ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅಪರಂಜಿ ಅಕ್ಕುಂಜೆ

ಕ್ಯಾಮೆರಾಗಳ ಕಣ್ಣು ಕೋರೈಸುವ ಬೆಳಕಿನಲ್ಲಿ ಲೆಕ್ಕ ಇಲ್ಲದಷ್ಟು ಚಕ್, ಚಕ್ ಕ್ಲಿಕ್‌ಗಳು,...

Lingaraj Badiger
Updated On : 16 Jul 2013, 6:05 am

ಕ್ಯಾಮೆರಾಗಳ ಕಣ್ಣು ಕೋರೈಸುವ ಬೆಳಕಿನಲ್ಲಿ ಲೆಕ್ಕ ಇಲ್ಲದಷ್ಟು ಚಕ್, ಚಕ್ ಕ್ಲಿಕ್‌ಗಳು, ಆಟೋಗ್ರಾಫ್‌ಗಾಗಿ ಮುತ್ತಿಕೊಳ್ಳುವ ಅಭಿಮಾನಿಗಳು, ನಗರಗಳ ಜಾಹೀರಾತು ಫಲಕಗಳಲ್ಲಿ ತನ್ನದೇ ನಗುಮುಖ... ರಾತ್ರಿ ಬೆಳಗಾಗುವುದರೊಳಗೆ ಫಲಕಗಳಿಂದ ತನ್ನ ಮುಖ ಮಾಯ, ಮನಸ್ಸಿಗೆ ಇರಿಯುವ ಆರೋಪಗಳು, ರೆಡ್‌ಕಾರ್ಪೆಟ್ ಸ್ವಾಗತ ಕೋರಿದ ಕಡೆ ಗೆಟ್‌ಔಟ್ ಎಂಬ ಕರ್ಣ ಕಠೋರ ಮಾತು...

ಇದು ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಅಶ್ವಿನಿ ಅಕ್ಕುಂಜೆ ಎಂಬ ಕ್ರೀಡಾಪಟುವಿನ ಬದುಕಿನಲ್ಲಿ ಕೆಲವೇ ಕ್ಷಣಗಳಲ್ಲಿ ಆದ ಬದಲಾವಣೆ! ನಾಯಕಿಯಂತಿದ್ದ ಅಶ್ವಿನಿ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ವಿಫಲರಾದ ದಿನದಿಂದ ವಿಲನ್! ಎರಡು ವರ್ಷಗಳ ನಿರ್ಬಂಧದ ಬಳಿಕ ಮರಳಿರುವ ಅಶ್ವಿನಿಯ ಮನಸ್ಥಿತಿ ಹೇಗಿದೆ?

ಕುಂದಾಪುರ ತಾಲೂಕಿನ ಸಿದ್ದಾಪುರದ ಅಕ್ಕುಂಜೆ ಎಂಬ ಹಸಿರ ನಡುವಿನ ಪುಟ್ಟ ಹಳ್ಳಿಯಲ್ಲಿ ಚಿದಾನಂದ ಶೆಟ್ಟಿ ಮತ್ತು ಯಶೋದ ಶೆಟ್ಟಿಗೆ ಮೂರನೇ ಮಗು ಈ ಅಶ್ವಿನಿ. ಗದ್ದೆಗಳಲ್ಲಿ ಓಡುತ್ತಾ, ದನ ಕರುಗಳನ್ನು ಮೇಯಿಸಿ, ಆಟವಾಡುತ್ತ ದೇಶಕ್ಕೆ ಚಿನ್ನದ ಪದಕ ತಂದು ಓಟದ ರಾಣಿಯಾದ ಅಶ್ವಿನಿ ಬದುಕಿನ ಹಾದಿಯಲ್ಲಿ ಕಲ್ಲು ಮುಳ್ಳುಗಳೇ ಇದ್ದವು. ಜತೆಗಿದ್ದ ಕ್ರೀಡಾಳುಗಳೇ ಒಂದಷ್ಟು ಕಲ್ಲು ತೂರಿದರು. ಕಾಲು ಎಳೆಯಲು ಪ್ರಯತ್ನಿಸಿದರು, ಆದರೆ ಭಾರತಕ್ಕೆ ಪದಕ ಗೆದ್ದ ಅಶ್ವಿನಿ ಕಾಲುಗಳ ಕಸುವಿಗೆ ಸಿಲುಕಿ ಅದೆಲ್ಲ ಕಸವಾಯಿತು.
'ಮಗಳಲ್ಲಿ ವಿಶೇಷ ಶಕ್ತಿಯನ್ನು ಬಾಲ್ಯದಲ್ಲಿಯೇ ಕಂಡಿದ್ದೆ. ಈಗಲೂ ಊರಿಗೆ ಬಂದಾಗ ನೇರ ಮನೆಗೆ ಬರುವುದಿಲ್ಲ, ಸೀದಾ ಕೊಟ್ಟಿಗೆ ನುಗ್ಗುತ್ತಾಳೆ. ದನ, ಕರು, ನಾಯಿಗಳನ್ನು ಮುದ್ದಾಡುತ್ತಾಳೆ. ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಹರಕೆ ಬಾಕಿ ಇತ್ತು. ಅದಕ್ಕೆ ಇತ್ತೀಚೆಗೆ ಊರಿಗೆ ಬಂದಾಗ 7-8 ದಿನ ಇದ್ದಳು. ಆಗ ಇದೇ ಗದ್ದೆ ಬದುವಿನಲ್ಲಿ ಸಿದ್ದಾಪುರ ಶಾಲೆ ಮೈದಾನದವರೆಗೆ 5 ಕಿಮೀ ಓಡಿ ಅಭ್ಯಾಸ ಮಾಡಿದ್ದಳು. ಪ್ರಕೃತಿ ಎಂದರೆ ಬಹಳ ಇಷ್ಟ. ಕಳೆದ ವರ್ಷ ಮಳೆಗಾಲದಲ್ಲಿ ಅರಣ್ಯ ಇಲಾಖೆಯಿಂದ ಸಸಿ ಪಡೆದು ಇಬ್ಬರು ಸೇರಿ ನೆಟ್ಟೆವು' ಎಂದು ಚಿದಾನಂದ ಶೆಟ್ಟಿ ಖುಷಿಯಿಂದ ಹೇಳುತ್ತಾರೆ.

ಪಪ್ಪಾ ನಾನು ತಪ್ಪು ಮಾಡಿಲ್ಲ
ಅಶ್ವಿನಿಯ ಸಂಕಷ್ಟ ಮತ್ತು ಸಂಘರ್ಷದ ಕತೆಯನ್ನು ಅವರ ಮಾತಿನಲ್ಲಿಯೇ ಕೇಳಿ:
'ಪಪ್ಪ ನಾನು ತಪ್ಪು ಮಾಡಿಲ್ಲ, ನೀವೆಲ್ಲ ಟೆನ್ಶನ್ ತಗೋಬೇಡಿ' ಎಂದು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸೋತಾಗ ತಂದೆಗೆ ಕರೆ ಮಾಡಿ ಹೇಳಿದೆ. ಅವರ ಮನಸ್ಸಿಗೆ ತುಂಬಾ ನೋವಾದರೂ ನನ್ನ ತಪ್ಪಿಲ್ಲ ಎಂಬುದು ಗೊತ್ತಿತ್ತು. ನಿಷೇಧದ ಎರಡು ವರ್ಷದ ಯಾತನೆ ಭೀಕರ. 12 ವರ್ಷ ಕಾಲ ಬದುಕಿನ ಭಾಗವೇ ಆಗಿದ್ದ ಮೈದಾನದಿಂದ ಹೊರ ದಬ್ಬಿದರು. ನೀವು ಯೋಚಿಸಿ, ನನಗೆ ಎಲ್ಲವೂ ಸಿಕ್ಕಿದ್ದು ಆ ಪಾಟಿಯಾಲ ಮೈದಾನದಲ್ಲಿ. ಅಲ್ಲಿಂದಲೇ ಹೊರ ಹೋಗಿ ಎನ್ನುವಾಗ ತುಂಬಾ ಸಂಕಟವಾಯಿತು. ದಿಲ್ಲಿಯ ಸೋನಿಪಥ್ ಮೈದಾನದಲ್ಲಿಯೂ ಇದೇ ರೀತಿ ಅನುಭವ.

ಕಷ್ಟ ಕಾಲದಲ್ಲಿ ಕ್ರೀಡಾ ಕ್ಷೇತ್ರದವರು ನೆರವಿಗೆ ಬರಲಿಲ್ಲ. ಅದರಲ್ಲಿಯೂ ಕರ್ನಾಟಕ ಕ್ರೀಡಾಳುಗಳು ನನ್ನನ್ನು ಶತ್ರುವಿನಂತೆ ನೋಡಿದರು. ಪದಕ ವಾಪಸ್ ಪಡೆಯಿರಿ ಎಂದರು. ತಮಗೆ ಮಾತ್ರ ಪದಕ ಬಂದ್ರೆ ಸಾಕು ಎಂಬ ಸ್ವಾರ್ಥ. ಸಮಯ ಬಂದಾಗ ಅವರ ಹೆಸರು ಹೇಳುತ್ತೇನೆ.

ಒಮ್ಮೆಲೇ ವಿವಾದ ಎದುರಿಸುವುದು ಕಷ್ಟವಾಯಿತು. ಅಭಿಮಾನದ ಮಾತನಾಡುತ್ತಿದ್ದ ಜನರು ಜರಿಯುವಾಗ ಬೇಸರ ಆಯಿತು. ಬೇಸರ ಮಾಡಿಕೊಂಡರೆ ನನ್ನ ಕೆರಿಯರ್‌ಗೆ ಹಾನಿ. ಒಂಟಿತನ ಕಾಡಿದಾಗ ಮಾಲ್‌ಗೆ ತೆರಳಿ ಸಿನಿಮಾ ನೋಡುತ್ತಾ ಬೇಸರ ಕಳೆಯಲು ಯತ್ನಿಸಿದೆ. ನಿಷೇಧ ಶಿಕ್ಷೆ ಅನುಭವಿಸುವುದಕ್ಕೆ ತಕರಾರಿಲ್ಲ. ಆದರೆ ಇಲಾಖೆ ಅಧಿಕಾರಿಗಳಿಗೆ ಇಲ್ಲ ಸಲ್ಲದ್ದನ್ನು ಹೇಳಿ ಕ್ರೀಡಾಳುಗಳೇ ನನ್ನ ನಿಷೇಧ ಅವಧಿ ಹೆಚ್ಚು ಮಾಡಲು ನೋಡಿದರು. ಮಾಧ್ಯಮದವರಿಗೆ ಹೇಳಿ ಉಲ್ಟಾ ಬರೆಸಿದರು. ನಾನು ತರಬೇತಿ ಮಾಡಲೇ ಬಾರದು ಎನ್ನುವುದು ಮೂಲ ಉದ್ದೇಶ !

ನಾವು ವಿದ್ಯಾವಂತರು ಹೌದು, ಆದರೆ ವೈದ್ಯಕೀಯ ಜ್ಞಾನ ಇರಲೇ ಬೇಕು ಎನ್ನುವುದು ಎಷ್ಟು ಸರಿ? ಚೀನಾದಿಂದ ತರಿಸಿ ನಮಗೆ ನೀಡಿದ ಸಪ್ಲಿಮೆಂಟ್ಸ್ ಆಹಾರಗಳಲ್ಲಿ ಉದ್ದೀಪನ ಮದ್ದು ಇದ್ದದ್ದು ನಮಗೆ ಗೊತ್ತಿಲ್ಲ. ಇದರಲ್ಲಿ ಕೋಚ್ ತಪ್ಪಿಲ್ಲ, ಆಹಾರ ಪರೀಕ್ಷೆಗೆ ಭಾರತದಲ್ಲಿ ಪ್ರಯೋಗಾಲಯಗಳೇ ಇಲ್ಲ.  

