ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಣ್ಣೀರು ತರಿಸೋದಷ್ಟೇ ಅಲ್ಲ, ಕೊಬ್ಬು ಕರಗಿಸುತ್ತದೆ ಈರುಳ್ಳಿ!

Vishwanath S
Updated On : 19 Jul 2013, 6:31 am

ರಕ್ತ ಹೆಪ್ಪುಗಟ್ಟುವುದನ್ನು ತಡೆಯುವಲ್ಲಿ ಬೆಳ್ಳುಳ್ಳಿ ಪಾತ್ರದ ಕುರಿತಾಗಿ ಹಲವಾರು ಸಂಶೋಧನೆಗಳು, ದಾಖಲಾತಿಗಳು ನಡೆದಿವೆ. ಭಾರತದಲ್ಲೂ ಇತ್ತೀಚೆಗೆ 50 ವೈದ್ಯಕೀಯ ವಿದ್ಯಾರ್ಥಿಗಳು ಈ ಕುರಿತಂತೆ ವಿವರವಾದ ದಾಖಲಾತಿ ಮಾಡಿದ್ದಾರೆ ಎಂದು ಓದಿದ ನೆನಪು. ಅವರ ಪ್ರಕಾರ, ದಿನಕ್ಕೆ ಮೂರು ಹಸಿ ಎಸಳು ರಕ್ತ ಹೆಪ್ಪುಗಟ್ಟುವ ಸಾಧ್ಯತೆಯನ್ನು ಶೇ 20ರಷ್ಟು ಕಡಿಮೆ ಮಾಡುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ. ಆದರೆ ನಾವು ಬೆಳ್ಳುಳ್ಳಿಯ ಪ್ರಮಾಣದ ಬಗ್ಗೆ ಹೆಚ್ಚು ಆಲೋಚಿಸಬೇಕಿಲ್ಲ. ದಿನಕ್ಕೆ ಎರಡೇ ಎಸಳು ತಿಂದರೂ ಆದೀತು. ಬೆಳಗ್ಗೆ ಎದ್ದು ಮಾತ್ರೆಯಂತೆ ಅವನ್ನು ಎಸಳು ನುಂಗಿದರೂ ನಡೆದೀತು. ಹಸಿ ಬೆಳ್ಳುಳ್ಳಿ ತಿನ್ನಲು ಆಗದವರು ಬೇಯಿಸಿ ತಿನ್ನಬಹುದು ಅಥವಾ ಅಡುಗೆಯಲ್ಲಿ ಬಳಸಬಹುದು. ಒಟ್ಟಾರೆ ಬೆಳ್ಳುಳ್ಳಿ ಹೊಟ್ಟೆ ಸೇರಿದರಾಯಿತು. ಅದು ತನ್ನ ಪಾಡಿಗೆ ತಾನು ಕೆಲಸ ಮಾಡುತ್ತದೆ. ಜರ್ಮನ್ನರ ಸಂಶೋಧನೆಯಂತೆ ರಕ್ತವನ್ನು ಶುದ್ಧೀಕರಿಸುವ ಕಾರ್ಯವನ್ನೂ ಬೆಳ್ಳುಳ್ಳಿ ಮಾಡುತ್ತದೆ. ಹೀಗಾಗಿ ಅದರದು ತ್ರಿಬಲ್ ಧಮಾಕಾ. ಸಣ್ಣಪುಟ್ಟ ಟಿಪ್ಸ್ ಕೊಡುತ್ತೇನೆ. ಅಡುಗೆಯಲ್ಲಿ ಬಳಸುವಾಗ ಬೆಳ್ಳುಳ್ಳಿಯನ್ನು ಕತ್ತರಿಸುವುದಕ್ಕಿಂತ ಜಜ್ಜವುದು ಒಳ್ಳೆಯದು. ಜಜ್ಜುವುದರಿಂದ ಅದರಲ್ಲಿನ ಅಜೋನ್ ಪೂರ್ಣವಾಗಿ ಸಿಗುತ್ತದೆ. ಹುರಿಯುವಾಗ ಅಂದರೆ ಫ್ರೈ ಮಾಡುವಾಗ ಹೌದು-ಅಲ್ಲ ಅನ್ನುವಂತೆ ಸ್ವಲ್ಪವೇ ಸ್ವಲ್ಪ ಎಣ್ಣೆ ಬಳಸಿ. ಟೊಮೆಟೊ ಜತೆ ಬೆಳ್ಳುಳ್ಳಿ ಒಳ್ಳೆ ಕಾಂಬಿನೇಷನ್. ಆ್ಯಸಿಡಿಕ್ ಫುಡ್ ಜತೆ ಬೆಳ್ಳುಳ್ಳಿ ಬಳಸಿದರೆ ಒಳಿತು, ಏಕೆಂದರೆ ಕೆಲವು ಆ್ಯಸಿಡ್‌ಗಳು ಕೂಡ ಅಜೋನ್ ಅನ್ನು ಬಿಡುಗಡೆ ಮಾಡುತ್ತವೆ.
