ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮಂಚ ಸಾಕ್ಷಿ

ತಮಿಳುನಾಡಿನ ಮದ್ರಾಸ್ ಹೈಕೋರ್ಟ್ 'ವಿವಾಹಪೂರ್ವ ಸೆಕ್ಸ್ ಎಂದರೆ ಮದುವೆ ಫಿಕ್ಸ್‌' ಎಂಬ ಅರ್ಥ ಬರುವಂತೆ ತೀರ್ಪಿತ್ತಿದೆ.

Lingaraj Badiger
Updated On : 16 Jul 2013, 6:25 am

ವಿವಾಹಪೂರ್ವ ಲೈಂಗಿಕತೆಗೆ ಸಂಬಂಧಿಸಿದಂತೆ ನಟಿ ಖುಷ್ಬೂ ಹೇಳಿಕೆಯೊಂದನ್ನು ನೀಡಿದಾಗ ಇಡೀ ತಮಿಳುನಾಡೇ ಆಕ್ರೋಶ ವ್ಯಕ್ತಪಡಿಸಿತ್ತು. ಯಾರಿಗೆ ದೇವಸ್ಥಾನ ಕಟ್ಟಿ ಪೂಜಿಸಲಾಗುತ್ತಿತ್ತೊ ಅದೇ ನಟಿಗೆ ಜನರು ಕಲ್ಲು ಹೊಡೆದಿದ್ದರು!

ಆದರೆ, ಕಳೆದ ತಿಂಗಳು ಇದೇ ತಮಿಳುನಾಡಿನ ಮದ್ರಾಸ್ ಹೈಕೋರ್ಟ್ 'ವಿವಾಹಪೂರ್ವ ಸೆಕ್ಸ್ ಎಂದರೆ ಮದುವೆ ಫಿಕ್ಸ್‌' ಎಂಬ ಅರ್ಥ ಬರುವಂತೆ ತೀರ್ಪಿತ್ತಿದೆ. ಅಫ್‌ಕೋರ್ಸ್ ಇದು ಮದುವೆಗೂ ಮುಂಚೆ ದೈಹಿಕ ಸಂಪರ್ಕ ಹೊಂದಿದರೆ, ವೆಡ್ಡಿಂಗ್ ಎಂಬ ಲಾಕ್‌ಗೆ ಒಳಗಾಗುವಂತೆ ಪ್ರೇರೇಪಿಸಲಿದೆ. ಒಂದು ದೃಷ್ಟಿಯಲ್ಲಿ ಒಳ್ಳೆಯ ಜಡ್ಜ್‌ಮೆಂಟ್.
ಆದರೆ, ಈ ತೀರ್ಪಿಗೆ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಚರ್ಚೆಗಳನ್ನು ಹುಟ್ಟು ಹಾಕಿದೆ. ರೂಪದರ್ಶಿ ಪೂನಂ ಪಾಂಡೆ 'ಮದ್ರಾಸ್ ಹೈಕೋರ್ಟ್ ಪ್ರಕಾರ ನನಗಾಗಲೇ ಮದುವೆಯಾಗಿದೆ' ಎಂದೇ ಟ್ವೀಟ್ ಮಾಡಿದ್ದಾಳೆ!
ಸ್ವ ಇಚ್ಛೆಯಿಂದ ಲೈಂಗಿಕ ಸಂಪರ್ಕ ಹೊಂದಿರುವುದನ್ನು ಪ್ರೂವ್ ಮಾಡೋದು ಹೇಗೆ? ಮಗುವಿದ್ದರೆ ಓಕೆ. ನಾಲ್ಕು ಜನರ ಸಮ್ಮುಖದಲ್ಲಿ ಅವರ ವಿವಾಹ ವಿಧಿವತ್ತಾಗಿ ಆಗಿದ್ಯೋ, ಇಲ್ಲವೋ ಸೆಕೆಂಡರಿ. ಮಗುವಿನ ಮೂಲಕವೇ ದಂಪತಿಯೆಂದು ಪರಿಗಣಿಸಬಹುದು. ಇಂಥ ಕೇಸ್‌ಗಳಲ್ಲಿ ಮದ್ರಾಸ್ ಹೈ ಕೋರ್ಟ್ ನೀಡಿದ ತೀರ್ಪು ನಿಜವಾಗಲೂ ಹೆಣ್ಣು ಹಾಗೂ ಸಮಾಜದ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ. ಆದರೆ, ಒಬ್ಬರಿಗಿಂತಲೂ ಹೆಚ್ಚು ಮಂದಿಯೊಂದಿಗೆ ದೈಹಿಕ ಸಂಪರ್ಕ ಇಟ್ಟುಕೊಂಡವರ ಕಥೆ ಏನು? ನಮ್ಮಲ್ಲಿ ಲೈಂಗಿಕ ಕಾರ್ಯಕರ್ತೆಯರೂ ಇದ್ದಾರಲ್ಲ! ಅವರು ಈ ತೀರ್ಪನ್ನು ಮುಂದಿಟ್ಟುಕೊಂಡು ಏನು ಮಾಡಬಹುದು!?

ಹೋಗಲಿ. ಸಂಭಾವಿತ ಗೃಹಸ್ಥನೊಬ್ಬನಿಗೂ ಯಾರೋ ಒಬ್ಬಳೊಂದಿಗೆ, ಅದೂ ಕನ್ಯೆ ಐ ಮೀನ್ ಅವಿವಾಹಿತೆಯೊಂದಿಗೇ ದೈಹಿಕ ಸಂಪರ್ಕವಿದೆ ಎಂದಿಟ್ಟುಕೊಳ್ಳೋಣ. ಅವಳು ಅದನ್ನು ಬಹಳ ಸುಲಭವಾಗಿ ಪ್ರೂವ್ ಮಾಡಿಬಿಡುತ್ತಾಳೆ. ಆಗ ಆ ಸಂಬಂಧಕ್ಕೆ ಮದುವೆಯ ಚೌಕಟ್ಟು ನೀಡಲು ಸಾಧ್ಯವೇ? ಅಕಸ್ಮಾತ್ ಸೆಕ್ಸ್ ಹೊಂದಿದ್ದಾರೆಂಬ ಕಾರಣಕ್ಕಾಗಿಯೇ ಗಂಡ- ಹೆಂಡತಿ ಎಂದು ಪರಿಗಣಿಸಬಹುದಾದರೆ, ಆ ಪುರುಷನ ಲೀಗಲ್ ಪತ್ನಿಯ ಕಥೆ ಏನು? ಅವಳ ಸ್ಥಾನಮಾನಕ್ಕೆ ಏನು ಗತಿ?

ಅದಿರಲಿ. ಒಂದು ಗಂಡು- ಹೆಣ್ಣು ದೈಹಿಕವಾಗಿ ಸಂಬಂಧ ಹೊಂದಿರುತ್ತಾರೆ. ಆದರೆ, ಅವರಲ್ಲಿ ಒಬ್ಬರಿಗೆ ಮತ್ತೊಬ್ಬರೊಟ್ಟಿಗೆ ಮದುವೆಯಾಗುತ್ತದೆ. ಮದುವೆಯಾಗದವರು ಮೊದಲನೆಯವರೊಟ್ಟಿಗೆ ಹೊಂದಿದ್ದ ಸೆಕ್ಸುಯಲ್ ರಿಲೇಷನ್‌ಶಿಪ್ ಅನ್ನು ಪ್ರೂವ್ ಮಾಡಿಬಿಟ್ಟರೆ? ಯಾರೊಂದಿಗೆ ಮದುವೆ ಸಿಂಧು ಎಂದು ಕನ್ಸಿಡರ್ ಮಾಡಬಹುದು?
ಹಾಗಂತ ಸಾವಿರಾರು ಜನರ ಮುಂದೆ, ಪಂಚಭೂತಗಳ ಸಾಕ್ಷಿಯಾಗಿ 'ಅರ್ಥೇಚ, ಧರ್ಮೇಚ ನಾತಿಚರಾಮಿ' ಎಂದು ಸಪ್ತಪದಿ ತುಳಿದು ಸತಿಪತಿಗಳಾದ ಎಲ್ಲರೂ ಅಂಥದ್ದೊಂದು ದೈವೀ ಸಂಬಂಧವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರಾ? ಗೊತ್ತಿಲ್ಲ. ಈ ದಾಂಪತ್ಯವೆಂಬುವುದೇ ವಿಚಿತ್ರ. ಆದರೂ, ಮದುವೆ ಎಂಬ ವ್ಯವಸ್ಥೆಯಲ್ಲಿ ಬಂಧಿಯಾದವರಿಗೆ ಸಮಾಜದ, ಕುಟುಂಬದ ನೈತಿಕ, ಮಾನಸಿಕ ಹಾಗೂ ಆರ್ಥಿಕ ಬೆಂಬಲಗಳು ದೊರೆಯುವ ಕಾರಣ ಅದು ಆಗಾಗ ಬಿರುಕು ಬಿಟ್ಟಂತೆ ಕಂಡರೂ, ಇನ್ನೆಲ್ಲೋ ಅದು ಬಿಗಿಯಾಗಿ ಬೆಸೆದುಕೊಂಡಿರುತ್ತದೆ. ಅದಕ್ಕೆ ಈ ಮದುವೆಗೆ ತನ್ನದೇ ಆದ ಧಾರ್ಮಿಕ ಹಾಗೂ ಸಾಮಾಜಿಕ ಚೌಕಟ್ಟಿದೆ.

ಇವೆಲ್ಲ ಯೋಚಿಸಿದರೆ ಮದುವೆ ಎಂಬುದು ಕೇವಲ ಭಾವನಾತ್ಮಕ ನೆಲೆಗಟ್ಟಿನ ಮೇಲೆ ರೂಪುಗೊಂಡು, ಮುಂದುವರಿಯುವ ಅನುಬಂಧ. ಫಿಸಿಕಲಿ ಒಂದಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ ಗಂಡ-ಹೆಂಡತಿ ಎಂದು ಕನ್ಸಿಡರ್ ಮಾಡೋದು ಕಷ್ಟ. ಅಲ್ಲಿ ನೂರಾರು ಬೇರೆ ಬೇರೆ ವಿಷಯಗಳನ್ನೂ ಗಮನಿಸಬೇಕಾಗುತ್ತದೆ.

ಮದುವೆಗೂ ಮುಂಚೆ ನಾನು ಮತ್ತೊಬ್ಬ ಹುಡುಗನಿಗೆ 'ಮನಸ್ಸು ಕೊಟ್ಟಿದ್ದೆ' ಎಂದರೇನೆ ಒಪ್ಪಿಕೊಳ್ಳಲು ಇನ್ನೂ ಸಾಧ್ಯವಾಗದ ಭಾರತೀಯ ಮನಸ್ಸುಗಳು, ವಿವಾಹ ಪೂರ್ವ ಸೆಕ್ಸ್ ಇತ್ತು ಎಂಬುದನ್ನೆಲ್ಲ ಸ್ವೀಕರಿಸೋದು ಕಷ್ಟ. ಸೆಕ್ಸ್‌ಗೆ ಕಾನೂನು ಚೌಕಟ್ಟು ನೀಡೋದೂ ಕಷ್ಟ. ಅದರ ವ್ಯಾಪ್ತಿ ನಿಲುಕದಷ್ಟು ವಿಸ್ತಾರವಾಗಿದೆ. ಮನುಷ್ಯನಿಗೆ ಆಹಾರ, ಧರ್ಮಗಳಷ್ಟೆ ಸೆಕ್ಸ್ ಕೂಡ ಅಗತ್ಯ. ಅದಕ್ಕಾಗಿಯೇ ನಮ್ಮಲ್ಲಿ ಪುರಾಣ ಕಾಲದಿಂದಲೂ ವೇಶ್ಯೆಯರಿಗೆ ವಿಶೇಷ ಸ್ಥಾನಮಾನ ನೀಡುತ್ತಿರುವುದು.

ಹೀಗಾಗಿ, ಮದ್ರಾಸ್ ಹೈಕೋರ್ಟ್ ನೀಡಿರುವ ತೀರ್ಪಿನ ಸುತ್ತ ಪ್ರಶ್ನೆಗಳು, ವಿಚಾರಗಳು ಹೊರಳಲೇಬೇಕು. ಆ ತೀರ್ಪಿಗೆ ಯಾವ ಅರ್ಥ ಕಲ್ಪಿಸಬಹುದು? ಆ ಪ್ರಕರಣಕ್ಕಷ್ಟೇ ಆ ತೀರ್ಪು ಸರಿ ಎಂದು ಹೇಳಿ ಮುಗಿಸುವ ಬದಲು, ಚರ್ಚೆ ನಡೆಸೋಣ. 'ಬೈ ಟು ಕಾಫಿ' ಚಾವಡಿ ನಿಮ್ಮ ಚಿಂತನೆಗಳನ್ನು ಆಹ್ವಾನಿಸುತ್ತಿದೆ.

ಆ ತೀರ್ಪು ಯಾವುದು?
ಕೊಯಮತ್ತೂರಿನ ವ್ಯಕ್ತಿ, ಮಹಿಳೆಯೊಂದಿಗೆ ಐದು ವರ್ಷ ಜೊತೆಗಿದ್ದು, ಎರಡು ಮಕ್ಕಳನ್ನು ಪಡೆದಿದ್ದ. ಎರಡನೇ ಪ್ರಸವದ ವೇಳೆ ಸಂಬಂಧಪಟ್ಟ ದಾಖಲೆಗಳಿಗೂ ಆ ವ್ಯಕ್ತಿಯೇ ಪತಿ ಸ್ಥಾನದಲ್ಲಿ ನಿಂತು, ಸಹಿ ಮಾಡಿದ್ದ. ಅವರಿಬ್ಬರು ಬೇರೆಯಾಗಲು ನಿರ್ಧರಿಸಿದರು. ಮಹಿಳೆ ಜೀವನಾಂಶ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ಆದರೆ, ಅವರ ವಿವಾಹಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಪ್ರೊಡ್ಯೂಸ್ ಮಾಡದ ಕಾರಣ ಕೇವಲ ಮಕ್ಕಳಿಗೆ ಜೀವನಾಂಶ ನೀಡಲು ಕೋರ್ಟ್ ಆದೇಶಿಸಿತ್ತು. ಆದರೆ, ಈ ಕೇಸ್‌ನಲ್ಲಿ ಪ್ರತಿ ಸಂದರ್ಭಗಳಲ್ಲೂ ಆ ವ್ಯಕ್ತಿ ಪತಿಯಂತೆಯೇ ನಡೆದುಕೊಂಡಿದ್ದರಿಂದ ದಾಖಲೆಗಳಿಲ್ಲದೇ ಹೋದರೂ ಅವರಿಬ್ಬರೂ ದಂಪತಿಯೇ. ಆದ್ದರಿಂದ ಆಕೆಗೂ ಜೀವನಾಂಶ ನೀಡಬೇಕೆಂದು ಹೈ ಕೋರ್ಟ್ ತೀರ್ಪು ನೀಡಿ, ವಿವಾಹ ಪೂರ್ವ ಲೈಂಗಿಕತೆಗೆ ಸಂಬಂಧಿಸಿದಂತೆ ಹೊಸ ವ್ಯಾಖ್ಯಾನ ನೀಡಿದೆ.

ತೀರ್ಪಿನಿಂದ ಸಮಸ್ಯೆ ಎಲ್ಲಿ?

ಯಾರಿಗೆ ಅನುಕೂಲ?

Advertisement

Advertisement

ಮಡಿವಂತ ಭಾರತದಲ್ಲಿ  ಲೈಂಗಿಕತೆ
ಕೋರ್ಟ್ ಕಣ್ಣಲ್ಲಿ ಲಿವ್ ಇನ್ ರಿಲೇಷನ್
ಪ್ರೂವ್ ಅಸಾಧ್ಯ
- ಕೆ.ಎಸ್. ನಿರುಪಮಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments