ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಆಟ ಬಯಲು

Vishwanath S
Updated On : 21 Jul 2013, 4:07 am

ಆಷಾಢದ ತಂಪು ತನುಮನಕ್ಕೆ ಮುದ ನೀಡುತ್ತಿದೆ. ಬೀಜಗಳನ್ನು ಭೂತಾಯಿಯ ಉಡಿಗೆ ತುಂಬಿ ತುಸು ಬಿಡುವು ಪಡೆದ ಬಯಲುಸೀಮೆಯ ಗ್ರಾಮೀಣರು ಸಂಭ್ರಮದ ಜಪದಲ್ಲಿದ್ದಾರೆ. ಹೊಲಗಳಲ್ಲಿ ವರ್ಷವಿಡೀ ಮೈಮುರಿದು ದುಡಿಯುವ ಜನಕ್ಕೆ ಹಬ್ಬ- ಹರಿದಿನಗಳೇ ರಜಾ ದಿನಗಳು. ಕಾರಹುಣ್ಣಿಮೆ ಹಬ್ಬಗಳನ್ನು ಸಾಲು ಸಾಲಾಗಿ ಕರೆದು ತರುತ್ತದೆ ಎನ್ನುವ ನಂಬಿಕೆಯ ಮೇಲೆ, ಜನರು ಎತ್ತುಗಳನ್ನು (ಬಸವ) ಕರಿ ಓಟಕ್ಕೆ ಬಿಟ್ಟು ಬೆಳೆಯ ಅಂದಾಜು ಮಾಡಿಕೊಳ್ಳುತ್ತಾರೆ. ಜನಪದೀಯ ಆಟಗಳನ್ನು ಆಡಿ ಮೈ- ಮನಸ್ಸು ಹಗುರ ಮಾಡಿಕೊಳ್ಳುತ್ತಾರೆ.
ಹಳ್ಳಿಗೂ ಇಂದು ಬಣ್ಣದ ಟಿವಿ, ಡಿವಿಡಿ ಪ್ಲೇಯರ್ ಕಾಲಿಟ್ಟಿದೆ. ಸಿನಿಮಾ, ಧಾರಾವಾಹಿ, ಕ್ರಿಕೆಟ್‌ಪ್ರಿಯರ ಸಂಖ್ಯೆಯೂ ಹೆಚ್ಚಿದೆ. ಪೇಟೆಗೆ ಬಂದಾಗಲೆಲ್ಲ ನೆಚ್ಚಿನ ನಾಯಕ ನಟನ ಚಿತ್ರ ನೋಡಲು ಟ್ಯಾಕೀಸಿಗೆ ನುಗ್ಗುತ್ತಾರೆ. ಆದರೆ, ಅದೇಕೋ ಇವ್ಯಾವೂ ಪರಿಪೂರ್ಣ ಮನರಂಜನೆ ನೀಡುತ್ತಿಲ್ಲ. ಸಮೂಹ ಭಾಗಿತ್ವ, ಮಾತು, ಮನಸ್ಸು, ಶ್ರಮ ಒಟ್ಟಾಗಿಸಿ ಅನುಭವಿಸುವ ಮನರಂಜನೆ ಆಗುತ್ತಿಲ್ಲವೆನ್ನುವ ಕೊರಗು ಮನದ ಮೂಲೆಯನ್ನು ಕೊರೆಯುತ್ತಿರುವುದು ಸುಳ್ಳಲ್ಲ. ಪರದೆಯ ಮೇಲಿನ ಆಟವೆಲ್ಲವೂ ಕೃತಕ ಕೃತಕ. ಹೀಗಾಗಿ, ಮತ್ತೆ ಗ್ರಾಮೀಣ ಅಸಲಿ ಕ್ರೀಡೆಗಳತ್ತ ಈ ಹಳ್ಳಿಯ ಜನ ನಿಧಾನ ವಾಲುತ್ತಿದ್ದಾರೆ. ಸಂಗ್ರಾಣಿ ಕಲ್ಲೆತ್ತುವ ಶರ್ತು, ಚಕ್ಕಡಿ ಓಡಿಸುವ ಶರ್ತು, ನಿಕಾಲಿ ಜಂಗಿ ಕುಸ್ತಿ, ಕ್ವಿಂಟಾಲ್ ಭಾರದ ಚೀಲ ಹೊತ್ತು ದೀಡ್ ನಮಸ್ಕಾರ ಹಾಕುವ, ಮರಗಾಲು ಕಟ್ಟಿ ಓಡುವಂಥ ಶಕ್ತಿ ಪ್ರದರ್ಶನದ ಕ್ರೀಡೆಗಳು ಅಲ್ಲಲ್ಲಿ ದಾಂಗುಡಿ ಇಟ್ಟಿವೆ.
ಮೊನ್ನೆ ಬಾದಾಮಿ ತಾಲೂಕು ಹಂಗರಗಿಯಲ್ಲಿ ಒಂದು ಸಂಜೆ ಯುವಕರ ಒತ್ತಾಯಕ್ಕೆ ಮಣಿದ ಕೆಲವು ವೃದ್ಧರು ತಮ್ಮ ನೆನಪಿನ ಪುಟದಿಂದ ಮಾಸಿ ಹೋಗಿದ್ದ ವಿರಳಾತಿ ವಿರಳ ಆಟಗಳನ್ನು ಕಷ್ಟಪಟ್ಟು ಬಯಲಿಗಿಟ್ಟರು. ಅವುಗಳಲ್ಲಿ ಬಹುತೇಕ ಆಟಗಳು ಸಾಹಸ ಪ್ರಧಾನ. ಅತಿ ಸರಳ ಎನಿಸಿದರೂ ಯುಕ್ತಿ ಮತ್ತು ಶಕ್ತಿ ಬಯಸುವ ಆಟಗಳು.
ಒಣಕೆ ದಾಟು, ಸವಾರಿ ಎದೆಸ್ವಾಮು, ಕುಂಡೆ ಜಿಗಿತ, ಶಿರದ ಮೇಲಿನ ಚಕ್ರಸ್ವಾಮು, ಒಂಟಿ ರಟ್ಟಿ ಎದೆಸ್ವಾಮು, ಒಂಟಿ ಕಾಲಿನ ಊಟಾಬೈಸ್... ಹೀಗೆ ಆ ಅಜ್ಜಂದಿರು ಎದುರಿಗೆ ಯುವಕರನ್ನು ನಿಲ್ಲಿಸಿ ಮಾರ್ಗದರ್ಶನ ಮಾಡುತ್ತ ಆಡಿಸುತ್ತಿದ್ದ ಪರಿ ಅಚ್ಚರಿ. ಯಾವುದೇ ಜಾಗತಿಕ ಕ್ರೀಡೆಗೆ ಕಮ್ಮಿ ಇಲ್ಲದ ಸಾಹಸ ಮತ್ತು ಯುಕ್ತಿದಾಯಕ ಕ್ರೀಡೆಗಳಿವು. ಆಟಕ್ಕೆ ನಿಂತ ಹಳ್ಳಿ ಲಗಾನ್ ವೀರರ ಹಣೆಯ ಮೇಲೆ ಜಿನುಗುವ ಬೆವರು, ಗೆಲುವಿನ ಕೇಕೆ, ನೆರೆದವರ ಚಪ್ಪಾಳೆಯ ಸಂಭ್ರಮ ಬಹುದಿನಗಳ ಬಳಿಕ ಒಂದು ಸಾಮೂಹಿಕ ಸಂಭ್ರಮದ ಭೋರಿ ಭೋಜನ.
ನಮ್ಮ ಜನಪದರಲ್ಲಿ ಅದೆಂಥ ಶ್ರೀಮಂತ ಕ್ರೀಡೆಗಳು ಇವೆಯಲ್ಲಾ ಎನ್ನುವ ಅಚ್ಚರಿ ಮೂಡಿತು. ಕ್ರೀಡಾ ಜಗತ್ತು ಇವುಗಳತ್ತ ಒಮ್ಮೆಯಾದರೂ ತಿರುಗಿ ನೋಡಬೇಕೆನೋ...
ಅಂಥ ಹಳ್ಳಿ ಆಟಗಳ ಸ್ಯಾಂಪಲ್ ಇಲ್ಲಿದೆ...
ಚಂಕ್ರಸ್ವಾಮು
ಹಾಸಿಗೆಯನ್ನು ಹಾಸಿ ಅದರಲ್ಲಿ ಭೂಮುಖವಾಗಿ ಮಲಗಬೇಕು. ಮತ್ತೊಬ್ಬ ಯುವಕ ಮಲಗಿದವನ ಬೆನ್ನೇರಿ ಕುಳಿತು ರಟ್ಟೆಯಲ್ಲಿ ಕಾಲು ಸೇರಿಸುತ್ತಾನೆ. ಅಂದರೆ ಕೈಗಳನ್ನು ನೆಲಕ್ಕೆ ಊರಲು ಆಗುವುದಿಲ್ಲ. ಬರೀ ಕಾಲು, ಮೊಣಕಾಲು ಮತ್ತು ಎದೆಯ ಸಹಾಯದಿಂದಲೇ ಹೆಗಲ ಮೇಲೆ ಕುಳಿತವನನ್ನು ಹೊತ್ತು ಮೇಲೇಳುವುದೆಂದರೆ ನಿಜಕ್ಕೂ ಎಂಟೆದೆಯೇ ಬೇಕು.
ಸವಾರಿ ಎದೆಸ್ವಾಮು
ಕೈಕಾಲುಗಳನ್ನು ಭೂಮಿಗೆ ಊರಿ ಸೊಂಟ ಎತ್ತರಿಸಿದಾಗ ಕಿರಿಯ ವಯಸ್ಸಿನ ಯುವಕ ಆತನ ಎರಡೂ ಮೀನುಖಂಡಗಳ ಮೇಲೆ ತನ್ನೆರಡೂ ಕಾಲುಗಳನ್ನಿಟ್ಟು ಸೊಂಟವನ್ನು ಗಟ್ಟಿಯಾಗಿ ಹಿಡಿದು ನಿಲ್ಲುತ್ತಾನೆ. ಆಗ ಈತನ ಭಾರ ಹೊತ್ತೆ ಸೂರ್ಯ ನಮಸ್ಕಾರದ ಸ್ವಾಮು ತೆಗೆಯಬೇಕು. ಒಬ್ಬೊಬ್ಬರೇ ಭೂಮಿಗೆ ಮೂಗು ಮುಟ್ಟಿಸಿ ಏಳುವುದರಲ್ಲಿ ಏಳೂ ಹನ್ನೊಂದು ಆಗುವಾಗ ಮೀನುಖಂಡದ ಮೇಲೆ ನಿಂತ ವ್ಯಕ್ತಿಯ ಭಾರ ಹೊತ್ತು ಏಳುವುದೆಂದರೆ ಕ್ವಿಂಟಾಲ್ ತೂಕದ ಚೀಲ ಹೊತ್ತು ದೀಡ್ ನಮಸ್ಕಾರ ಹಾಕಿದಂತೆಯೇ.
ದುಂಡಿಭಾರ
ಎಲ್ಲೆಡೆ ಇದು ಚಾಲ್ತಿಯಲ್ಲಿದೆ. ಆದರೆ, ಸರಿಯಾಗಿ ಕಡೆದು ಗೋಳಾಕಾರ ರೂಪ ಬಾರದೇ ಇರುವ ದುಂಡಿ (ಬಂಡೆಗಲ್ಲು) ಎತ್ತಿ ಹೆಗಲ ಮೇಲಿಟ್ಟುಕೊಳ್ಳುವುದೆಂದರೆ ಬೆಟ್ಟವನ್ನೇ ಎತ್ತಿ ಇಟ್ಟಂತೆ.
ಕುಂಡೆ ಜಿಗಿತ
ತುದಿ ಪೃಷ್ಠದಿಂದ ಕುಳಿತು ಎರಡೂ ಕೈ- ಕಾಲುಗಳನ್ನು ಮೇಲೆತ್ತಿ ಜಿಗಿಯುತ್ತ ಜಿಗಿಯುತ್ತ ಸಾಗುವುದು. ಇಡೀ ಮೈಭಾರವನ್ನು ಪೃಷ್ಠ ಮೇಲೆ ಜಿಗಿಯುವುದು ಕೂಡ ಹೊಟ್ಟೆ, ಸೊಂಟದಲ್ಲಿ ಶಕ್ತಿಯಿದ್ದವರಿಂದ ಮಾತ್ರ ಸಾಧ್ಯ.
ಒಂಟಿಗಾಲಿನ ಉಟಾಬೈಸ್
ತಾಲೀಮಿನ ಮನೆಗಳಲ್ಲಿ ಉಟಾಬೈಸ್ ಸಾಮಾನ್ಯ. ಆದರೆ, ಇದು ಒಂದೇ ಕಾಲಿನ ಉಟಾಬೈಸ್. ಮೇಲಾಗಿ ಒಂದು ಕಾಲನ್ನು ನೇರವಾಗಿ ಚಾಚಿ ಹೆಬ್ಬೆರಳು ಹಿಡಿದುಕೊಂಡು, ಒಂದೇ ಕಾಲಿನಿಂದ ಮೇಲೇಳುವ ಮತ್ತು ಕೂರುವ ಸಾಹಸ ಕ್ರೀಡೆ.
ಒನಕೆ ದಾಟು
ಭತ್ತ ಕುಟ್ಟುವ ಒನಕೆಯನ್ನು ಮಲಗಿಸಬೇಕು. ಅದರ ಬಳಿ ನಿಂತು ಎರಡೂ ಕೈಯಿಂದ ಕಾಲಿನ ಎರಡೂ ಹೆಬ್ಬೆರಳು ಗಟ್ಟಿಯಾಗಿ ಹಿಡಿದು, ಆ ಒನಕೆಗೆ ತಾಗದಂತೆ ಜಿಗಿದು ದಾಟಬೇಕು. ಬಗ್ಗಿ ನಿಂತು ಇಡೀ ದೇಹವನ್ನು ಎತ್ತಿ ಕುಕ್ಕರಿಸುವುದು ಸಾಮಾನ್ಯ ಸಾಹಸವೇನಲ್ಲ.

-ಮಲ್ಲಿಕಾರ್ಜುನ ಸಿದ್ದಣ್ಣವರ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments