ಅಸ್ಥಿ ಪಡೆದ ಭಕ್ತರು; ಆದರ್ಶ ಹಿಡಿದ ಶಿಷ್ಯರು!
'ಅರ್ಧಂಬರ್ಧ ತಿಳಿವಳಿಕೆಯ, ಕೇವಲ ಭಾವರಾಜ್ಯದಲ್ಲಿ ಸಂಚರಿಸುತ್ತಿರುವ ಆ ಹುಡುಗನ ಮಾತನ್ನು ಯಾರು ಕೇಳುತ್ತಾರೆ? ದೊಡ್ಡ ದೊಡ್ಡ ವಿಚಾರಗಳನ್ನು ಜನರ ಮುಂದೆ ಬಣ್ಣಿಸುತ್ತ, ಜೀವನದಲ್ಲಿ ಅವುಗಳನ್ನೆಲ್ಲ ಸಾಧಿಸಿ ತೋರಿಸುವುದಾಗಿ ಹೇಳುತ್ತಿದ್ದರೆ, ಕೇಳಿದವರೆಲ್ಲ ನಕ್ಕರು; ಬಳಿಕ ನಗೆ ನಿಲ್ಲಿಸಿ ಸಿಟ್ಟಿಗೇರಿದರು, ಛೀಮಾರಿ ಹಾಕಿದರು. ಅಲ್ಲದೆ ತೊಂದರೆ ಕೊಡಲು ಶುರುಮಾಡಿದರು. ಕೇವಲ ಒಬ್ಬ ಹುಡುಗನ ಕಲ್ಪನೆಗಳ ಬಗ್ಗೆ ಯಾರು ಸಹಾನುಭೂತಿ ತೋರುತ್ತಾರೆ. ಅದರಲ್ಲೂ ಆ ಕಲ್ಪನೆಗಳಿಂದ ಇತರ ಎಷ್ಟೋ ಜನರಿಗೆ ತೊಂದರೆಯಾಗುತ್ತಿರುವಾಗ! ಆ ಹುಡುಗನ ಬಗ್ಗೆ ಸಹಾನುಭೂತಿ ತೋರುವವರು ಯಾರಿದ್ದಾರೆ?' ಇವು ರಾಮಕೃಷ್ಣರ ಮರಣದ ಬಲಿಕ ಎದುರಿಸಿದ ಕಷ್ಟದ ದಿನಗಳನ್ನು ಕುರಿತು ವಿವೇಕಾನಂದರು ಪತ್ರದಲ್ಲಿ ಬರೆದಿರುವ ಸಾಲುಗಳು.
ರಾಮಕೃಷ್ಣರು ದೇಹತ್ಯಾಗ ಮಾಡಿದ ಮೇಲೆ ಗೃಹೀಭಕ್ತರೆಲ್ಲ ಯುವಶಿಷ್ಯರಿಗೆ ತಂತಮ್ಮ ಮನೆಗಳಿಗೆ ವಾಪಸಾಗಲು ಸಲಹೆ ನೀಡಿದರು. ಆದರೆ ನರೇಂದ್ರ ಅವರ ಸಲಹೆ, ವಾದಗಳನ್ನೆಲ್ಲ ಧಿಕ್ಕರಿಸಿ, ತಾವೆಲ್ಲ ತ್ಯಾಗಜೀವನವನ್ನೇ ಕೈಗೊಳ್ಳುವವರು ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಗೃಹಸ್ಥರು ರಾಮಕೃಷ್ಣರ ಅವಶೇಷಗಳನ್ನು ಉದ್ಯಾನದಲ್ಲಿ ಪ್ರತಿಷ್ಠಾಪಿಸುವುದೆಂದು ತೀರ್ಮಾನಿಸಿದರು. ಪರಿಸ್ಥಿತಿಯನ್ನರಿತ ನರೇಂದ್ರ ಸೋದರ ಶಿಷ್ಯರನ್ನೆಲ್ಲ ಕರೆದು, 'ಅಸ್ಥಿಯನ್ನು ಭಕ್ತರೇ ಇಟ್ಟುಕೊಳ್ಳಲಿ. ಅವರು ರಾಮಕೃಷ್ಣರನ್ನು ಪೂಜಿಸುತ್ತಾರೆ. ಅದೂ ಒಳ್ಳೆಯದೆ. ನಾವು ಅವರ ಬೋಧನೆಗಳನ್ನು, ಆದರ್ಶಗಳನ್ನು ಪ್ರಾಮಾಣಿಕ ಭಾವದಿಂದ ಸ್ವೀಕರಿಸಿ, ಅವುಗಳಿಗೆ ತಕ್ಕಂತೆ ಬದುಕಿದರೆ, ಈ ಅವಶೇಷಗಳನ್ನು ಪೂಜೆ ಮಾಡುವುದಕ್ಕಿಂತಲೂ ಎಷ್ಟೋ ಪಾಲು ಉತ್ತಮವಾದ ಕೆಲಸವನ್ನು ಮಾಡಿದಂತಾಗುತ್ತದೆ' ಎಂದು ಬುದ್ಧಿ ಹೇಳಿದ.
-ಆನಂದ ಎಸ್.ಎನ್.
anandsn193@gmail.com