್ ಮೇಲೆ ಮುಂದಿನ ಎರಡು ಕಾಲುಗಳನ್ನು ಇಟ್ಟು ಕುಣಿಯುತ್ತ ಮೈ ಬಳುಕಿಸುವುದು. ಕುದುರೆ ಮೇಲೆ ಒಬ್ಬ ವ್ಯಕ್ತಿ ಕುಳಿತರೂ ಕುಣಿತದಲ್ಲಿ ಲಯ, ತಾಳ ತಪ್ಪುವುದಿಲ್ಲ. ಚಿತ್ತಾಪುರ, ಕೂಡ್ಲಗಿ, ಮುರಗಾನೂರ ಮುಂತಾದ ಕಡೆಯೂ ಈ ಕುದುರೆ ಕುಣಿದು ಜನರ ಮನಸೂರೆಗೊಂಡಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕುದುರೆಯ ಕುಣಿತ ಉಚಿತ.

ಭರ್ಜರಿ ಮೆನು
ಕೇಶಪ್ಪಗೋಳ ಕುಟುಂಬಕ್ಕೆ 120 ಎಕರೆ ಜಮೀನು ಇದೆ. 5-6 ಕಿ.ಮಿ. ದೂರದಲ್ಲಿರುವ ಜಮೀನಿಗೆ ಹೋಗಿ ಬರಲು ಈ ಕುದುರೆಯೇ ವಾಹನ. ಕುದುರೆ ಮೇವಿನ ಸಲುವಾಗಿಯೇ 2 ಎಕರೆ ಜಮೀನು ಮೀಸಲು. ಈ ಜಮೀನಿನಲ್ಲಿ ಕಡಲೆ ಬೆಳೆ. ಆಹಾರದ ಮೆನುವಿನಲ್ಲಿ ಜೋಳ, ಗೋಧಿ, ಕಡಲೆ ಬೇಳೆ, ಮೆಕ್ಕೆಜೋಳ, ಶೇಂಗಾ ಹಿಂಡಿಗಳೆಲ್ಲ ಇವೆ. ತಿಂಗಳಿಗೆ ಸುಮಾರು 3 ಕ್ವಿಂಟಲ್ ಪೌಷ್ಟಿಕ ಆಹಾರ ಬೇಕು. ಪ್ರತಿ ತಿಂಗಳು ಕುದುರೆಯ ಮೇವಿನ ಖರ್ಚಿಗೇ 25,000 ರು. ವೆಚ್ಚ. ಕುದುರೆ ಸಂರಕ್ಷಣೆಗೊಬ್ಬ, ಹಲಗೆವಾದಕನೊಬ್ಬ ಇದ್ದಾರೆ. ಇಬ್ಬರಿಗೂ ಪ್ರತಿ ತಿಂಗಳು 2,500 ರು. ಸಂಬಳ. ಕುದುರೆ ನರ್ತನದಿಂದ ಬಂದ ದುಡ್ಡು ಏತಕ್ಕೂ ಸಾಲದು. ಕೇಶಪ್ಪಗೋಳ ಕುಟುಂಬಕ್ಕೆ ಇದು ಕಾಸು ಹಾನಿ ಮಾಡಿಕೊಳ್ಳುವ ಹವ್ಯಾಸ.

- ರುದ್ರಪ್ಪ ಆಸಂಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement