ಲಿವಿಂಗ್ ಟುಗೆದರ್ ದೇಶಿ ಸ್ಟೈಲ್
ಲಿವಿಂಗ್ ಟುಗೆದರ್ ಅಂದರೇನು ಎಂಬುದನ್ನು ತಿಳಿಯಲು ನೀವು ಸೆಲೆಬ್ರಿಟಿಗಳ ಬದುಕನ್ನಷ್ಟೇ ನೋಡಬೇಕಾಗಿಲ್ಲ. ಗಂಗಾವತಿ ತಾಲೂಕಿನ ಯರಡೋಣಾ ಗ್ರಾಮಕ್ಕೆ ಬನ್ನಿ. ನಾಲ್ಕು ದಶಕಗಳಿಂದ ಜತೆಯಾಗಿ ಬದುಕುತ್ತಿರುವ ಜೋಡಿಯನ್ನು ನೋಡಿ.
ಅವರು ಪರಸ್ಪರ ಮದುವೆಯಾಗಿಲ್ಲ. ಆದರೂ ನಾಲ್ಕು ದಶಕಗಳಿಂದ ಗಂಡ-ಹೆಂಡಿರಿಗಿಂತ ಅನ್ಯೋನ್ಯ ಸಂಸಾರ ಮಾಡುತ್ತಿದ್ದಾರೆ. ಇದರ ಹಿಂದೆ ಒಂದು ಪ್ರೇಮ ಕಹಾನಿಯೂ ಇದೆ. ಕಾರಟಗಿ ಬಳಿ ಯರಡೋಣಾ ಗ್ರಾಮದ ಆರಾಧ್ಯ ದೈವ ಮುರುಡಬಸವೇಶ್ವರ ದೇವಸ್ಥಾನದ ಬಳಿ ಈ ಜೋಡಿ 40 ವರ್ಷಗಳಿಂದಲೂ ಅಲ್ಲಿಯೇ ಜೀವನ ಸಾಗಿಸುತ್ತಿದೆ. ಇದೊಂದು ಜಾತಿ, ವಯಸ್ಸು ಮೀರಿದ ಪ್ರೀತಿ.
ಚೆನ್ನಪ್ಪ ಬಿಜಕಲ್ಗೆ ಈಗ 80 ವಯಸ್ಸು. ಕಣ್ಣು ಮಸುಕಾಗಿವೆ. ಆತನಿಗಿಂತ 10 ವರ್ಷ ಚಿಕ್ಕವಳಾದ ಶಂಕ್ರಮ್ಮಗೆ ಕಣ್ಣು ಕಾಣಿಸದು. ನಾಲ್ಕು ದಶಕ ಹಿಂದೆ ಇಬ್ಬರ ಮಧ್ಯೆ ಶುರುವಾದ ಪ್ರೀತಿ ಈಗಲೂ ಹಸಿರಾಗಿದೆ. ಇಬ್ಬರೂ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದವರು. ಅಕ್ಕಪಕ್ಕದಲ್ಲಿಯೇ ಮನೆ. ಇವರ ಪ್ರೇಮ ತಿಳಿದ ಇಬ್ಬರ ಮನೆಯವರೂ ಸ್ವಜಾತಿಯ ಬೇರೆಯವರೊಂದಿಗೆ ಮದುವೆ ಮಾಡಿಸಿದರು. ಅಲ್ಲಿಗೆ ಇಬ್ಬರ ಪ್ರೇಮಕಥೆ ಮುಗಿಯಿತು ಎಂದು ಎಲ್ಲರೂ ಭಾವಿಸಿದರು. ನಾಲ್ಕೈದು ವರ್ಷ ನಂತರ ಶಂಕ್ರಮ್ಮಳ ಪತಿ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟ. ಆತ ಮಾಡಿದ ಸಾಲವನ್ನೆಲ್ಲ ಶಂಕ್ರಮ್ಮ ಆಸ್ತಿ ಮಾರಿ ತೀರಿಸಿ ಬರಿಗೈ ಆಗಿ ನಿಂತರು. ಆಗ ಆಕೆಗೆ ಆಸರೆಯಾಗಿದ್ದು ಈ ಚೆನ್ನಪ್ಪ. ಅಷ್ಟರಲ್ಲಿಯೇ ಚೆನ್ನಪ್ಪಗೆ ಒಂದು ಮಗು ಇತ್ತು. ಪತ್ನಿ ಸಮೇತ ಉದ್ಯೋಗ, ಅನ್ನ ಅರಸಿ ಬರಪೀಡಿತ ಪ್ರದೇಶದಿಂದ ನೀರಾವರಿ ಪ್ರದೇಶ ಯರಡೋಣಾ ಗ್ರಾಮಕ್ಕೆ ಬಂದ ಚೆನ್ನಪ್ಪ. ಗ್ರಾಮದ ಗೌಡರ ತೋಟದಲ್ಲಿ ಕೆಲಸ. ಸ್ವಲ್ಪ ದಿನಗಳಲ್ಲಿ ಶಂಕ್ರಮ್ಮ ಕೂಡ ಯರಡೋಣಾಕ್ಕೆ ಬಂದಳು. ಅಂದಿನಿಂದ ಇಬ್ಬರೂ ಜೊತೆಯಾಗಿ ಇದ್ದಾರೆ.
ಇತ್ತ ಗ್ರಾಮದಲ್ಲಿ ಚೆನ್ನಪ್ಪನ ಮತ್ತೊಂದು ಮನೆ ಇದೆ. ಅಲ್ಲಿ ಅವರ ಪತ್ನಿ ಇದ್ದಾರೆ. ಮಕ್ಕಳು ಬೆಳೆದು ದೊಡ್ಡವರಾಗಿದ್ದು, ಬೆಂಗಳೂರು ಇನ್ನಿತರ ಕಡೆ ಕೆಲಸ ಮಾಡುತ್ತಿದ್ದಾರೆ. ನಿತ್ಯ ಬೆಳಗ್ಗೆ ಚನ್ನಪ್ಪನ ಸವಾರಿ ಇಲ್ಲಿಗೆ. ಕಾಲ ಕಳೆಯುವುದು ದೇವಸ್ಥಾನದ ಬಳಿ ಗ್ರಾಮಸ್ಥರು ಹಾಕಿಕೊಟ್ಟ ಶೆಡ್ನಲ್ಲಿ.
ಇಬ್ಬರಿಗೂ ವಯಸ್ಸಾಗಿದೆ. ಚೆನ್ನಪ್ಪಗೆ ದುಡಿಯಲು ಶಕ್ತಿ ಇಲ್ಲ. ಆದರೂ ಕಣ್ಣು ಕಾಣಿಸದ ಶಂಕ್ರಮ್ಮಳನ್ನು ಸಾಕಿ ಸಲುಹುತ್ತಿದ್ದಾನೆ. ನಿತ್ಯ ಆಕೆಗೆ ಚಹಾ ತರುವುದು, ಸ್ನಾನ ಮಾಡಿಸುವುದು, ತಲೆ ಬಾಚುವುದು ಸೇರಿದಂತೆ ಎಲ್ಲ ಚಾಕರಿ ಮಾಡುತ್ತಾನೆ.
ಜೋಡಿಯ ಬಗ್ಗೆ ಗ್ರಾಮಸ್ಥರಿಗೆ ಅಭಿಮಾನ. ಗೌಡರೊಬ್ಬರು ಶೆಡ್ ಹಾಕಿಸಿಕೊಟ್ಟರೆ, ದೇವಸ್ಥಾನದ ಬಳಿಯ ಭಾಗ್ಯಮ್ಮ ಮತ್ತು ಹುಲಿಗೆಮ್ಮ ನಿತ್ಯ ಊಟ ಕೊಡುತ್ತಾರೆ. ದೇವಸ್ಥಾನಕ್ಕೆ ಬಂದು ಹೋಗುವ ಭಕ್ತರು ಕಾಸು ಕೊಡುವುದುಂಟು. ವಯಸ್ಸಾಗಿರುವ ಈ ಜೋಡಿಯನ್ನು ವೃದ್ಧಾಶ್ರಮಕ್ಕೆ ಸೇರಿಸಲು ಯಾರೋ ಮುಂದಾದರು. ಆದರೆ ಇವರೇ ಒಪ್ಪಲಿಲ್ಲ. ವೃದ್ಧಾಶ್ರಮದಲ್ಲಿ ತಾವೆಲ್ಲಿ ಬೇರೆಯಾಗುತ್ತೇವೋ ಎಂಬ ಭಯ!
- ವೀರೇಂದ್ರ ಪಾಟೀಲ್ ಕಾರಟಗಿ
9886112697