ಬುದ್ಧನ ಶುದ್ಧ ಚೈತನ್ಯವೇ ಅವರು!
'ಈ ದೇಹವು ಇದೇ ಆಸನದ ಮೇಲೆ ಒಣಗಿಹೋಗಲಿ, ಮೂಳೆಮಾಂಸಗಳು ಕರಗಿಹೋಗಲಿ, ಒಂದು ಯುಗವೇ ಕಳೆದುಹೋಗಲಿ- ಸತ್ಯಸಾಕ್ಷಾತ್ಕಾರವಾಗುವವರೆಗೆ ಈ ದೇಹ ಮಾತ್ರ ತನ್ನ ಆಸನವನ್ನು ಬಿಟ್ಟು ಏಳುವುದಿಲ್ಲ!' ಈ ಮಾತುಗಳನ್ನು ನರೇಂದ್ರಾದಿ ತರುಣ ಶಿಷ್ಯರು ತಾವು ಧ್ಯಾನ ಮಾಡುತ್ತಿದ್ದ ಕಾಳೀಪುರದ ಉದ್ಯಾನಗೃಹದ ಕೋಣೆಯ ಗೋಡೆಯ ಮೇಲೆ ದೊಡ್ಡ ಅಕ್ಷರಗಳಲ್ಲಿ ಬರೆಯಲಾಯಿತು. ಇವು ಬುದ್ಧಗಯೆಯಲ್ಲಿ ದೃಢಸಂಕಲ್ಪ ಮಾಡಿ ಸತ್ಯಸಾಕ್ಷಾತ್ಕಾರ ಮಾಡಿಕೊಂಡಿದ್ದ ಗೌತಮಬುದ್ಧನ ನುಡಿಗಳು.
ಸಾಕ್ಷಾತ್ಕಾರದ ಪರಾಕಾಷ್ಠೆಯೇ ಪರಮಪ್ರೇಮ ಎಂಬುದನ್ನು ರಾಮಕೃಷ್ಣರಿಂದ ಅರಿತ ನರೇಂದ್ರನು ಕರುಣಾಮೂರ್ತಿ ಭಗವಾನ್ ಬುದ್ಧನಿಂದ ಆಕರ್ಷಿತನಾದ. ಬುದ್ಧನ ಜೀವನ ಸಂದೇಶಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ. ಬುದ್ಧನ ಕುರಿತು ಭಾವೋತ್ಸಾಹ ತೀವ್ರವಾದಂತೆ ಮನಸ್ಸು ಬುದ್ಧಗಯೆಯ ಕಡೆಗೆ ಪ್ರವಹಿಸಿತು. ಒಮ್ಮೆ ಆ ಪವಿತ್ರ ಸ್ಥಳಕ್ಕೆ ಹೋಗಿ ಬೋಧಿವೃಕ್ಷದಡಿಯಲ್ಲಿ ಧ್ಯಾನನಿರತನಾಗಬೇಕು ಎಂಬ ಹಂಬಲ ಹೆಚ್ಚಾಯಿತು. ಸರಿ ಬುದ್ಧಗಯಾಕ್ಕೆ ಹೊರಟೇಬಿಟ್ಟ. ಬುದ್ಧನಿಗೆ ಜ್ಞಾನೋದಯವಾದ ಆ ಪರಮ ಪವಿತ್ರ ಸ್ಥಳದ ದಿವ್ಯಸಾನ್ನಿಧ್ಯದಲ್ಲಿ ಅವನ ಮನಸ್ಸು ಭಾವದುಂಬಿ ಮೌನತಾಳಿತು. ಮೂವರೂ ಬೋಧಿವೃಕ್ಷದ ಕೆಳಗೆ ಕಲ್ಲಿನ ಆಸನದ ಮೇಲೆ ಕುಳಿತು ಧ್ಯಾನಮಗ್ನರಾದ. ಬುದ್ಧನ ಗುಣ-ಮಹಿಮೆಗಳನ್ನು ಭಾವಿಸುತ್ತ, ಧ್ಯಾನದಲ್ಲಿ ಮುಳುಗಿಬಿಟ್ಟ.
ಮೂರು ದಿನಗಳ ಕಾಲ ಬುದ್ಧನ ಶುದ್ಧಚೈತನ್ಯವೇ ಆಗಿ ಧ್ಯಾನಶೀಲನಾಗಿಬಿಟ್ಟಿದ್ದ ನರೇಂದ್ರ ನಾಲ್ಕನೆಯ ದಿನ ಗಯೆಯಿಂದ ಇಬ್ಬರು ಸಂಗಡಿಗರೊಡನೆ ಕೊಲ್ಕತ್ತಾಕ್ಕೆ ಹೊರಟ. ಕಾಶೀಪುರ ತಲುಪಿದ ತಕ್ಷಣ ರಾಮಕೃಷ್ಣರಲ್ಲಿ ಸಾಕ್ಷಾತ್ ಬುದ್ಧನ ಶುದ್ಧಚೈತನ್ಯವನ್ನು ಕಂಡು ನರೇಂದ್ರ ಮೂಕವಿಸ್ಮಿತನಾದ.
-ಆನಂದ ಎಸ್.ಎನ್.
anandsn193@gmail.com