ನರೇಂದ್ರನ ವಾಗ್ದಾಳಿ!
ಅರ್ಥಮಾಡ್ಕೊಂಡ್ ಅಂಗಲ್ಲ ಹಿಂಗೆ
ಅನ್ನೋರ್ ಮಾತು ಗಂಗೆ
ಅರ್ಥ ಆಗ್ದಿದ್ರೂ ಸಿಕ್ದಂಗೆ ಅನ್ನೋದ್
ಚಂದ್ರನ ಮುಖಕ್ಕೆ ಉಗ್ದಂಗೆ!
ಜಿ.ಪಿ. ರಾಜರತ್ನಂ ಅವರ ರತ್ನನ ಈ ಮಾತುಗಳು ತಿಳಿದು ಮಾತನಾಡುವವರ ಹಾಗೂ ತಿಳಿಯದೆ ಮಾತನಾಡುವವರ ಅವಸ್ಥೆಯನ್ನು ಹೇಳುತ್ತವೆ. ರಾಮಕೃಷ್ಣರನ್ನು ನೋಡಿಕೊಳ್ಳುತ್ತಿದ್ದ ಡಾ. ಮಹೇಂದ್ರಲಾಲ್ ಸರ್ಕಾರ್ ಆ ಕಾಲದ ಪ್ರಸಿದ್ಧ ಹೋಮಿಯೋ ವೈದ್ಯರಲ್ಲೊಬ್ಬರು. ಅಲ್ಲದೆ ಅಸಾಧಾರಣ ಬುದ್ಧಿಶಾಲಿ ಹಾಗೂ ಜ್ಞಾನಿ. ಒಮ್ಮೆ ರಾಮಕೃಷ್ಣರು ಅವರಿಗೆ ನರೇಂದ್ರನೊಡನೆ ಮಾತುಕತೆ ನಡೆಸುವಂತೆ ಹೇಳಿದರು. ಅದರಂತೆ ಡಾ. ಸರ್ಕಾರ್ ಯಾವುದೋ ವಿಷಯವಾಗಿ ನರೇಂದ್ರನೊಂದಿಗೆ ವಾದಕ್ಕಿಳಿದರು. ಮಾತಿನ ಸಂದರ್ಭದಲ್ಲಿ ಸರ್ಕಾರ್ ತನ್ನ ವಾದವನ್ನು ಸಮರ್ಥಿಸಲು ಒಂದು ಪುಸ್ತಕವನ್ನು ಉದ್ಧರಿಸಿ ತನ್ನ ನಿಲುವನ್ನು ವ್ಯಕ್ತಪಡಿಸಿದರು. ತಕ್ಷಣ ನರೇಂದ್ರ, 'ಮಹಾಶಯರೆ, ನೀವು ಆ ಪುಸ್ತಕವನ್ನು ಆಮೂಲಾಗ್ರವಾಗಿ ಓದಿದ್ದೀರೋ ಅಥವಾ ಸುಮ್ಮನೆ ಮೇಲುಮೇಲೆ ನೋಡಿ ತಿರುವಿಹಾಕಿದ್ದೀರೋ?' ಎಂದು ಕೇಳಿದ. ಡಾ. ಸರ್ಕಾರ್ ಅವಾಕ್ಕಾದರು. ತನ್ನ ತಪ್ಪಿನ ಅರಿವಾಗಿ ಮರುಕ್ಷಣವೇ, 'ಇಲ್ಲ, ಆ ಪುಸ್ತಕವನ್ನು ನಾನು ಸಂಪೂರ್ಣವಾಗಿ ಓದಿಲ್ಲ' ಎಂದು ಒಪ್ಪಿಕೊಂಡರು.
ಆಗ ನರೇಂದ್ರ ಆ ಪುಸ್ತಕದಲ್ಲಿ ಪ್ರತಿಪಾದಿಸಲಾಗಿರುವ ಅಭಿಪ್ರಾಯ ಅದಲ್ಲ ಎಂದು ಹೇಳಿ ನಿಜಾಂಶವನ್ನು ಸ್ಪಷ್ಟಪಡಿಸುತ್ತಾ, ಆ ಪುಸ್ತಕದ ಪ್ರತಿ ಸಾಲುಗಳನ್ನು ಉದ್ಧರಿಸತೊಡಗಿದ. ಮಹೇಂದ್ರಲಾಲ್ ವಿಸ್ಮಿತರಾದರು. ನರೇಂದ್ರನ ಜ್ಞಾನ, ಅನನ್ಯ ಸ್ಮರಣಶಕ್ತಿ ಹಾಗೂ ವಾಕ್ಪಟುತ್ವವನ್ನು ಕಂಡು ಬೆರಗಾಗಿ, ಹೃತ್ಪೂರ್ವಕವಾಗಿ ಅಭಿನಂದಿಸಿದರು.
ರಾಮಕೃಷ್ಣರು ನರೇಂದ್ರನಲ್ಲಿ ಇಂತಹ 18 ಶಕ್ತಿಗಳಿರುವುದನ್ನು ಕಂಡುಕೊಂಡೇ ಅವನನ್ನು ನಾಯಕನನ್ನಾಗಿ ಆರಿಸಿಕೊಂಡಿದ್ದರು.
-ಆನಂದ ಎಸ್.ಎನ್.
anandsn193@gmail.com