ಅಂಥ ಮಾತೇ ಬೇಡ
ತಲೆ ಚಿಟ್ಟು ಹಿಡಿದು ಹೋಗಿರುತ್ತದೆ. ಬೆಳಗಿನಿಂದಲೇ ಅದು ನಮ್ಮ ತಲೆಯೊಳಗೆ ಸುತ್ತುತ್ತಲೇ ಇರುತ್ತದೆ. ಯಾವುದರಲ್ಲೂ ಉತ್ಸಾಹವಿಲ್ಲ. ಬದುಕೇ ಬೋರಲು ಬಿದ್ದ ಅನುಭವ. ಕಿತ್ತೋಗಿರೋ ಮನಸ್ಸನ್ನು ಎಷ್ಟೇ ಪ್ರಯತ್ನಿಸಿದರೂ ತಹಬಂದಿಗೆ ತಂದುಕೊಳ್ಳಲು ಆಗುತ್ತಿಲ್ಲ. ವಾಸ್ತವವನ್ನು ಮೀರಿದ ಊಹೆಯ ಹುಳು ನಮ್ಮೊಳಗೆ ಕೊರೆಯುತ್ತಿರುವುದರ ಪರಿಣಾಮ ಇದು. ನಾವೇ ನಮ್ಮನ್ನು ಇಂಥ ಸ್ಥಿತಿಗೆ ತಳ್ಳಿಕೊಳ್ಳುತ್ತಿರುತ್ತೇವೆ. ಹಠಾತ್ತನೆ ಒಂದೊಂದು ಸಲ ಕಾಣಿಸಿಕೊಳ್ಳುವ ಬೇಸರ, ಆಘಾತ, ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲೆಲ್ಲ ನಮ್ಮ ಮನಸ್ಸು ನೋವಿನಲ್ಲಿ ಅದ್ದಿ ಹೋಗುವುದು ಸಹಜ. ಅದರಿಂದ ಹೊರಬರಲಾರದೇ ಇಡೀ ದಿನ, ಕೆಲವೊಮ್ಮೆ ವಾರ, ತಿಂಗಳಿನವರೆಗೆ ಹೊಯ್ದಾಟ, ತೊಳಲಾಟ ಮುಂದುವರಿದುಕೊಂಡೇ ಹೋಗುತ್ತವೆ. ಆಗಿ ಹೋದುದಕ್ಕೆ ಕೊರಗುತ್ತಾ ಕುಳಿತುಕೊಳ್ಳಲೂ ಆಗದ, ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲೂ ಸಾಧ್ಯವಿಲ್ಲದ ಸಂದಿಗ್ಧ ಕಾಡುತ್ತಲೇ ಇರುತ್ತದೆ. ಅತ್ಯಂತ ಸಮೀಪದ ವ್ಯಕ್ತಿಗಳಿಂದಾದ ತಪ್ಪುಗಳಿರಬಹುದು, ನಿರೀಕ್ಷಿತ ಕೆಲಸವೊಂದರಲ್ಲಿನ ಅಪಯಶಸ್ಸು, ಸ್ನೇಹಿತರೊಬ್ಬರ ಮಾತು, ಬಂಧುವೊಬ್ಬರ ನಡತೆ, ಪ್ರೀತಿಪಾತ್ರರ ಮುನಿಸು, ಸಾವು, ನೋವು ಹೀಗೆ ಕಾರಣಗಳು ಯಾವುದೇ ಇರಬಹುದು. ಅದು ನಮ್ಮ ಮನಸ್ಸನ್ನು ಹಿಂಸೆಯ ಕೂಪಕ್ಕೆ ತಳ್ಳಿಬಿಡುತ್ತದೆ. ಮನಸ್ಸು ನೋವಿಗೆ ಮುದುಡುವುದು ಸಹಜ. ಆದರೆ ಅದನ್ನು ಅಂಥ ಸ್ಥಿತಿಯಿಂದ ಹೊರತಂದುಕೊಳ್ಳಲಾಗದ್ದು ಸ್ವಯಂಕೃತ. ನೋವಿನ ಸಂದರ್ಭದಲ್ಲಿ ನಾವು ಮಾಡುವುದು ಎರಡು ತಪ್ಪುಗಳನ್ನು. ಮೊದಲನೆಯದಾಗಿ ಆ ಘಟನೆ, ವರ್ತನೆ, ಸನ್ನಿವೇಶದ ಬಗ್ಗೆ ಹೆಚ್ಚು ಮಾತನಾಡತೊಡಗುತ್ತೇವೆ. ಒಂದಿಲ್ಲೊಂದು ವ್ಯಕ್ತಿಗಳ ಜತೆ, ಒಂದಿಲ್ಲೊಂದು ಸಂದರ್ಭವನ್ನು ಸೃಷ್ಟಿಸಿಕೊಂಡು ಆ ಬಗ್ಗೆ ಚರ್ಚೆಗೆ ಇಳಿಯುತ್ತೇವೆ. ಮತ್ತೆ ಮತ್ತೆ ಅದನ್ನು ನೆನಪಿಸಿಕೊಂಡು ನಮ್ಮ ಅಳನ್ನು ತೋಡಿಕೊಳ್ಳುತ್ತಲೇ ಇರುತ್ತೇವೆ. ಪ್ರತಿ ಪುನರಾವರ್ತನೆಯ ಸಂದರ್ಭದಲ್ಲೂ ಇನ್ನೊಂದು ಹೆಚ್ಚನ್ನು ನಮ್ಮ ಕಲ್ಪನಾ ಶಕ್ತಿಯೊಂದಿಗೆ ಬೆರೆಸಿ ಹೇಳುತ್ತೇವೆ. ಇಲ್ಲಿ ವಿಷಯವನ್ನು ಪ್ರಸ್ತುತಪಡಿಸುವುದಕ್ಕಿಂತ ಹಾಗೆ ಹೇಳಿಕೊಂಡು ಸಿಂಪಥಿಯನ್ನು ಗಿಟ್ಟಿಸಿಕೊಳ್ಳುವ ಹುನ್ನಾರವನ್ನು ಮನಸ್ಸು ನಮಗೆ ಗೊತ್ತಿಲ್ಲದಂತೆಯೇ ಮಾಡಿರುತ್ತದೆ. ಇದಕ್ಕಿಂತ ಇನ್ನೊಂದು ಪ್ರಮುಖ ಸಂಗತಿಯೆಂದರೆ ಹಾಗಾಗಲು ಕಾರಣವೇನೆಂಬ ಬಗ್ಗೆ ಬಿಟ್ಟೂ ಬಿಡದೇ ಯೋಚಿಸುವುದು. ನಮ್ಮ ಊಹೆಯನ್ನು ಹರಿಬಿಟ್ಟಷ್ಟು ಹೊಸ ಹೊಸ ಸಾಧ್ಯತೆಯ ಭ್ರಮೆ ನಮ್ಮೊಳಗೆ ಮೊಳೆಯುತ್ತದೆ. ಒಂದೊಂದು ಯೋಚನೆ ಬಂದಾಗಲೂ ಅವು ಇರಿಯುತ್ತವೆ. ವಾಸ್ತವದಲ್ಲಿ ಹಾಗೇನೂ ಇಲ್ಲದೇ ಸನ್ನಿವೇಶದ ಒತ್ತಡದಲ್ಲೋ, ಅಚಾತುರ್ಯದಿಂದಲೋ ನಮ್ಮನ್ನು ನೋಯಿಸುವ ಘಟನೆ ಜರುಗಿದ್ದಿರಬಹುದೆಂದು ಅಂದುಕೊಳ್ಳುವುದೇ ಇಲ್ಲ. ಮೊದಲು ಆ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ. ಆಗಿದ್ದಕ್ಕೆ ಕಾರಣ ಹುಡುಕಿ. ಊಹೆ ಬೇಡ. ಮರು ದಿನದ ಬೆಳಗು ಇವೆಲ್ಲವನ್ನೂ ಗುಡಿಸಿ ಹಾಕುವಷ್ಟು ಬೆಳ್ಳಗಿರುತ್ತದೆ. ಹೊಸ ಯೋಚನೆಗಳ ಕಿರಣಕ್ಕೆ ಮೈಯ್ಯೊಡ್ಡಿ ನಿಂತುಬಿಡಿ. ಮೈ ಮನಗಳೆರಡೂ ಉಲ್ಲಸಿತಗೊಳ್ಳುತ್ತವೆ.
- ಸಹನೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.