ಈರುಳ್ಳಿ ವಿಚಾರಕ್ಕೆ ಬರೋಣ. ಲಖನೌದಲ್ಲಿನ ಕೆ.ಜಿ. ವೈದ್ಯಕೀಯ ಕಾಲೇಜು ಪ್ರೊಫೆಸರ್ ಆಗಿದ್ದ ಎನ್.ಎನ್. ಗುಪ್ತಾ ಅವರ ಆಹಾರದಲ್ಲಿ ಕೊಬ್ಬಿನ ಅಂಶ ಅಧಿಕವಾಗಿತ್ತು. ಅದರಲ್ಲೂ ಬೆಣ್ಣೆ ಮತ್ತು ಕೆಲವು ಬಗೆಯ ಕ್ರೀಮ್‌ಗಳು ಇರಲೇಬೇಕಿತ್ತು. ಸ್ವಾಭಾವಿಕವಾಗಿ ಅದು ಸಮಸ್ಯೆ ತಂದೊಡ್ಡಿತು. ಈರುಳ್ಳಿ ಮಹಿಮೆ ತಿಳಿಯುತ್ತಿದ್ದಂತೆ ಡಾ.ಗುಪ್ತಾ ತಮ್ಮನ್ನೇ ಪರೀಕ್ಷೆಗೆ ಒಡ್ಡಿಕೊಳ್ಳಲು ನಿರ್ಧರಿಸಿದರು. ತಮ್ಮ ಆಹಾರ ಕ್ರಮವನ್ನು ಅವರು ಬದಲಿಸಿಕೊಳ್ಳಲಿಲ್ಲ. ಆದರೆ ಹೆಚ್ಚುವರಿಯಾಗಿ ಮಧ್ಯಮ ಗಾತ್ರದ ಒಂದು ಈರುಳ್ಳಿ ಸೇರಿಸಿಕೊಂಡರು. ಕ್ರಮವಾಗಿ ಆಹಾರ ಸೇವಿಸಿದ ಎರಡು ಮತ್ತು ನಾಲ್ಕು ಗಂಟೆ ನಂತರ ದೇಹದಿಂದ ರಕ್ತ ತೆಗೆದು ಪರೀಕ್ಷೆ ಮಾಡಲಾಯಿತು. ಈರುಳ್ಳಿ ರಕ್ತವನ್ನು ಮೊದಲಿಗಿಂತ ಸ್ವಲ್ಪ ತೆಳುವಾಗಿಸಿತ್ತು!
ದಿನಕ್ಕೊಂದು ಈರುಳ್ಳಿ ನಮ್ಮ ಆರೋಗ್ಯದ ಮೇಲೆ ಮ್ಯಾಜಿಕ್ ಮಾಡುವುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಹೃದ್ರೋಗಿಗಳು ಮಡಿವಂತಿಕೆ ಬಿಟ್ಟು ಇದನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. ಈರುಳ್ಳಿಯಲ್ಲಿನ ಪದಾರ್ಥಗಳು ರಕ್ತದ ಪ್ಲೇಟ್ಲೆಟ್‌ಗಳು ಗುಂಪುಗೂಡುವುದನ್ನು ತಡೆಯುತ್ತವೆ. ಹೆಪ್ಪುಗಟ್ಟಿದ ರಕ್ತವನ್ನು ಅತ್ಯಂತ ವೇಗವಾಗಿ ತೆಳುವಾಗಿಸುತ್ತವೆ. ಹೀಗಾಗಿ ಈರುಳ್ಳಿ ತಿನ್ನುವ ಅಭ್ಯಾಸ ಹೃದ್ರೋಗಗಳಿಂದ ದೂರವಿಡುವುದು ಎನ್ನುತ್ತಾರೆ ತಜ್ಞರು. ಅಧಿಕ ಕೊಬ್ಬಿನ ಅಂಶ ಇರುವ ಆಹಾರ ಸೇವಿಸಿದಾಗ ಜತೆಯಲ್ಲಿ ಸ್ವಲ್ಪ ಈರುಳ್ಳಿ ತಿಂದರೆ ಕೊಬ್ಬು ಉಂಟುಮಾಡಬಹುದಾದ ಅಪಾಯಗಳಿಂದ ಬಚಾವಾಗಬಹುದು. ಈರುಳ್ಳಿಯನ್ನು ಹಸಿಯಾಗಿ ಅಥವಾ ಬೇಯಿಸಿ ಹೇಗೇ ತಿಂದರೂ ಪರಿಣಾಮದಲ್ಲಿ ಹೇಳಿಕೊಳ್ಳುವಂಥ ವ್ಯತ್ಯಾಸ ಆಗುವುದಿಲ್ಲ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement