ಗುಳ್ಳವ್ವನ ಹಬ್ಬ
ಸಕಲ ಜೀವಿಗಳನ್ನು ಪೋಷಿಸುವ ಭೂದೇವಿಗೆ ಪೂಜೆ ಸಲ್ಲಿಸುವ ಆಚರಣೆಗಳು ನಮ್ಮ ನಾಡಿನ ನಾನಾ ಕಡೆ ಇವೆ. ಅವುಗಳಲ್ಲೊಂದು ಗುಳ್ಳವ್ವನ ಹಬ್ಬ. ಇನ್ನೇನು ಶುರುವಾಗಲಿರುವ ಆಷಾಢ ಮಾಸದಲ್ಲಿ ನಾಲ್ಕು ಮಂಗಳವಾರ ಉತ್ತರ ಕರ್ನಾಟಕದ ತುಂಬ ಈ ಹಬ್ಬ ನಡೆಯುತ್ತದೆ.
ಉತ್ತರ ಕರ್ನಾಟಕದಲ್ಲಿ ಗುಳ್ಳವ್ವ ಆಚರಣೆ ಬಹು ಜನಪ್ರಿಯವಾಗಿರುವ ಜಾನಪದ ಹಬ್ಬ. ಗುಳ್ಳವ್ವನನ್ನು ಮಣ್ಣಿನಿಂದಲೇ ತಯಾರಿಸಲಾಗುತ್ತದೆ. ಆಷಾಢ ಮಾಸದ ಮೊದಲ ಮಂಗಳವಾರದಿಂದ ಮಾಸಾಂತ್ಯದವರೆಗೆ ನಾಲ್ಕು ಮಂಗಳವಾರಗಳಂದು ಗುಳ್ಳವ್ವನನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಪ್ರತಿದಿನ ಸಂಜೆ ತುಂಬಿದಾರುತಿ ಹಿಡಿದು ಮನೆಮನೆಗೆ ತೆರಳುವ ಬಾಲೆಯರು ಗುಳ್ಳವ್ವನ ಜಾನಪದ ಹಾಡುಗಳನ್ನು ಹಾಡಿ, ಆರತಿ ಎತ್ತುತ್ತಾರೆ. ಈ ಸಂದರ್ಭ 'ಒಂದರಿಷಿಣ ಒಂದರಿಷಿಣ ಕ್ಯಾದಗಿ ಪರಿಮಳ, ಗುಳ್ಳವ್ವನ ಹೆಣ್ಮಕ್ಕಳು ಆಡುತ ಬಂದಾರ, ಉತ್ತತ್ತಿ ಬನಕ ತೊಟ್ಟಿಲ ಕಟ್ಟಿ...' ಎಂಬಂತಹ ಹಾಡುಗಳನ್ನು ಕೇಳಬಹುದು. ಜನಪದ ಸಾಹಿತ್ಯದಲ್ಲಿ ಗುಳ್ಳವ್ವನ ಕುರಿತಾದ ಬಹಳಷ್ಟು ಹಾಡುಗಳು ಪ್ರಚಲಿತದಲ್ಲಿವೆ.
ಗುಳ್ಳವ್ವ ಹೆಂಗಳೆಯರ ಅಚ್ಚುಮೆಚ್ಚು. ಮಂಗಳವಾರದಂದು ಗುಳ್ಳವ್ವನನ್ನು ಅಕ್ಕಿ, ಜೋಳ, ಗೋಧಿ ಮತ್ತು ಗುಲಗಂಜಿ ಬೀಜಗಳಿಂದ ಶೃಂಗರಿಸುವ ಮಹಿಳೆಯರು ಹೂಮಾಲೆ ಹಾಕಿ ಪೂಜಿಸಿ, ಹಾಡುತ್ತ ಆರತಿ ಬೆಳಗುತ್ತಾರೆ.
ಕೊನೆಯ ಮಾರನೇ ದಿನ ಬುಧವಾರ ಮನೆಯಲ್ಲಿ ಸಿಹಿ ಭಕ್ಷ್ಯಗಳನ್ನು ತಯಾರಿಸಿಕೊಂಡು ತೋಟ, ಉದ್ಯಾನ, ನದಿ- ದಂಡೆಗೆ ತೆರಳಿ ಕುಟುಂಬದ ಸದಸ್ಯರು ಮತ್ತು ಗೆಳೆಯ-ಗೆಳತಿಯರು ಉಂಡು, ಆಟವಾಡಿ ಸಂಜೆವರೆಗೆ ಕಾಲ ಕಳೆಯುವ ಸಂಪ್ರದಾಯ ಈಗಲೂ ಉತ್ತರ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿದೆ.
-ಶಿವಾನಂದ ಮಹಾಬಲಶೆಟ್ಟಿ