ಚಾಕೊಲೆಟ್‌ನಲ್ಲಿ ಕೊಲೆಸ್ಟರಾಲ್ ಉಂಟಾ?
ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೆ ಕೂಡ ಚಾಕೊಲೆಟ್ ಎಂದರೆ ಇಷ್ಟ. ದಿನಕ್ಕೆ 2-3 ದೊಡ್ಡ ಚಾಕೊಲೆಟ್ ತಿನ್ನುವವರನ್ನು, ಮಕ್ಕಳಿಗೆ ಕೊಡಿಸುವ ನೆಪ ಮಾಡಿಕೊಂಡು ತಾವೂ ಸ್ವಾಹಾ ಮಾಡುವುದನ್ನು ನೋಡಿದ್ದೇನೆ. ನಮ್ಮಲ್ಲಿ ಅತಿಯಾದ ಆರೋಗ್ಯಪ್ರಜ್ಞೆ ಎನ್ನುತ್ತೇವಲ್ಲ, ಅದು ಜಾಗೃತವಾದ ನಂತರ ಚಾಕೊಲೆಟ್ ಬಗ್ಗೆಯೂ ಹೆದರಿಕೆ ಶುರುವಾಗಿದೆ. ತಾವು ತಿನ್ನುವುದಿರಲಿ, ಮಕ್ಕಳಿಗೆ ಕೊಡಿಸಲೂ ಹಿಂದುಮುಂದು ನೋಡುತ್ತಿದ್ದಾರೆ ಹಲವರು. 'ಚಾಕೊಲೆಟ್ ಕೊಲೆಸ್ಟರಾಲ್ ಅನ್ನು ಸಿಕ್ಕಾಪಟ್ಟೆ ಜಾಸ್ತಿ ಮಾಡುತ್ತದಂತೆ ಹೌದಾ' ಎಂದು ನನ್ನಲ್ಲೇ ಹಲವರು ಪ್ರಶ್ನಿಸಿದ್ದಾರೆ. 'ಕೊಲೆಸ್ಟರಾಲ್ ಮತ್ತು ಆಹಾರಕ್ಕೆ ಸಂಬಂಧಿಸಿ ಕಾಫಿಯಿಂದ ಹಿಡಿದು ಎಲ್ಲ ಸಂಗತಿಗಳ ಬಗ್ಗೆಯೂ ಬರೆದಿದ್ದೀರಿ, ಚಾಕೊಲೆಟ್ ಕುರಿತಾಗಿಯೂ ಸಂಶಯ ನಿವಾರಿಸಿದ್ದರೆ ಚೆನ್ನಾಗಿತ್ತು' ಎಂದು ಕೆಲವು ಓದುಗ ಮಿತ್ರರು ಸಂದೇಶಗಳನ್ನೂ ಕಳಿಸಿದ್ದಾರೆ.
ಮೇಲ್ನೋಟಕ್ಕೆ ಚಾಕೊಲೆಟ್ ತಿಂದರೆ ಕೊಲೆಸ್ಟರಾಲ್ ಜಾಸ್ತಿಯಾಗುತ್ತದೆ ಎಂದು ಅನ್ನಿಸುವುದು ಸಹಜ. ಏಕೆಂದರೆ ಅದರಲ್ಲಿ ಶೇ 60 ರಷ್ಟು ಸ್ಯಾಚುರೇಟೆಡ್ ಫ್ಯಾಟ್ ಇರುತ್ತದೆ. ಈ ಕೊಬ್ಬು ಕೊಲೆಸ್ಟರಾಲ್ ಹೆಚ್ಚಿಸುತ್ತದೆ ಎಂದು ಅಲ್ಪಸ್ವಲ್ಪ ಆರೋಗ್ಯ ವಿಜ್ಞಾನದ ಮಾಹಿತಿಯುಳ್ಳ ಯಾರಾದರೂ ಹೇಳಿಯಾರು. ಆದರೆ ವಾಸ್ತವವೇ ಬೇರೆ. ಚಾಕೊಲೆಟ್ ನಾವು ಅಂದುಕೊಂಡಂತೆ ಅಪಾಯಕಾರಿಯಲ್ಲ. ವಿಟಮಿನ್ ಎ, ಸಿ, ಇ; ಬೀಟಾ ಕ್ಯಾರೊಟಿನ್, ಸೆಲಿನಿಯಂಗಳಿಂದ ಸಮೃದ್ಧವಾಗಿರುವ ಚಾಕೊಲೆಟ್ ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡುತ್ತದೆ ಎನ್ನುವುದು ಅಮೆರಿಕದಲ್ಲಿ ನಡೆದ ಹಲವಾರು ಸಂಶೋಧನೆಗಳಿಂದ ದೃಢಪಟ್ಟಿದೆ. ಹಲವಾರು ಆ್ಯಂಟಿ ಆಕ್ಸಿಡೆಂಟ್‌ಗಳೂ ಇದರಲ್ಲಿ ಹುದುಗಿರುತ್ತವೆ. ಇವೆಲ್ಲ ಸೇರಿ ರಕ್ತದಲ್ಲಿನ ಕೆಟ್ಟ ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡುವುದರ ಜತೆಗೆ ಸುಗಮ ರಕ್ತ ಸಂಚಾರಕ್ಕೂ ನೆರವಾಗುತ್ತವೆ. ಯೂನಿನರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಪೆನಿಸಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿ ಮೊದಲಾದ ಕಡೆ ಈ ಕುರಿತು ವಿಸ್ತ್ರತ ಸಂಶೋಧನೆಗಳು ನಡೆದಿವೆ.
ಅಲ್ಲದೆ ಚಾಕೊಲೆಟ್‌ನಲ್ಲಿರುವ ಮೂಲ ಅಂಶವಾದ ಕೋಕಾ (ಕೋಕಾ ಬಟರ್) ಕುರಿತಂತೆಯೂ ಪ್ರಯೋಗಗಳಾಗಿವೆ. ಯಾವ ವರದಿಯೂ ಚಾಕೊಲೆಟ್‌ನಿಂದ ಅಪಾಯವಿದೆ ಎಂದು ಹೇಳಿಲ್ಲ. ಬದಲಿಗೆ, 'ಕೊಲೆಸ್ಟರಾಲ್ ವಿಚಾರದಲ್ಲಿ ಕೋಕಾ ಬಟರ್ ತಟಸ್ಥವಾಗಿ ವರ್ತಿಸುತ್ತದೆ' ಅಮೆರಿಕದ ಸಂಶೋಧಕ ಮೆಕ್ ಡೊನೆಲ್. ಕಂದು ಬಣ್ಣಕ್ಕಿಂತ ಕಪ್ಪು ಬಣ್ಣದ ಚಾಕೊಲೆಟ್‌ಗಳು ಆರೋಗ್ಯಕ್ಕೆ ಇನ್ನೂ ಉತ್ತಮ ಎಂದು ಹೇಳಲಾಗಿದೆ.
ಆದರೆ, ಡಯಟ್ ಮಾಡುವವರು ಚಾಕೊಲೆಟ್ ವಿಚಾರದಲ್ಲಿ ಕೊಂಚ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಡಯಟ್‌ನಲ್ಲಿದ್ದಾಗ ಅತಿಯಾದ ಚಾಕೊಲೆಟ್ ಸೇವನೆ ಸಲ್ಲದು. ಅದು ಖಂಡಿತವಾಗಿ ಕೊಲೆಸ್ಟರಾಲ್ ಹೆಚ್ಚಿಸುತ್ತದೆ ಎನ್ನುವುದನ್ನೂ ಸಂಶೋಧಕರು ಕಂಡುಕೊಂಡಿದ್ದಾರೆ. ಕೊಲೆಸ್ಟರಾಲ್ ವಿಚಾರದಲ್ಲಿ ಅಪಾಯಕಾರಿಯಲ್ಲ ಎಂದುಕೊಂಡು ಅತಿಯಾಗಿ ಚಾಕೊಲೆಟ್ ತಿಂದು ಹಲ್ಲಿನ ಆರೋಗ್ಯ ಹಾಳುಮಾಡಿಕೊಳ್ಳಬೇಡಿ ಮತ್ತೆ!
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com