ಆ ಮಗು ಯಾರದು?
ದೃಶ್ಯ-1
ಮಧ್ಯರಾತ್ರಿ, ಅದೊಂದು ಪುಟ್ಟ ಹಳ್ಳಿ. ಹಗಲಿಡೀ ದುಡಿದ ಜೀವಗಳು ನೆಮ್ಮದಿಯ ನಿದ್ದೆಯಲ್ಲಿವೆ. ಅಂಥ ನಿಶ್ಶಬ್ದ ಸಮಯದಲ್ಲಿ ಹಸುಗೂಸಿನ ಅಳು ಆ ಮನೆಯವರ ನಿದ್ದೆಗೆ ಭಂಗ ತಂದಿತು. ಅದು ಹಸುಗೂಸಿನ ಅಳುವೇ ಅಥವಾ ಯಾವುದಾದರೂ ಬೆಕ್ಕಿನ ಕೂಗೇ ಎಂಬ ಅನುಮಾನ ಮನೆಯೊಡಯನಿಗೆ ಮೂಡದಿರಲಿಲ್ಲ. ಆದರೆ ಬಾಯಾರಿದ ಮಗುವೊಂದು ಅಳುತ್ತಿರುವ ಸದ್ದೇ ಅದು ಎಂಬುದು ಮನೆಯೊಡತಿಗೆ ಅರ್ಥವಾಯಿತು. ಕೂಡಲೇ ಎದ್ದು ಎಲ್ಲರೂ ಹೊರಗೆ ಬಂದರು.
ಆ ವೇಳೆಗೆ ಪಕ್ಕದ ಮನೆಯವರೂ ಎದ್ದು ಹೊರಗೆ ಬಂದಿದ್ದರು. ಹೊರಗೆ ಮಂಜು ಸುರಿಯುತ್ತಿದೆ. ಭಯಂಕರ ಚಳಿ ಕೊರೆಯುತ್ತಿದೆ. ಅಂತಹ ಚಳಿಯಲ್ಲಿ ಯಾರ ಮಗು ಅಳುತ್ತಿರುವುದು ಎಂಬುದೇ ಅವರ ಅನುಮಾನಕ್ಕೆ ಕಾರಣ. ಅನುಮಾನ ಬರಲು ಆ ಗ್ರಾಮದಲ್ಲಿ ಯಾರೂ ಗರ್ಭಿಣಿಯರು ಇರಲಿಲ್ಲ. ಗರ್ಭಿಣಿಯರು ಇಲ್ಲದೆ ಹೆರಿಗೆಯಾಗುವುದಾದರೂ ಹೇಗೆ ಎಂಬ ಸಂಶಯದಿಂದಲೇ ಅವರು ಚಳಿಯಲ್ಲಿ ಹೊರಗೆ ಬಂದಿದ್ದರು.
ಶಬ್ದ ಬರುತ್ತಿರುವ ಕಡೆ ಟಾರ್ಚ್ ಬಿಟ್ಟು ನೋಡಿದಾಗ ಅಲ್ಲಿದ್ದವರೆಲ್ಲರೂ ದಂಗು ಬಡಿಯುವಂತೆ ಹಳೇ ಬಟ್ಟೆಯಲ್ಲಿ ಸುತ್ತಿದ ಕೆಲವೇ ಕಲವು ಗಂಟೆಗಳ ಕೆಳಗೆ ಜನಿಸಿದ ಮಗುವೊಂದು ಅಳುವ ತ್ರಾಣವೂ ಇಲ್ಲದೆ ಚಳಿಗೆ ನಡುಗುತ್ತಿದೆ. ಅದನ್ನು ನೋಡಿದ ಕೂಡಲೇ ಮನೆಯ ಯಜಮಾನಿ ಲಕ್ಷ್ಮಿನರಸಮ್ಮ ಕೂಡಲೇ ಮಗುವನ್ನು ಎದೆಗೆ ಅಪ್ಪಿಕೊಂಡು ಮನೆಯೊಳಗೆ ತಂದಳು. ಒಲೆಯ ಮೇಲೆ ಪಾತ್ರೆಯಲ್ಲಿಟ್ಟಿರುವ ಹಾಲು ತಂದು ಮಗುವಿನ ತುಟಿಗೆ ಸವರಿದಳು. ಹಾಲು ಕುಡಿಯಲೂ ತಿಳಿಯದ ಹಾಲುಗಲ್ಲದ ಕೂಸು ಚಳಿಗೆ ನಡುಗುತ್ತಲೇ ತುಟಿಗೆ ಸವರಿದ ಹಾಲನ್ನು ನಾಲಿಗೆಯಿಂದ ಸವರಿಕೊಂಡಿತು.
ಒಲೆಯಲ್ಲಿ ಇನ್ನೂ ಇರುವ ಕೆಂಡಗಳ ಮೇಲೆ ಒಂದಷ್ಟು ತರಗೆಲೆಗಳನ್ನು ಹಾಕಿ ಊದು ಕೊಳವೆಯಿಂದ ಬೆಂಕಿ ಹಚ್ಚಿ ಅದರ ಶಾಖದಲ್ಲಿ ತಣ್ಣಗಿದ್ದ ಮಗುವಿನ ದೇಹಕ್ಕೆ ಶಾಖ ಕೊಟ್ಟಳು. ಸ್ವಲ್ಪ ಹಾಲು ಕುಡಿದು ಬೆಂಕಿಯ ಶಾಖಕ್ಕೆ ಚಳಿ ಬಿಟ್ಟ ಕೂಡಲೇ ಮಗು ನೆಮ್ಮದಿಯ ನಿದ್ದೆಗೆ ಜಾರಿತು. ಮಾರನೇ ದಿನ ಬೆಳಗಾಗುತ್ತಲೇ ಲಕ್ಷ್ಮಿನರಸಮ್ಮನ ಮನೆಯ ಮುಂದೆ ಊರಿಗೆ ಊರೇ ಬಂದು ತಲುಪಿತ್ತು. ರಾತ್ರಿ ಮಗು ಸಿಕ್ಕಿರುವ ವಿಚಾರ ಇಡೀ ಊರಿಗೇ ತಿಳಿದಿತ್ತು. ಅದನ್ನು ಅಲ್ಲಿ ಬಿಟ್ಟವರ್ಯಾರು ಎಂಬ ಬಗ್ಗೆ ನಾನಾ ರೀತಿಯ ಚರ್ಚೆ ನಡೆಯುತ್ತಿತ್ತು. ಈ ಲಕ್ಷ್ಮಿನರಸಮ್ಮನಿಗೆ ಒಬ್ಬನೇ ಮಗ. ಆತನ ಹೆಸರು ನಾರಾಯಣಸ್ವಾಮಿ. ಮದುವೆ ಪ್ರಾಯಕ್ಕೆ ಬಂದಿರುವ ಮಗನಿಗೆ ಲಕ್ಷ್ಮಿನರಸಮ್ಮ ವಧುವಿನ ಅನ್ವೇಷಣೆಯಲ್ಲಿದ್ದಳು. ಅದೇ ಸಮಯದಲ್ಲಿ ಹಸುಗೂಸು ಸಿಕ್ಕಿದ್ದು ಅವಳಿಗೆ ಸಂತಸ ತಂದಿತ್ತಾ? ಗೊತ್ತಿಲ್ಲ. ಆದರೆ ಅಂದು ರಾತ್ರಿ ಸಿಕ್ಕಿದ ಆ ಮಗುವನ್ನು ಆಕೆ ಮುತುವರ್ಜಿಯಿಂದಲೇ ಸಾಕುತ್ತಿದ್ದಳು.
ದೃಶ್ಯ-2
ಗೊಲ್ಲಚಿನ್ನಪ್ಪನ ಹಳ್ಳಿಯ ಮಧ್ಯದಲ್ಲಿರುವ ದೇವಸ್ಥಾನ. ಅದೇ ಗ್ರಾಮದ ವೆಂಕಟರಾಯಪ್ಪನ ಮಗಳು ಕಳಾವತಿಗೆ ಅಂದು ಮದುವೆ. ರಾತ್ರಿಯಲ್ಲಿ ಅರಿಶಿಣ ಹಚ್ಚುವ ಕಾರ್ಯಕ್ಕೆ ಎಲ್ಲ ಸಿದ್ಧತೆ ನಡೆದಿದೆ. ಆಕಾಶದಲ್ಲಿ ಮೋಡ ಕವಿದ ವಾತಾವರಣ. ಈಗಲೋ ಆಗಲೋ ಮಳೆ ಬರುವ ಸೂಚನೆಗಳಿದೆ. ಇನ್ನೂ ವರನ ಕಡೆಯವರು ಬರಲಿಲ್ಲವಲ್ಲಾ, ಅವರು ಮಳೆಗೆ ಸಿಕ್ಕಿದರೋ ಎಂಬ ಆತಂಕ ವೆಂಕಟರಾಯಪ್ಪನ ಮುಖದಲ್ಲಿ ಎದ್ದು ಕಾಣುತ್ತಿದೆ.
