ಪ್ರಾಣಿ ಪ್ರೀತಿ
ಒಬ್ಬ ಯಜಮಾನ ತನ್ನ ಮನೆಯ ಮುಂದೆ 'ಮಾರಾಟಕ್ಕೆ ಜಾತಿನಾಯಿಯ ಏಳು ಮರಿಗಳಿವೆ' ಎಂದು ಬರೆದ ಹಲಗೆಯೊಂದನ್ನು ತೂಗುಹಾಕಿದ್ದ. ದಾರಿಯಲ್ಲಿ ಹೋಗುತ್ತಿದ್ದ ಒಬ್ಬ ಚಿಕ್ಕ ಹುಡುಗ ಅದನ್ನು ಓದಿದ, ಕೂಡಲೇ ಯಜಮಾನನ ಬಳಿಗೆ ಬಂದು, 'ಸ್ವಾಮಿ, ಒಂದು ನಾಯಿಮರಿಯ ಬೆಲೆ ಎಷ್ಟು?' ಎಂದು ಕೇಳಿದ. ಯಜಮಾನ ಹುಡುಗನನ್ನು ಮೇಲಿನಿಂದ ಕೆಳಗಿನವರೆಗೆ ನೋಡಿ, 'ನಿನಗೆ ಅದನ್ನು ಕೊಳ್ಳಲು ಸಾಧ್ಯವಾಗಲಾರದು. ಒಂದು ಮರಿಯ ಬೆಲೆ 2 ಸಾವಿರ ರುಪಾಯಿ. ನಿನ್ನ ಹತ್ತಿರ ಅಷ್ಟು ಹಣವಿದೆಯಾ?' ಎಂದು ಕೇಳಿದ.
ಹುಡುಗನ ಮುಖ ಬಾಡಿತು. ತುಂಬಾ ನಿರಾಸೆಯಿಂದ ಯಜಮಾನನ ಕಡೆಗೆ ನೋಡುತ್ತಾ, 'ಇಲ್ಲ ಸ್ವಾಮಿ, ನನ್ನ ಹತ್ತಿರ ಒಂದಷ್ಟು ಚಿಲ್ಲರೆ ನಾಣ್ಯಗಳಿವೆ ಅಷ್ಟೆ. ಆದರೆ ನಾನು ಅವುಗಳನ್ನು ಸುಮ್ಮನೆ ನೋಡಬಹುದೇ?' ಎಂದು ದೈನ್ಯದಿಂದ ಕೇಳಿದ. ಯಜಮಾನ'ಆಯಿತು ಬಾ' ಎಂದು ಕರೆದು, ನಾಯಿಗೂಡಿನ ಬಾಗಿಲನ್ನು ತೆಗೆದು ಒಂದೊಂದನ್ನಾಗಿ ಮರಿಗಳ ಹೆಸರು ಹಿಡಿದು ಕರೆದ.
ಹತ್ತಿಯ ಚೆಂಡುಗಳಂತೆ ಶುಭ್ರವಾಗಿ, ಮುದ್ದುಮುದ್ದಾಗಿದ್ದ ಆರು ಮರಿಗಳು ಒಂದೊಂದೇ ಹೊರಬಂದವು. ಆದರೆ ಏಳನೆಯದು ಮಾತ್ರ ಹೊರಬರಲಿಲ್ಲ. ಯಜಮಾನ ಮತ್ತೆ ಮತ್ತೆ ಕರೆದಾಗ, ಅಂಗವಿಕಲ ಮರಿಯೊಂದು ಕುಂಟುತ್ತ, ಕಾಲೆಳೆದುಕೊಂಡು ನಿಧಾನವಾಗಿ ಅವನ ಬಲಿಗೆ ಬಂದಿತು. ಹುಡುಗ ಆ ಮರಿಯನ್ನು ಎತ್ತಿ ಅಪ್ಪಿಕೊಂಡು ಮುದ್ದಿಸಿ, ಪ್ರೀತಿಯಿಂದ ಮೈಸವರಿದ. ಯಜಮಾನನಿಗೆ ಆಶ್ಚರ್ಯವಾಯಿತು. 'ಅದೇನು? ಇಷ್ಟು ಚಂದದ ಮರಿಗಳನ್ನು ಬಿಟ್ಟು ಆ ಕುಂಟು ಮರಿಯನ್ನು ಎತ್ತಿಕೊಂಡೆ?' ಎಂದು ಕೇಳಿದಾಗ, ಹುಡುಗ ನಿಧಾನವಾಗಿ ತನ್ನ ಪಾಯಿಜಾಮವನ್ನು ಮೇಲೆ ಮಾಡಿ, ತನ್ನ ಕೃತಕ ಕಾಲುಗಳನ್ನು ತೋರಿಸುತ್ತ, 'ಈ ಮರಿ ಮಾತ್ರ ನನ್ನ ನೋವನ್ನು ಅರ್ಥಮಾಡಿಕೊಳ್ಳಬಹುದು. ನಾನು ಅದರ ನೋವನ್ನು ಅರ್ಥಮಾಡಿಕೊಳ್ಳಬಲ್ಲೆ' ಎನ್ನಲು, ಜಯಮಾನನಿಗೆ ಹುಡುಗನ ಮಾತಿನಿಂದ ಕರುಣೆ ಉಕ್ಕಿಬಂದು, ಕಣ್ಣಲ್ಲಿ ತೆಳುವಾಗಿ ನೀರಾಡಿತು. ಅವನು ಆ ಮರಿಯನ್ನು ಹುಡುಗನಿಗೆ ಪುಕ್ಕಟೆಯಾಗಿ ಕೊಟ್ಟುಬಿಟ್ಟ. ತನ್ನಂತೆ ಇನ್ನೊಬ್ಬರನ್ನು ತಿಳಿಯುವುದೇ ನಿಜವಾದ ಪ್ರೀತಿ. ಭಗವಂತ ನಮ್ಮ ಹೃದಯದಲ್ಲಿ ಬೇಕಾದಷ್ಟು ಪ್ರೀತಿಯನ್ನು ತುಂಬಿದ್ದಾನೆ. ಆದರೆ ಅದರ ಅರಿವೇ ಇಲ್ಲದವರಂತೆ ಎಷ್ಟೋ ವೇಳೆ ನಡೆದುಕೊಳ್ಳುತ್ತೇವೆ.
-ಬ್ರಹ್ಮಣಿ ಪಿ. ರಾವ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.