ನಿಮ್ಮ ಆರೋಗ್ಯ ನಿಮ್ಮ ಆಹಾರದಲ್ಲಿ!
ಕೊಲೆಸ್ಟರಾಲ್ ಕುರಿತಂತೆ ಈವರೆಗೆ ಸಾಕಷ್ಟು ವಿವರವಾಗಿ ಚರ್ಚಿಸಿದ್ದೇವೆ. ಆದರೂ ಇನ್ನೊಂದಿಷ್ಟು ಟಿಪ್ಸ್ ನೀಡುವುದು ಅಗತ್ಯ ಅನ್ನಿಸಿತು. ಕೊಲೆಸ್ಟರಾಲ್ಗೆ ಸಂಬಂಧಿಸಿದ ಆಹಾರ ಪದ್ಧತಿ ಅಥವಾ ಈಗಿನವರ ಭಾಷೆಯಲ್ಲಿ 'ಕೊಲೆಸ್ಟರಾಲ್ ಡಯಟ್' ಯಾರಲ್ಲಿ ಕೊಲೆಸ್ಟರಾಲ್ ಸಮಸ್ಯೆ ಇದೆಯೋ ಅಂಥವರಲ್ಲಿ ಅಂದರೆ ಎಲ್ಡಿಎಲ್ (ಕೆಟ್ಟ) ಕೊಲೆಸ್ಟರಾಲ್ ಜಾಸ್ತಿ ಇದ್ದು, ಎಚ್ಡಿಎಲ್ (ಒಳ್ಳೆ) ಕೊಲೆಸ್ಟರಾಲ್ ಕಡಿಮೆ ಇದೆಯೊ ಅಂತಹ ವ್ಯಕ್ತಿಗಳಲ್ಲಿ ಮಾತ್ರ ಪರಿಣಾಮ ಬೀರುತ್ತದೆ. ನಾವಿಲ್ಲಿ ಹೇಳಿರುವುದು ಕೊಲೆಸ್ಟರಾಲ್ ಮಟ್ಟ ಏರುಪೇರಾದಾಗ ಅದನ್ನು ಆಹಾರದ ಮೂಲಕ ಸರಿಪಡಿಸಿಕೊಳ್ಳುವುದು ಹೇಗೆ ಎನ್ನುವ ಕುರಿತು. ಆರೋಗ್ಯವಂತರು ಈ ಡಯಟ್ ಮಾಡಬಾರದು ಎಂದಲ್ಲ. ಇದನ್ನು ಆಧಾರವಾಗಿಟ್ಟುಕೊಂಡು ಅವರು ತಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿ ರೂಢಿಸಿಕೊಳ್ಳುವ ಮೂಲಕ ಸಮಸ್ಯೆ ಬರದಂತೆ ನೋಡಿಕೊಳ್ಳಲು ಸಾಧ್ಯವಿದೆ.
ಕೊಲೆಸ್ಟರಾಲ್ ಸಮಸ್ಯೆ ಇರುವವರು ಅಥವಾ ಇಲ್ಲದವರು, ಯಾರೇ ಆಗಿರಲಿ. ವರ್ಷವಿಡೀ ಒಂದೇ ಹಣ್ಣು, ತರಕಾರಿ, ಕಾಳುಗಳಿಗೆ ಜೋತು ಬೀಳುವುದು ಸರಿಯಲ್ಲ. ಆಹಾರದಲ್ಲಿ ಸಾಧ್ಯವಾದಷ್ಟು ವೈವಿಧ್ಯ ಇರಬೇಕು. ಮತ್ತು ಆ ವೈವಿಧ್ಯ ಸತ್ವಯುತವಾಗಿರಬೇಕು. ಒಂದನ್ನೇ ಅತಿಯಾಗಿ ಸೇವಿಸುವುದಕ್ಕಿಂತ, ಅದೇ ರೀತಿಯ ಹಲವು ಪದಾರ್ಥಗಳನ್ನು ಅಲ್ಪಪ್ರಮಾಣದಲ್ಲಿ ಸೇವಿಸುವುದು ಯಾವಾಗಲೂ ಉತ್ತಮ. ವೈವಿಧ್ಯವನ್ನೂ ಕಾಪಾಡಿಕೊಂಡ ಹಾಗಾಯಿತು, ಕೊಲೆಸ್ಟರಾಲ್ ಡಯಟ್ ಪಾಲಿಸಿದಂತೆಯೂ ಆಯಿತು. ನಾವಿಲ್ಲಿ ಚರ್ಚಿಸಿರುವುದು ದೈನಂದಿನ ಜೀವನದಲ್ಲಿ ಪಾಲಿಸಲು ಆಗದಂಥ ವಿಚಾರಗಳೇನಲ್ಲ. ಉದಾಹರಣೆಗೆ ಹೇಳುವುದಾದರೆ, ದಿನಕ್ಕೆ ಎರಡು ಬೆಳ್ಳುಳ್ಳಿ ಎಸಳು ಅಥವಾ ಈರುಳ್ಳಿ ತಿನ್ನುವುದು, ಅಡುಗೆಯಲ್ಲಿ ದ್ವಿದಳ ಧಾನ್ಯಗಳ ಬಳಕೆ, ಹಣ್ಣುಗಳ ವಿಚಾರ ಯಾವುದೂ ಕಷ್ಟಕರವಾದದ್ದಲ್ಲ ಎನ್ನುವುದು ನನ್ನ ಭಾವನೆ.
ಆ್ಯಂಟಿಆಕ್ಸಿಡೆಂಟ್ಗಳು ಜಾಸ್ತಿ ಇರುವ ಹಣ್ಣು, ತರಕಾರಿ, ದ್ವಿದಳ ಧಾನ್ಯಗಳನ್ನು ಸಾಧ್ಯವಾದಷ್ಟು ಹೆಚ್ಚು ಬಳಸಿ. ವಿಟಮಿನ್ ಇ, ಸಿ ಮತ್ತು ಬೀಟಾ ಕ್ಯಾರೊಟಿನ್ ಹೆಚ್ಚಿರುವ ಪದಾರ್ಥಗಳಾದರೆ ಬಹಳ ಒಳ್ಳೆಯದು. ಕರಗುವ ನಾರನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ಓಟ್ಸ್ನಂಥ ಕಾಳುಗಳನ್ನು ತಿನ್ನುವುದು ಒಳ್ಳೆಯದು. ಒಮೇಗಾ-6 ಕೊಬ್ಬು ಜಾಸ್ತಿ ಇರುವ ಕಾರ್ನ್ ಎಣ್ಣೆ, ಕುಸುಂಬೆಗಳ ಬಳಕೆ ಕಡಿಮೆ ಮಾಡಿದಷ್ಟೂ ಉತ್ತಮ. ಆಲಿವ್ ಎಣ್ಣೆ, ಕೆನೊಲಾ ಎಣ್ಣೆ ಮೊದಲಾದವು ಒಳ್ಳೆಯದು. ಸಂಸ್ಕರಿತ ಆಹಾರಗಳನ್ನು ತಿನ್ನುವ ಅಭ್ಯಾಸ ಬಿಡಲು ಪ್ರಯತ್ನಿಸಿ. ಸ್ಯಾಚುರೇಟೆಟ್ ಫ್ಯಾಟ್ಗಿಂತ ಮೊನೊ ಸ್ಯಾಟುರೇಟೆಡ್ ಕೊಬ್ಬನ್ನು ಅವಾಯ್ಡ್ ಮಾಡಿ. ಇದು ಕೆಟ್ಟ ಕೊಲೆಸ್ಟರಾಲ್ ಕಡಿಮೆ ಮಾಡುವುದು ಅಥವಾ ಹೃದ್ರೋಗ ತೊಂದರೆಯಿಂದ ಪಾರಾಗಲಷ್ಟೇ ಅಲ್ಲ, ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಲೂ ಇದು ಸಹಕಾರಿ.
ಮುಂದಿನ ಸಂಚಿಕೆಗಳಲ್ಲಿ ಇನ್ನಷ್ಟು ಆರೋಗ್ಯ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋಣ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com