ರಿಯಾಲಿಟಿ ಇಲ್ಲದ ರಿಯಾಲಿಟಿ ಶೋಗಳು
ಜ್ಞಾನ ಬೇಡವಾ?
ಎಲ್ಲಾ ಟಿವಿ ಚಾನೆಲ್ನವರು ಸ್ಪರ್ಧೆಗೆ ಬಿದ್ದಂತೆ ಹೊಸತನವನ್ನು ಸೃಷ್ಟಿಸಲು ಹೋಗಿ ಎಡವಟ್ಟು ಮಾಡಿಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ಮೆಗಾ ಧಾರಾವಾಹಿಗಳಂತೆ ರಿಯಾಲಿಟಿ ಶೋಗಳ ಅಬ್ಬರ. ಆದರೆ ಇವುಗಳಲ್ಲಿ ರಿಯಾಲಿಟಿ ಇಲ್ಲದಿರುವುದೇ ದುರಂತ. ಇವು ನಿಯಂತ್ರಿತ ಪಾತ್ರಧಾರಿಗಳ ಮೂಲಕ ದರ್ಶಕರನ್ನು ಮೂರ್ಖರನ್ನಾಗಿಸುವ ಕಾರ್ಯಕ್ರಮಗಳಷ್ಟೆ. ರಿಯಾಲಿಟಿ ಶೋಗಳು ದೇಶದ ಪ್ರಸ್ತುತ ಸಮಸ್ಯೆಗಳಿಗೆ ಧ್ವನಿಯಾಗದೆ, ಸಮಾಜಮುಖಿಯಾಗದೆ, ನೋಡುಗರಿಗೆ ಜ್ಞಾನದ ಹರಿವನ್ನು ವಿಸ್ತರಿಸದೇ ಮನರಂಜನೆಯೊಂದನ್ನೇ ಉದ್ದೇಶವಾಗಿಟ್ಟುಕೊಂಡು ಯುವ ಜನಾಂಗವನ್ನು ತಪ್ಪು ದಾರಿಗೆ ಎಳೆಯುತ್ತಿವೆ. ವಾಹಿನಿಗಳ ದೃಷ್ಟಿಕೋನ ಬದಲಾದರೆ ರಿಯಲ್ ರಿಯಾಲಿಟಿ ಶೋಗಳು ಮೂಡಿಬರಬಹುದು.
- ಬಸವರಾಜ ಆರ್. ಹೊನಗೌಡರ, ಚಿಕ್ಕೋಡಿ
ಬಹಿಷ್ಕಾರವೊಂದೇ ದಾರಿ!
ರಿಯಾಲಿಟಿ ಶೋಗಳು ಶುರುವಾದದ್ದು ಮನರಂಜನೆಯ ದೃಷ್ಟಿಯಿಂದ. ಆದರೆ ಟಿಆರ್ಪಿಗಾಗಿ ಏನಾದರೊಂದು ಗಿಮಿಕ್ ಮಾಡಿ ಆ ಮೂಲಕ ಜನಗಳ ಮನದಲ್ಲಿ ಕುತೂಹಲ ಹುಟ್ಟಿಹಾಕಿ ಅವರನ್ನು ಹೇಗಾದರೂ ತಮ್ಮ ಚಾನೆಲ್ನಿಂದ ಕದಲದಂತೆ ನೋಡಿಕೊಳ್ಳುವುದೇ ಚಾನೆಲ್ಗಳ ಗುರಿಯಾಗಿದೆ. ಈ ದೊಂಬರಾಟ ಯಾವ ಹಂತಕ್ಕೆ ಬಂದಿತೆಂದರೆ, ಕಾರ್ಯಕ್ರಮದ ಗುಣಮಟ್ಟ ಹೇಗೇ ಇರಲಿ, ಆದರೆ ಗಿಮಿಕ್ ಅನ್ನುವ ಸೆಳೆತದಾಟ ಇರಲೇಬೇಕು! ಪ್ರತಿ ಸಂಚಿಕೆಯಲ್ಲಿ ನಂಬಲಾಗದ ಜಗಳಗಳು, ಅನಿರೀಕ್ಷಿತ ತಿರುವುಗಳು, ಇದ್ದಕ್ಕಿದ್ದಂತೆ ಸ್ಪರ್ಧಿಯ ವೈಯುಕ್ತಿಕ ವಿಚಾರವನ್ನು ಬಳಸಿಕೊಳ್ಳುವಿಕೆ. ತೀರ್ಪುಗಾರರ ಅನಗತ್ಯ ಬೈಗುಳ, ಹೆಚ್ಚೇ ಅನಿಸುವ ಹೊಗಳಿಕೆ, ಫಲಿತಾಂಶ ಹೊರಗೆಡವುವಾಗ ಸಲ್ಲದ ಭಾವೋದ್ವೇಗ, ಸೋತವರ ಕಣ್ಣೀರು. ಇವುಗಳ ಮಧ್ಯೆ ಕಾರ್ಯಕ್ರಮದ ಮೂಲ ಉದ್ದೇಶವೇ ಮಣ್ಣು ಕಚ್ಚಿರುತ್ತದೆ. ಇದು ನೋಡುಗನ ನಂಬಿಕೆಗೆ ಬಗೆದ ದ್ರೋಹ. ವಾಹಿನಿಗಳು ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಜತೆಗೆ, ನೋಡುಗನೂ ಇಂತಹ ಕಾರ್ಯಕ್ರಮಗಳನ್ನು ಮನಸ್ಸಿನಿಂದ ಬಹಿಷ್ಕರಿಸುವುದಷ್ಟೇ ಇರುವ ದಾರಿ.
-ಸಂತೋಷ್ಕುಮಾರ್ ಎಲ್.ಎಂ., ಬೆಂಗಳೂರು