ಚಮತ್ಕಾರ ನೈವೇದ್ಯ
ಒರಿಸ್ಸಾದ ಪುರಿಯ ಜಗನ್ನಾಥ ದೇಗುಲ ಜಗದ್ವಿಖ್ಯಾತ. ಕರ್ನಾಟಕದಲ್ಲಿ ಜಗನ್ನಾಥ ಸ್ವಾಮಿ ದೇವಸ್ಥಾನ ವಿರಳ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದಲ್ಲಿ ಒಂದು ದೇವಸ್ಥಾನವಿದೆ. ಪುರಿಯ ಜಗನ್ನಾಥ ರಥೋತ್ಸವ ನಡೆಯುವ ದಿನದಂದೇ ಇಲ್ಲೂ ರಥೋತ್ಸವ.
ಪುರಿಯಲ್ಲಿ ಇಲ್ಲದ ಒಂದು ವಿಶಿಷ್ಟ ಸಂಗತಿ ಇಲ್ಲಿದೆ. ಅದು ಚಮತ್ಕಾರ ನೈವೇದ್ಯ. ಇಲ್ಲಿ ಪ್ರತಿನಿತ್ಯ ಬೆಳಗ್ಗೆ ವಿವಿಧ ಭಕ್ಷ್ಯಗಳನ್ನು ನೈವೇದ್ಯ ಮಾಡಲಾಗುತ್ತದೆ. ಕುಂಬಾರರ ಮನೆಯಿಂದ ತಂದ ಹೊಸ ಮಡಿಕೆಯಲ್ಲಿ ಅಕ್ಕಿಗೆ ಸಕ್ಕರೆ ಹಾಗೂ ಹಾಲು ಬೆರೆಸಿ ವಿಶೇಷ ಪ್ರಸಾದ ತಯಾರಿಸಲಾಗುತ್ತದೆ. ನೈವೇದ್ಯ ಸಲ್ಲಿಸುವ ಪೂಜೆಗೆ ಅಟಕಾ ಎನ್ನುತ್ತಾರೆ. ಭಕ್ತರು ತಂದ ನೈವೇದ್ಯವನ್ನು ಅರ್ಚಕರು ಜಗನ್ನಾಥ ಸ್ವಾಮಿಗೆ ಸಮರ್ಪಿಸುತ್ತಾರೆ. ಪ್ರಸಾದದ ಮಡಿಕೆಯನ್ನು ಕೆಳಗೆ ಇಡುತ್ತಿದ್ದಂತೆ ಅದು ಬರೋಬ್ಬರಿ ನಾಲ್ಕು ಹೋಳಾಗುತ್ತದೆ. ದುಂಡನೆಯ ಹಣ್ಣನ್ನು ನಾಲ್ಕು ಭಾಗವಾಗಿ ಕತ್ತರಿಸಿದಂತೆ ಪ್ರಸಾದದ ಮಡಕೆ ಹೋಳಾಗುವ ಕೌತುಕದ ಘಟನೆಯನ್ನು ಇಲ್ಲಿ ನೋಡಬಹುದು.
ಜಗನ್ನಾಥಸ್ವಾಮಿ, ಬಲರಾಮ, ಸುಭದ್ರೆಯರ ಕಾಷ್ಟದ ಮೂರ್ತಿಗಳು ಇಲ್ಲಿವೆ. ಬೆಳ್ಳಿ ಮಂಟಪದಲ್ಲಿ ಕೃಷ್ಣ ಹಾಗೂ ರಾಧೆಯರ ಅಮೃತಶಿಲೆಯ ವಿಗ್ರಹಗಳಿವೆ. ರಾಜಸ್ಥಾನ ಮೂಲದ ವರ್ತಕರಾದ ಜಮನ್ದಾಸ್ಜೀ ದೂತ, ಬದ್ರೀನಾರಾಯಣಜೀ ದೂತ, ಬಾಲ ಮುಕುಂದಜೀ ಸೋನಿ, ಮೇಘರಾಜ ಮಾಲಪಾಣಿ, ಲಕ್ಷ್ಮೀನಾರಾಯಣ ಕಾಬ್ರಾ ಮತ್ತಿತರರ ಪರಿಶ್ರಮದಿಂದ 1916ರಲ್ಲಿ ಈ ದೇವಸ್ಥಾನ ಸ್ಥಾಪನೆಯಾಯಿತು.
ಭಕ್ತರು ದೇವರಿಗೆ ಅಟಕಾ ಹರಕೆ ಹೊತ್ತಿರುತ್ತಾರೆ. ತಮ್ಮ ಇಷ್ಟಾರ್ಥ ನೆರವೇರಿದ ಬಳಿಕ ಹರಕೆ ತೀರಿಸುತ್ತಾರೆ. ನಿತ್ಯ 25ರಿಂದ 35 ಅಟಕಾ ಪೂಜೆ ನಡೆಯುತ್ತದೆ. ಈ ಸೋಜಿಗವನ್ನು ವೀಕ್ಷಿಸಲು ಸ್ಥಳೀಯರು, ಹೊರರಾಜ್ಯಗಳ ಭಕ್ತರೂ ಬರುತ್ತಾರೆ.
-ಪ್ರವೀಣರಾಜು ಸೊನ್ನದ