ಪೌರಾಣಿಕ ಯಕ್ಷರಾತ್ರಿ
ಮುಂಗಾರು ಶುರುವಾಯಿತೆಂದರೆ ಬೆಂಗಳೂರಿನಲ್ಲಿ ಯಕ್ಷಗಾನದ ಸುಗ್ಗಿ ಪ್ರಾರಂಭ. ಊರಿನಲ್ಲಿ ತಿರುಗಾಟ ನಡೆಸುವ ವೃತ್ತಿ ಮೇಳಗಳು ರಾಜಧಾನಿಯಲ್ಲಿ ಯಕ್ಷಗಾನದ ಕಂಪನ್ನು ಪಸರಿಸಲು ಧಾವಿಸಿ ಬರುವ ಸಮಯವಿದು. ಪ್ರಖ್ಯಾತ ವೃತ್ತಿ ತಂಡ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರ ಸಂಗಮದಲ್ಲಿ ನಾಳೆ ರಾತ್ರಿ 10 ರಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ. 'ಯಕ್ಷರಂಗದ ಹೆಸರಾಂತ ಕಲಾವಿದರ ಈವರೆಗಿನ ಇಮೇಜ್ ಬದಲಿಸುವ ರೀತಿಯ ವಿಶಿಷ್ಟ ಪಾತ್ರ ಸಂಯೋಜನೆಯ ಅಪರೂಪದ ಪ್ರದರ್ಶನ ಇದಾಗಿದೆ' ಎಂದು ಸಂಯೋಜಕ ರಮೇಶ್ ಬೇಗಾರ್ ತಿಳಿಸಿದ್ದಾರೆ.
ಪ್ರದರ್ಶನಗೊಳ್ಳಲಿರುವ ಪಟ್ಟಾಭಿಷೇಕ - ಚೂಡಾಮಣಿ - ಭಸ್ಮಾಸುರ ಪ್ರಸಂಗಗಳಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ (ದಶರಥ), ನೀಲ್ಕೋಡು ಶಂಕರ ಹೆಗಡೆ (ಕೈಕೇಯಿ ಮತ್ತು ಮೋಹಿನಿಯಾಗಿ ದ್ವಿಪಾತ್ರದಲ್ಲಿ), ತೀರ್ಥಹಳ್ಳಿ ಗೋಪಾಲ ಆಚಾರ್ (ಶೃಂಗಾರ ರಾವಣ), ಕ್ಯಾದಗಿ ಮಹಾಬಲೇಶ್ವರ (ಮಂಥರೆ) ಅಭಿನಯಿಸಲಿದ್ದಾರೆ. ಯಕ್ಷಗಾನ ರಂಗದ ಭರವಸೆಯ ಭವಿಷ್ಯದ ಕಲಾವಿದರೆಂದೇ ಕರೆಸಿಕೊಳ್ಳುವ ವಿದ್ಯಾಧರ ಜಲವಳ್ಳಿ ಮೊದಲ ಬಾರಿಗೆ ಭಸ್ಮಾಸುರನಾಗಿಯೂ, ಕಣ್ಣಿಮನೆ ಗಣಪತಿ ಭಟ್ ಹನುಮಂತನಾಗಿಯೂ ರಂಗವೇರಲಿದ್ದಾರೆ. ಮತ್ತೋರ್ವ ಭವಿಷ್ಯದ ಯುವ ಪ್ರತಿಭೆ ರಾಘವೇಂದ್ರ ಆಚಾರ್ಯ ಇವರ ಭಾಗವತಿಕೆ, ನಿರ್ದೇಶನದ ಈ ಪ್ರದರ್ಶನದಲ್ಲಿ ಸತೀಶ ಕೆದಿಲಾಯ ಹಾಗೂ ಬ್ರಹ್ಮೂರು ಶಂಕರ ಭಟ್ ಸಹಗಾಯಕರಾಗಿ ನುರಿತ ನಿರ್ವಹಣೆ ತೋರಲಿದ್ದಾರೆ.
ಪ್ರವೇಶ ಪತ್ರ ಮತ್ತು ಇತರೆ ವಿವರಗಳಿಗೆ ಸಂಯೋಜಕ ರಮೇಶ್ ಬೇಗಾರು (9448101708) ಇವರನ್ನು ಸಂಪರ್ಕಿಸಬಹುದು.
ಪ್ರಸಂಗಗಳು
ಪಟ್ಟಾಭಿಷೇಕ - ಭಸ್ಮಾಸುರ - ಚೂಡಾಮಣಿ
ಎಲ್ಲಿ?
ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಂಗಳೂರು
ಯಾವಾಗ?
ಜುಲೈ 12, ಶುಕ್ರವಾರ ರಾತ್ರಿ 10 ರಿಂದ.