ಕೆಂಪು ರಕ್ತದ ಗೆಳೆಯ ಈ ಕೆಂಪು ದ್ರಾಕ್ಷಿ
ಈ ವಾರ ಪುನಃ ದ್ರಾಕ್ಷಿ ಬಗ್ಗೆ ಹೇಳಬೇಕಾಗಿದೆ. ಹೇಳಿಕೇಳಿ ದ್ರಾಕ್ಷಿ 'ಹಣ್ಣುಗಳ ರಾಣಿ' ಅಲ್ಲವೆ? ಅದರ ಬಗ್ಗೆ ಹೇಳಿದಷ್ಟೂ ಕಡಿಮೆಯೇ. ನಮ್ಮ ನಿತ್ಯದ ಆಹಾರ ವಿಧಾನದಲ್ಲಿ ದ್ರಾಕ್ಷಿಗೆ ಮಹತ್ವದ ಸ್ಥಾನವುಂಟು. ಹಣ್ಣುಗಳನ್ನು ಹಾಗೆಯೇ ತಿನ್ನುತ್ತೇವೆ, ಅದರ ಜ್ಯೂಸ್ ಕುಡಿಯುತ್ತೇವೆ, ಇಲ್ಲವೇ ಸಲಾಡ್‌ಗಳ ರೂಪದಲ್ಲಿಯಾದರೂ ದ್ರಾಕ್ಷಿಯನ್ನು ತಿನ್ನುತ್ತೇವೆ. ಒಣ ದ್ರಾಕ್ಷಿಯಂತೂ ಅನೇಕ ಔಷಧಗಳಿಗೂ ಬೇಕು. ನಾನಿಲ್ಲಿ ಮುಖ್ಯವಾಗಿ ಹೇಳುತ್ತಿರುವುದು ಕೆಂಪು ದ್ರಾಕ್ಷಿ ಬಗ್ಗೆ. ಕೆಂಪು ದ್ರಾಕ್ಷಿಯನ್ನು ವೈನ್ ತಯಾರಿಕೆಯಲ್ಲಿ ಜಾಸ್ತಿ ಬಳಸುತ್ತಾರೆ ನಿಜ. ಆದರೆ ಅದು ಆರೋಗ್ಯಕ್ಕೂ ಒಳ್ಳೆಯದು. ಕೀಟನಾಶಕಗಳನ್ನು ಅಧಿಕವಾಗಿ ಸಿಂಪಡಿಸುವುದರಿಂದ ಮತ್ತು ಹಣ್ಣಿನ ಸಿಪ್ಪೆಯಲ್ಲಿಯೇ ಅಧಿಕ ಪೌಷ್ಟಿಕಾಂಶಗಳಿರುವುದರಿಂದ ಕೆಂಪು ದ್ರಾಕ್ಷಿಯೂ ಸೇರಿದಂತೆ ಯಾವುದೇ ಹಸಿ ದ್ರಾಕ್ಷಿಯನ್ನು ಚೆನ್ನಾಗಿ ತೊಳೆದು ತಿನ್ನುವುದು ಉಪಯುಕ್ತ. ಉಪ್ಪು ನೀರಿನಲ್ಲಿ ಕೆಲಕಾಲ ನೆನಸಿಟ್ಟು ಆ ನಂತರ ತೊಳೆದರೆ ಕೀಟನಾಶಕಗಳೆಲ್ಲ ಹೋಗುತ್ತವೆ. 'ರಕ್ತ ಪರಿಚಲನೆಯ ತೊಂದರೆ ಅನುಭವಿಸುತ್ತಿರುವವರು ