ದುಡ್ಡು ಮತ್ತು ಬ್ಲಡ್ಡು ನಿಂತಲ್ಲಿ ನಿಲ್ಲಬಾರದು!
ಭದ್ರಗಿರಿ ಅಚ್ಯುತದಾಸರು ಹರಿಕಥೆ ಕೇಳದವರು ಕಡಿಮೆ ಎಂದೇ ಹೇಳಬೇಕು. ಅವರು ತಮ್ಮ ಕಥಾಕೀರ್ತನೆನಡುವೆ ಯಾವಾಗಲೂ ಹೇಳುತ್ತಿರುತ್ತಾರೆ, 'ದುಡ್ಡು ಮತ್ತು ಬ್ಲಡ್ಡು ಎರಡೂ ಸರ್ಕ್ಯುಲೇಟ್ ಆಗುತ್ತಿರಬೇಕು. ಇವೆರಡೂ ಒಂದುಕಡೆ ನಿಂತರೆ ಅನಾರೋಗ್ಯ ಕಟ್ಟಿಟ್ಟದ್ದು' ಎಂದು.
ರಕ್ತ ಹೆಪ್ಪುಗಟ್ಟುವಿಕೆ ಸಾಮಾನ್ಯವಾಗಿ ಎಲ್ಲ ಸಸ್ತನಿಗಳಲ್ಲಿ ನಡೆಯುವ ಪ್ರಕ್ರಿಯೆ. ಪ್ಲೇಟ್ಲೆಟ್‌ಗಳು ಫೈಬ್ರಿನ್‌ಗಳು ಎನ್ನುವ ಎರಡು ಅಂಶಗಳು ಹೆಪ್ಪುಗಟ್ಟುವಿಕೆಗೆ ಪ್ರಮುಖ ಕಾರಣ. ಗಾಯಗಳ ಮೂಲಕ ರಕ್ತನಾಳಗಳಿಗೆ ಹಾನಿಯಾದ ತಕ್ಷಣವೇ ರಕ್ತಹೆಪ್ಪುಗಟ್ಟುವ ಕ್ರಿಯೆ ಶುರುವಾಗುತ್ತದೆ. ರಕ್ತವು ಅಂಗಾಂಶಗಳಲ್ಲಿರುವ ಪ್ರೊಟೀನ್‌ಗಳಿಗೆ ತೆರೆದುಕೊಂಡ ಕೂಡಲೇ ಕೆಲವು ರಾಸಾಯಾಯನಿಕ ಕ್ರಿಯೆಗಳು ನಡೆಯುತ್ತವೆ. ರಕ್ತದಲ್ಲಿನ ಪ್ಲೇಟ್ಲೆಟ್‌ಗಳು (ರಕ್ತದಲ್ಲಿರುವ ಚಕ್ರದಾಕಾರದ ರಚನೆಗಳು) ಮತ್ತು ಫೈಬ್ರಿನ್‌ಗಳು (ಇದೊಂದು ಪ್ರೊಟೀನ್)ಗಾಯವಾದ ಸ್ಥಳದಲ್ಲಿ ರಕ್ತನಾಳವನ್ನು ಸುತ್ತುವರಿಯುತ್ತವೆ. ಕೂಡಲೇ ಬಿರಡೆಯಂಥ ರಚನೆಗಳಾಗಿ ರಕ್ತ ಹೆಪ್ಪುಗಟ್ಟುತ್ತದೆ. ಹೆಪ್ಪುಗಟ್ಟುವಿಕೆ ಐದು ಹಂತಗಳಲ್ಲಿ ಕ್ಷಿಪ್ರವಾಗಿ ನಡೆಯುತ್ತದೆ. ನಮಗೆ ಗೊತ್ತಿರುವಂತೆ ಬಾಹ್ಯವಾಗಿ ರಕ್ತಸ್ರಾವ ಆಗುತ್ತಿದ್ದಾಗ ರಕ್ತ ಹೆಪ್ಪುಗಟ್ಟುವುದು ಆರೋಗ್ಯಕ್ಕೆ ಒಳ್ಳೆಯದೇ. ಅದು ಬಾಹ್ಯ ಗಾಯಗಳಾದಾಗ ಆಯಿತು. ಆಂತರಿಕವಾಗಿ ಒಮ್ಮೊಮ್ಮೆ ನಮ್ಮ ಅರಿವಿಗೇ ಬಾರದಂತೆ ರಕ್ತಸ್ರಾವ ಆಗುತ್ತದೆ, ಅಲ್ಲಿಯೇ ಹೆಪ್ಪುಗಟ್ಟುತ್ತದೆ. ಕೊಲೆಸ್ಟರಾಲ್ ತಟ್ಟೆಗಳ ಮೇಲೆಯೂ ರಕ್ತನಾಳದ ಗೋಡೆಗಳಿಗೆ ಅಂಟಿಕೊಂಡು ಹೆಪ್ಪುಗಟ್ಟುವ ಕ್ರಿಯೆ ನಡೆಯುತ್ತದೆ. ಇದು ಅಪಾಯಕಾರಿ. ಏಕೆಂದರೆ ಇಂಥ ಹೆಪ್ಪುಗಟ್ಟುವಿಕೆ ರಕ್ತನಾಳವನ್ನು ಸಂಕುಚಿತಗೊಳಿಸುತ್ತದೆ. ಅದರಿಂದ ರಕ್ತಸಂಚಾರಕ್ಕೆ ಅಡ್ಡಿಯಾಗುತ್ತದೆ. ಕೆಲವು ಸಂದರ್ಭಗಳಲ್ಲಿ ತೀವ್ರತೆ ಎಷ್ಟಿರುತ್ತದೆ ಎಂದರೆ ರಕ್ತಸಂಚಾರ ಸಂಪೂರ್ಣ ನಿಂತುಹೋಗುತ್ತದೆ ಮತ್ತು ಸಾವು ಸಂಭವಿಸುತ್ತದೆ.
ಸಾಮಾನ್ಯವಾಗಿ ಯಾವುದೇ ಸರ್ಜರಿ ನಿಗದಿಯಾಗಿರುವಾಗ, ಸರ್ಜರಿಯ ಹಿಂದಿನ ದಿನದಂದು ಆಸ್ಪರಿನ್ ಮಾತ್ರೆಗಳನ್ನು ಸೇವಿಸದಂತೆ ಶಿಫಾರಸ್ಸು ಮಾಡುತ್ತಾರೆ. ಆಸ್ಪಿರಿನ್ ರಕ್ತವನ್ನು ತೆಳುವಾಗಿಸುತ್ತದೆ. ಸರ್ಜರಿಗೆ ಮೊದಲು ಆಸ್ಪಿರಿನ್ ಸೇವಿಸಿದ್ದರೆ ಶಸ್ತ್ರಚಿಕಿತ್ಸೆ ವೇಳೆ ರಕ್ತಸ್ರಾವ ನಿಲ್ಲಿಸುವುದು ಕಷ್ಟವಾಗಬಹುದು, ಅದರಿಂದಾಗಿ ಅಂದುಕೊಂಡಿದ್ದಕ್ಕಿಂತ ಹೆಚ್ಚು ರಕ್ತ ದೇಹದಿಂದ ಹೊರಹೋಗಬಹುದು, ಪರಿಣಾಮವಾಗಿ ಅತಿಯಾದ ನಿಶ್ಯಕ್ತಿ ಕಾಡಬಹುದು, ಗುಣಮುಖರಾಗುವುದು ತಡವಾಗಬಹುದು ಎನ್ನುವ ಹೆದರಿಕೆ. ಆಗ ರಕ್ತ ಹೆಪ್ಪುಗಟ್ಟಿದಷ್ಟೂ ಒಳಿತು. ಅಂಥ ಸಂದರ್ಭದಲ್ಲಿ ತೆಳುವಾಗಿಸುವ ಔಷಧ ತೆಗೆದುಕೊಂಡರೆ ಹೇಗೆ? ನಿಮಗೆ ಪರಿಚಯದ ವೈದ್ಯರನ್ನು ಕೇಳಿ ನೋಡಿ, ಶಸ್ತ್ರಚಿಕಿತ್ಸೆಗೆ ಮೊದಲು ಚೈನೀಸ್ ಫುಡ್, ಶುಂಠಿ, ಈರುಳ್ಳಿ, ಬೆಳ್ಳುಳ್ಳಿ, ಕರಿಅಣಬೆ ತಿನ್ನಬೇಡಿ ಎಂದು ಸಲಹೆ ಮಾಡುತ್ತಾರಾ ಎಂದು?
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com