ನಿಮಿಷಕ್ಕೆ ಒಂದು ಬಾರಿ ಹೊರಗೆ ಬಂದು ಗ್ರಾಮದ ಪ್ರಮುಖ ಬೀದಿಯ ಕಡೆ ನೋಡಿ ಮತ್ತೆ ದೇವಸ್ಥಾನದ ಒಳಗೆ ಹೋಗುತ್ತಿದ್ದಾನೆ.
ವರನ ಆಗಮನ ಆದ ಕೂಡಲೇ ಜೋರು ಬಿರುಗಾಳಿ ಬೀಸತೊಡಗಿತು. ದಪ್ಪ ದಪ್ಪ ಮಳೆ ಹನಿಗಳು ಬೀಳತೊಡಗಿತು. ಗಾಳಿ ಜೋರು ಬೀಸಿದ ಪರಿಣಾಮ ಕರೆಂಟ್ ಕೈಕೊಟ್ಟಿತು. ಹಳ್ಳಿಯಲ್ಲಿ ವಿಶಾಲವಾದ ಜಾಗದಲ್ಲಿ ನಿರ್ಮಿಸಿದ್ದ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಮದುವೆಗೆ ಬಂದ ಅತಿಥಿಗಳಿಗೆ ಸಾಕಾಗುವಷ್ಟು ಸ್ಥಳಾವಕಾಶ ಇತ್ತು. ಹಾಗಾಗಿಯೇ ವರನ ಕಡೆಯವರಿಗಾಗಿ ಮೀಸಲಿದ್ದ ಕೊಠಡಿಗಳಿಗೆ ಅವರನ್ನು ತಲುಪಿಸುವ ಜವಾಬ್ದಾರಿಯನ್ನು ಸ್ವತಃ ತಾನೇ ವಹಿಸಿಕೊಂಡ ವೆಂಕಟರಾಯಪ್ಪ ಕೈಯಲ್ಲಿ ಪೆಟ್ರೋಮಾಕ್ಸ್ ಲೈಟ್ ಹಿಡಿದು ಅವರ ಕೊಠಡಿಗಳಿಗೆ ದಾರಿತೋರಿಸಿದ.
ಮಳೆ ಜೋರಾದ ಕಾರಣ ಎಲ್ಲರೂ ಊಟ ಮಾಡಿ ನಂತರ ಮುಂದಿನ ಕಾರ್ಯಕ್ರಮ ನೋಡೋಣ ಎಂದು ವಿಶಾಲವಾದ ಊಟದ ಕೋಣೆಯಲ್ಲಿ ಸೇರಿದರು. ಪೆಟ್ರೋಮಾಕ್ಸ್ ಲೈಟ್ ಬೆಳಕಿನಲ್ಲಿ ಊಟ ಮಾಡಿದರು. ಅಷ್ಟೊತ್ತಿಗೆ ಮಳೆ ಸ್ವಲ್ಪ ಕಡಿಮೆ ಆಯಿತು. ಇನ್ನು ವಧು ವರರಿಗೆ ಅರಿಶಿನ ಹಚ್ಚುವ ಕಾರ್ಯಕ್ರಮ ನಡೆಸಲು ವಧುವರರ ತಾಯಂದಿರು ಅಗತ್ಯ ವಸ್ತುಗಳನ್ನು ಕಲ್ಯಾಣ ಮಂಟಪದಲ್ಲಿ ಜೋಡಿಸುತ್ತಿದ್ದರು. ಸಿದ್ಧತೆಗಳು ಪೂರ್ಣಗೊಂಡ ಕೂಡಲೇ ವಧುವರರಿಗೆ ಆಹ್ವಾನ ಬಂತು. ವರ ಬಂದು ಮಣೆ ಮೇಲೆ ಕೂತ. ಆದರೆ ವಧು ಕಳಾವತಿ ಪತ್ತೆ ಇಲ್ಲ! ಇಷ್ಟು ಜೋರಾಗಿ ಬೀಸುತ್ತಿರುವ ಗಾಳಿ ಮಳೆಯಲ್ಲಿ ಅವಳು ಹೋಗುವುದಾದರೂ ಎಲ್ಲಿಗೆ ಎಂದು ಇಡೀ ದೇವಸ್ಥಾನ ಹುಡುಕಿದ್ದಾಯಿತು. ಆದರೆ ಆಕೆ ಪತ್ತೆ ಇಲ್ಲ. ಅವಳ ಸ್ನೇಹಿತರನ್ನು ವಿಚಾರಿಸಲಾಯಿತು. 'ಇಷ್ಟೊತ್ತು ಇಲ್ಲೇ ಇದ್ದಳು. ಈಗ ಎಲ್ಲಿಗೆ ಹೋದಳು ನಾವು ನೋಡಲಿಲ್ಲ' ಎಂದು ಎಲ್ಲರೂ ಹೇಳಿದರು. ಸುಮಾರು 40 ಮನೆ ಇರುವ ಗೊಲ್ಲಚಿನ್ನಪ್ಪನಹಳ್ಳಿಯಲ್ಲಿ ಬಿರುಗಾಳಿ ಮಳೆ ಇರುವ ಸಂದರ್ಭ ಹಸೆಮಣೆ ಏರಬೇಕಿದ್ದ ವೆಂಕಟರಾಯಪ್ಪನ ಮಗಳು ಕಾಣೆಯಾಗಿದ್ದಾಳೆ ಎಂಬ ಸುದ್ದಿ ವೆಂಕಟರಾಯಪ್ಪನಿಗೆ ಮಾತ್ರವಲ್ಲ ಇಡೀ ಗ್ರಾಮಕ್ಕೆ ಅವಮಾನ ಮಾಡಿತ್ತು. ಹಸೆಮಣೆ ಏರಿದ್ದ ವರ ಅಲ್ಲಿಂದ ಇಳಿದು ತನ್ನ ಕೋಣೆಗೆ ಹೋದ. ವರನ ಹೆತ್ತವರು ವಧುವಿನ ತಂದೆ ತಾಯಿಗೆ ಬಂದಂತೆ ಬೈದರು. ಎಲ್ಲವನ್ನುಸಹಿಸಿಕೊಂಡ ವೆಂಕಟರಾಯಪ್ಪನ ಕುಟುಂಬ ಕಳಾವತಿ ಎಲ್ಲಿ ಹೋದಳು ಎಂಬ ಚಿಂತೆಯಲ್ಲಿಯೇ ರಾತ್ರಿ ಕಳೆಯಿತು.
ದೃಶ್ಯ-3
ದೊಡ್ಡತಮ್ಮನಹಳ್ಳಿಯ ಲಕ್ಷ್ಮಿನರಸಮ್ಮನ ಮನೆ ಬಾಗಿಲು ಒಂದೇ ಸಮನೆ ಬಡಿಯಲಾಗುತ್ತಿದೆ. ಲಕ್ಷ್ಮಿನರಸಮ್ಮ ಮತ್ತು ಆಕೆಯ ಗಂಡ ಪಕ್ಕದ ಊರಿನಲ್ಲಿರುವ ವೆಂಕಟರಾಯಪ್ಪನ ಮಗಳ ಮದುವೆಗೆ ಹೋಗಿದ್ದಾರೆ. ಮನೆಯಲ್ಲಿರುವುದು ಅವರ ಮಗ ನಾರಾಯಣಸ್ವಾಮಿ ಮಾತ್ರ. ಆತ ಮನೆಯಲ್ಲಿ ಮಲಗಿದ್ದಾನಾದರೂ ನಿದ್ದೆ ಬಂದಿಲ್ಲ. ಹಾಗಾಗಿ ಹೊರಗೆ ಬಾಗಿಲು ಬಡಿದ ಶಬ್ದ ಆಗುತ್ತಲೇ ಎದ್ದು ಲೈಟ್ ಹಾಕಿದ. ಆಗಲೇ ಟೈಮ್ 12 ಗಂಟೆ ಆಗಿದೆ. ಹೊರಗೆ ವಿಪರೀತವಾದ ಗಾಳಿ, ಮಳೆ ಇದೆ. ಇಂತಹ ಸಮಯದಲ್ಲಿ ಬಂದಿರುವರು ಯಾರು ಎಂಬ ಅನುಮಾನದಿಂದಲೇ ಬಂದು ಬಾಗಿಲು ತೆರೆದ.
ದೃಶ್ಯ-4
ರಾತ್ರಿ ವಿಪರೀತವಾದ ಮಳೆ ಸುರಿದ ಕಾರಣ ಆಕಾಶ ಶುಭ್ರವಾಗಿದೆ. ಹೊಲಗದ್ದೆಗಳು ಕೆಂಪು ನೀರಿನಿಂದ ತೊಯ್ಯುತ್ತಿವೆ. ಮುಂಜಾನೆಯೇ ಎದ್ದು ಮನೆಗೆ ಬಂದ ಲಕ್ಷ್ಮಿನರಸಮ್ಮನಿಗೆ ಏನೋ ಅನುಮಾನ. ಕೊಟ್ಟಿಗೆಯಲ್ಲಿರುವ ದನಗಳನ್ನು ಬಿಚ್ಚಿ ಹೊರಗೆ ಕಟ್ಟಿ, ಕಸಗುಡಿಸಬೇಕಿದ್ದ ಮಗ ನಾರಾಯಣಸ್ವಾಮಿ ಪತ್ತೆ ಇಲ್ಲ. ರಾತ್ರಿ ತಾವು ಮದುವೆಗೆ ಹೋಗಿದ್ದೇವೆ ಎಂಬ ವಿಷಯ ತಿಳಿದೂ ಎಲ್ಲಿಗೆ ಹಾಳಾಗಿ ಹೋದ ಎದು ಬೈಯುತ್ತಲೇ ಆಕೆ ಮನೆಯ ಕೆಲಸಗಳಲ್ಲಿ ತೊಡಗಿದಳು. ಗಂಡನೂ ಆಕೆಯ ಸಹಾಯಕ್ಕೆ ನಿಂತು ನಾವು ಬರುವುದಿಲ್ಲ ಎಂದು ಇಸ್ಪೀಟ್ ಆಡಲು ಹೋಗಿರುತ್ತಾನೆ. ಬರಲಿ ಚಪ್ಪಲಿ ಸೇವೆ ಮಾಡೋಣ ಎಂದು ಗೊಣಗುತ್ತಲೇ ಕೆಲಸ ಮಾಡಿದರು.
ಅಡುಗೆ ರೆಡಿಯಾದರೂ ಮಗನ ಸುಳಿವಿಲ್ಲದ ಕಾರಣ ಏನೋ ಶಂಕೆ ಇಬ್ಬರನ್ನೂ ಕಾಡಲಾರಂಭಿಸಿತು. ಅದೇ ಸಮಯಕ್ಕೆ 10 ಗಂಟೆ ಬಸ್ಸು ಚಿಕ್ಕಬಳ್ಳಾಪುರದಿಂದ ದೊಡ್ಡತಮ್ಮನಹಳ್ಳಿಯ ನಿಲ್ದಾಣದಲ್ಲಿ ಬಂದು ನಿಂತಿತು. ಬಸ್ಸಿನಿಂದ ನಾರಾಯಣಸ್ವಾಮಿ ಮತ್ತು ಕಳಾವತಿ ನೂತನ ದಂಪತಿಗಳ ಗೆಟಪ್ನಲ್ಲಿ ಇಳಿದರು. ಇದನ್ನು ಕಂಡ ಗ್ರಾಮಸ್ಥರು ಗುಸುಗುಸು ಮಾತನಾಡಲಾರಂಭಿಸಿದರು. ಊಟ ಮಾಡಲೂ ಬಾರದ ಮಗನಿಗಾಗಿ ಕಾದು ಕಾದು ಸುಸ್ತಾಗಿ ಹೊರಗೆ ಅಕ್ಕಿಯಲ್ಲಿ ಕಲ್ಲು ಆರಿಸುತ್ತಾ, ಇನ್ನೂ ಅಂಬೆಗಾಲಿಡುತ್ತಿರುವ ಮಗುವನ್ನು ನೋಡಿಕೊಂಡು ಕುಳಿತಿದ್ದ ಲಕ್ಷ್ಮಿನರಸಮ್ಮನಿಗೆ ತನ್ನ ಮನೆಯ ಕಡೆಯೇ ಬರುತ್ತಿರುವ ನೂತನ ದಂಪತಿಗಳು ಕಾಣಿಸಿ ಯಾರೆಂದು ನೋಡುತ್ತಿರುವಾಗಲೇ ಎದುರಿಗೆ ಬಂದು ನಿಂತಿದ್ದರು ಮಗ ನಾರಾಯಣಸ್ವಾಮಿ ಮತ್ತು ಸೊಸೆ ಕಳಾವತಿ.
ದೃಶ್ಯ-5
ನಾರಾಯಣಸ್ವಾಮಿ ಮತ್ತು ಕಳಾವತಿ ಮದುವೆ ಆಗಿ ಮೂರುವರ್ಷಗಳೇ ಕಳೆದಿವೆ. ಇನ್ನೂ ಮಕ್ಕಳಾಗಿಲ್ಲ. ಅಂದು ಮಧ್ಯ ರಾತ್ರಿ ಲಕ್ಷ್ಮಿನರಸಮ್ಮನಿಗೆ ದೊರೆತ ಮಗುವಿಗೆ ಈಗ ನಾಲ್ಕುವರ್ಷ. ಅದು ಶಾಲೆಗೆ ಹೋಗುತ್ತಿದೆ. ಆ ಮಗುವನ್ನು ಹೆತ್ತ ಮಗುವಿಗಿಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾಳೆ ಕಳಾವತಿ. ಈಗ ಗ್ರಾಮದಲ್ಲಿ ಕೇಳಿಬರುವ ಮಾತುಗಳೆಂದರೆ ಮದುವೆಗೆ ಮುಂಚಿನಿಂದಲೇ ನಾರಾಯಣಸ್ವಾಮಿ ಮತ್ತು ಕಳಾವತಿ ನಡುವೆ ಪ್ರೀತಿ ಇತ್ತು. ಅವರು ಮದುವೆಗೆ ಮೊದಲೇ ದೈಹಿಕವಾಗಿ ಒಂದಾಗಿದ್ದರು. ಅದರ ಪರಿಣಾಮವಾಗಿ ಕಳಾವತಿ ಗರ್ಭಿಣಿಯಾದಳು. ಅಪಾಯದ ಹಂತ ತಲುಪವವರೆಗೆ ಮನೆಯವರಿಗೆ ವಿಚಾರ ಗೊತ್ತಾಗಲಿಲ್ಲ. ಮನೆಯವರಿಗೆ ಗೊತ್ತಾಗುವ ವೇಳೆಗೆ ಗರ್ಭಪಾತ ಮಾಡಿದರೆ ಅಪಾಯ ಎಂಬ ಸಂದೇಶ ವೈದ್ಯರಿಂದ ಬಂತು. ಅದು ಹೊರಗೆ ತಿಳಿದರೆ ಮರ್ಯಾದೆಗೆ ಕುಂದು ಬರುತ್ತದೆ ಎಂಬ ಹೆದರಿಕೆಯಿಂದ ಅವರು ಹೆರಿಗೆಯಾಗುವವರೆಗೆ ಅವಳನ್ನು ಸಂಬಂಧಿಕರ ಮನೆಯಲ್ಲಿ ಬಚ್ಚಿಟ್ಟಿದ್ದರು. ಹೆರಿಗೆಯಾದ ಕೂಡಲೇ ಮಗುವನ್ನು ತಂದೆ ಮನೆಯ ಮುಂದೆ ಬಿಟ್ಟು ಪರಾರಿಯಾಗಿದ್ದರು. ಅದನ್ನು ಲಕ್ಷ್ಮಿನರಸಮ್ಮ ಸಾಕುತ್ತಿದ್ದಳು. ಇನ್ನಾದರೂ ಮಗಳು ನಾರಾಯಣಸ್ವಾಮಿಯನ್ನು ಮರೆತು ಮತ್ತೊಂದು ಮದುವೆ ಆಗುತ್ತಾಳೆ ಎಂದು ಭಾವಿಸಿದ ವೆಂಕಟರಾಯಪ್ಪ ಸಂಬಂಧ ಹುಡುಕಿದ್ದ. ಆದರೆ ಅವಳು ಮದುವೆ ದಿನ ಓಡಿ ಬಂದು ನಾರಾಯಣಸ್ವಾಮಿಯ ಕೈ ಹಿಡಿದಳು. ತಮ್ಮದೇ ಮಗುವಾದ ಕಾರಣ ನಾರಾಯಣಸ್ವಾಮಿ ಮತ್ತು ಕಳಾವತಿ ದಂಪತಿ ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ ಎಂಬ ಗಾಳಿಸುದ್ದಿ. ಈ ಮಾತುಗಳು ಲಕ್ಷ್ಮಿನರಸಮ್ಮನ ಕಿವಿಗೂ ಮುಟ್ಟಿವೆ. ಆದರೆ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇನ್ನ ವೆಂಕಟರಾಯಪ್ಪ ರತ್ನಮ್ಮನ ಕುಟುಂಬಕ್ಕೆ ವಿಚಾರ ಮುಟ್ಟಿದ್ದರೂ ಅವರು ಬಾಯಿ ಬಿಡುತ್ತಿಲ್ಲ. ಹಾಗಾದರೆ ಗ್ರಾಮಸ್ಥರ ಮಾತುಗಳು ಸತ್ಯವೇ ಎಂದು ಕಳಾವತಿಯನ್ನು ಕೇಳಿದರೆ ತುಟಿಯಲ್ಲೇ ನಗುತ್ತಾ 'ಅಂದು ಮಗು ಸತ್ತೇ ಹೋಗುತ್ತೇನೋ ಎಂದು ಎಷ್ಟು ಹೆದರಿಕೊಂಡಿದ್ದೆ ಗೊತ್ತಾ. ಅದೃಷ್ಟಕ್ಕೆ ಏನೂ ಆಗಲಿಲ್ಲ' ಎಂದು ಕಣ್ಣು ಮಿಟುಕಿಸುತ್ತಾಳೆ.
ಆತನ ದುಗುಡ ಕಂಡ ಆತನ ಹೆಂಡತಿ ರತ್ನಮ್ಮ 'ಬರ್ತಾರೆ ಯಾಕಷ್ಟು ತಲೆ ಕೆಡಿಸಿಕೊಳ್ತೀರಾ ಸ್ವಲ್ಪ ಹೊತ್ತು ಸುಮ್ನಿರಿ' ಎಂದು ತಿವಿದಳು. ಅದೇ ಸಮಯಕ್ಕೆ ಯಾರೋ 'ಅಗೋ ವರನ ಕಡೆಯವರ ಲಾರಿ ಬಂತು' ಎಂದು ಕೂಗಿದರು. ವೆಂಕಟರಾಯಪ್ಪ ಹೊರಗೆ ಓಡಿ ಬಂದು ವರೋಪಚಾರಕ್ಕಾಗಿ ಸಿದ್ಧವಾಗಿ ನಿಂತ.
ನಂದಿ ಬೆಟ್ಟದ ತಪ್ಪಲಿನಲ್ಲಿರುವ ಒಂದು ಗ್ರಾಮ ವರನದು. ಆಸ್ತಿ ಅಪಾರವಾಗಿದ್ದು, ತಂದೆ ತಾಯಿಗೆ ಒಬ್ಬನೇ ಮಗನಾದ ಕಾರಣ ತನ್ನ ಮಗಳ ಭವಿಷ್ಯಕ್ಕೆ ಚಿಂತೆ ಇಲ್ಲ ಎಂದು ಅದೇ ಸಂಬಂಧವನ್ನು ಕಾಯಂಗೊಳಿಸಿದ್ದ ವೆಂಕಟರಾಯಪ್ಪ. ಇರುವ ಒಬ್ಬಳೇ ಮಗಳು ಗಂಡನ ಮನೆಯಲ್ಲಿ ನೆಮ್ಮದಿಯಾಗಿದ್ದರೆ ತಮ್ಮ ಪಾಡು ಏನಾದರಾಗಲಿ ಎಂಬ ನಿರಾಳ ಭಾವ ಆತನಲ್ಲಿ ಮೂಡಿತ್ತು.
- ಅಶ್ವತ್ಥನಾರಾಯಣ್ ಎಲ್.
sathyajns@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.