ನಿಷೇಧ ಇಲ್ಲದಿದ್ದರೆ ಸಾಧನೆ ಮಾಡುತ್ತಿದ್ದೆ. 2 ವರ್ಷ ತರಬೇತಿ ನಷ್ಟ ಆಗಿದೆ. ಅದನ್ನು ಮತ್ತೆ ಗಳಿಸಬೇಕಾಗಿದೆ. ಏನೂ ಇಲ್ಲದೆ ಇಷ್ಟು ಸಾಧನೆ ಮಾಡಿದ್ದೇನೆ, ಇನ್ನೂ ಮಾಡುತ್ತೇನೆ, ಒಲಿಂಪಿಕ್ಸ್ ಕಡೆ ಗಮನ ಹರಿಸಿದ್ದೇನೆ. ಪ್ರಾಯೋಜಕರು ಸಿಕ್ಕಿದರೆ ವಿದೇಶದಲ್ಲಿ ತರಬೇತಿ ಪಡೆಯುತ್ತೇನೆ.

ಚೀನಾದ ಪ್ಯಾಕ್‌ನಲ್ಲಿತ್ತು!
ಮಗಳು ಊಟ, ತಿಂಡಿ ಮಾಡುವಾಗ ಜಾಗರೂಕತೆ ವಹಿಸುತ್ತಿದ್ದಳು. ನಾವೆಲ್ಲ ಗೋಬಿ ಮಂಚೂರಿ ತಿನ್ನುತ್ತಿದ್ದರೆ ಆಕೆ ಅದನ್ನು ಮುಟ್ಟುತ್ತಿರಲಿಲ್ಲ. ಮಗಳನ್ನು ಪೂರ್ತಿ ನಂಬಿದ್ದೇನೆ. ಧೈರ್ಯ ಕೆಡಬೇಡ, ಇಷ್ಟೆಲ್ಲ ಕಷ್ಟಪಟ್ಟು ಮೇಲೆ ಬಂದಿದ್ದಿ, ದೇವರಿದ್ದಾನೆ ಎಂದು ಸಮಾಧಾನ ಪಡಿಸಿದ್ದೆ ಎನ್ನುತ್ತಾರೆ ಚಿದಾನಂದ ಶೆಟ್ಟಿ. ಕ್ರೀಡಾಳುಗಳಿಗೆ ಸಪ್ಲಿಮೆಂಟ್ಸ್ ಆಹಾರ ಇಂಗ್ಲೆಂಡ್, ಯುರೋಪ್‌ನಿಂದ ತರಿಸುತ್ತಿದ್ದರು. ಏಷ್ಯನ್ ಗೇಮ್ಸ್‌ಗೆ ಹೋದಾಗ ಚೀನಾದಿಂದ ತರಿಸಿದ್ದರು. ಪ್ಯಾಕ್ ಹೊರಗಡೆ ಬರೆದದ್ದೇ ಬೇರೆ, ಒಳಗಡೆ ಇದ್ದದ್ದೇ ಬೇರೆ. ತೆರೆಯದೆ ಇದ್ದ ಪ್ಯಾಕ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದಾಗ ಅದರಲ್ಲಿ ನಿಷೇಧಿತ ದ್ರವ್ಯ ಇರುವುದು ಪತ್ತೆಯಾಯಿತು. ಸತ್ಯಶೋಧನೆ ಸಮಿತಿಯೂ ಈ ವರದಿ ನೀಡಿದೆ.

ದೇಶದಲ್ಲಿ ಸ್ಪೋಟ್ಸ್ ಕಲ್ಚರ್ ಗೊತ್ತೇ ಇಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಅಭ್ಯಾಸಕ್ಕೆ ವ್ಯವಸ್ಥೆ ಇಲ್ಲ. ಯುವ ಕ್ರೀಡಾಳುಗಳು ಆತ್ಮಹತ್ಯೆ ಮಾಡುತ್ತಿದ್ದಾರೆ. ವಿಶೇಷವಾಗಿ ಹುಡುಗಿಯರಿಗೆ ಕೌನ್ಸೆಲಿಂಗ್ ಬೇಕು. ಆಹಾರ ತೆಗೆದುಕೊಳ್ಳುವ ನಿರ್ದೇಶನ ನೀಡುವ ವ್ಯವಸ್ಥೆ ಇಲ್ಲ.

ಖುಷಿ
ಕೊಲ್ಕತ್ತಾದಲ್ಲಿ ಕಿರಿಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಕರೆ ಮಾಡಿದ್ದಳು. 'ನೋಡಿ ಪಪ್ಪಾ, ನೀವು ಹೇಳ್ತಾ ಇದ್ರಲ್ಲ, ಈಗ ನೋಡಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ತೆಗೆದುಕೊಂಡಿದ್ದೇನೆ' ಎಂದು ಹೇಳಿದಾಗ ತುಂಬಾ ಖುಷಿ ಆಯಿತು.

ಬೇಸರ
7ನೇ ತರಗತಿ ವರೆಗೆ ಒಂದು ದಿನವೂ ಮನೆ ಬಿಟ್ಟಿರಲಿಲ್ಲ. 8ನೇ ತರಗತಿಗೆ ಬೆಂಗಳೂರು ವಿದ್ಯಾನಗರ ಕ್ರೀಡಾ ಶಾಲೆಗೆ ಸೇರಿಸಿದೆ. ಬಳಿಕ ಮನೆಗೆ ಬರುವುದೇ ವರ್ಷಕ್ಕೆ ಒಂದೆರಡು ಸಲ. ಮನೆಯ ಯಾವುದೇ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ... ಇದು ತಂದೆಯ ನೋವಿನ ಮಾತು.

EXCLUSIVE ಮಾತುಕತೆ

ನಿಮ್ಮ ರೋಲ್ ಮಾಡೆಲ್ ಪಿ.ಟಿ. ಉಷಾ ನೀವು ಪದಕ ಪಡೆದ ಬಗ್ಗೆ ಸಂಶಯ ಪಟ್ಟಾಗ?
ಟೀಕೆ ಮಾಡುವ ನಿರೀಕ್ಷೆ ಇತ್ತು. ಅವರ 400 ಮೀ. ದಾಖಲೆ ಮುರಿದಾಗಲೂ ಟೀಕೆ ಮಾಡಿದ್ದರು. ಪಿಟಿ ಉಷಾ ನನ್ನನ್ನು ಟೀಕಿಸಿದರೂ ಕ್ರೀಡೆ ವಿಚಾರದಲ್ಲಿ ಅವರು ಈಗಲೂ ನನ್ನ ಮಾಡೆಲ್.

ನಿಮಗೆ ತುಂಬಾ ಖುಷಿ ಕೊಟ್ಟ ಪ್ರಕರಣ?
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಾಗ ಇಡೀ ದಿನ ನನ್ನ ಮುಖದಿಂದ ನಗು ಮಾಸಿರಲೇ ಇಲ್ಲ. ಅದನ್ನು ನೆನೆಸಿಕೊಂಡು ಎಷ್ಟು ದಿನ ಒಬ್ಬಳೇ ನಕ್ಕಿದ್ದೇನೆ ಎಂದು ನನಗೆ ಗೊತ್ತಿಲ್ಲ!

ನಿಮಗೆ ಯಾರು ಇಷ್ಟ?
ದನ, ಕರು, ಬೆಕ್ಕು, ನಾಯಿ. ಮನೆಗೆ ಬಂದರೆ ನೇರವಾಗಿ ಕೊಟ್ಟಿಗೆಗೆ ಹೋಗುತ್ತೇನೆ. ಇಲ್ಲಿ ಪಾಟಿಯಾಲದಲ್ಲಿ ಬೀದಿ ನಾಯಿಗಳ ಜತೆ ಸ್ವಲ್ಪ ಸಮಯ ಕಳೆಯುತ್ತೇನೆ. ಅಷ್ಟು ಇಷ್ಟ ಅಂದ್ರೆ ನಾಯಿ ಸಾಕಿಕೊಳ್ಳಬಹುದಲ್ಲ ಎಂದು ಸಹವರ್ತಿಗಳು ಛೇಡಿಸುತ್ತಾರೆ.

ಮೊದಲ ಆಟೋಗ್ರಾಫ್?
ಕಾಮನ್‌ವೆಲ್ತ್ ಬಳಿಕವೇ ನಾನು ದಿಲ್ಲಿಯಲ್ಲಿ ಆಟೋಗ್ರಾಫ್ ನೀಡಿದೆ, ಕೊನೆಯದಾಗಿ ನಿಷೇಧ ಮುಗಿದ ಬಳಿಕ ಪುಣೆಯಲ್ಲಿ ಆಟೋಗ್ರಾಫ್ ಕೊಟ್ಟೆ.

ನಿಮಗಿಷ್ಟವಾದ ಆಹಾರ?
ಅಮ್ಮ ಮಾಡಿದ ಮೀನು ಸಾರು.

ಮದುವೆ, ಪ್ರೀತಿ?
ನಿಷೇಧ ಸಮಸ್ಯೆ ಅಲ್ಲಾಂದ್ರೆ ಗಂಡು ಹುಡುಕಿ ಮದುವೆ ಮಾಡುತ್ತಿದ್ದರೋ ಏನೋ? ಆ ಸಂದರ್ಭ ಒಂಟಿತನ ಕಾಡುತ್ತಿತ್ತು. ಈಗ ಟ್ರ್ಯಾಕ್‌ಗೆ ಬಂದಿದ್ದೇನೆ.

ಸಿನಿಮಾ ನೋಡ್ತೀರಾ?
ಮೊದಲೆಲ್ಲ ಟಾಕೀಸ್‌ಗೆ ಹೋಗುತ್ತಿಲಿಲ್ಲ. ನಿಷೇಧ ಬಳಿಕ ಬೇಸರ ಎಂದೆನಿಸಿದಾಗ ದಿಲ್ಲಿಯಲ್ಲಿ ಮಾಲ್‌ಗೆ ಹೋಗಿ ಸಿನಿಮಾ ನೋಡುತ್ತಿದ್ದೆ. ಅಡ್ವೆಂಚರ್ ಸಿನಿಮಾ ಇಷ್ಟ ಆಯಿತು.

ದುಃಖದ ಘಟನೆ?
ನಿಷೇಧದ ಅವಧಿ. ನಿಷೇಧಕ್ಕಿಂತಲೂ ಜನರ ಕಿರುಕುಳವೇ ಹೆಚ್ಚು ಘಾಸಿ ಮಾಡಿತು. ಪದಕ ಸಿಕ್ಕಿದ್ದನ್ನೇ ಅನುಮಾನದ ದೃಷ್ಟಿಯಿಂದ ನೋಡಿದಾಗ ಬಹಳ ನೋವಾಯಿತು. ಎಂಥಾ ಪರಿಸ್ಥಿತಿ ಬಂತು ಎಂದು ಒಬ್ಬಳೇ ಕೂತು ಆಲೋಚನೆ ಮಾಡುತ್ತಿದ್ದೆ.

ನಿಮಗೇನು ಬೇಕು?
ಕ್ರೀಡಾಳುಗಳು ನನ್ನ ಕಾಲೆಳೆದಿದ್ದಾರೆ, ನನಗೆ ಜನರ ಆಶೀರ್ವಾದ ಬೇಕು. ಎರಡು ವರ್ಷ ಹಿಂದೆ ಬ್ಯಾಂಕ್, ಒಲಿಂಪಿಕ್ಸ್ ಬೋರ್ಡ್ ಪ್ರಾಯೋಜಕತ್ವಕ್ಕೆ ಬಂದಿದ್ದರು. ಈಗ ಮತ್ತೆ ಪ್ರಾಯೋಜಕತ್ವಕ್ಕೆ ನಿರೀಕ್ಷಿಸುತ್ತಿದ್ದೇನೆ.

- ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement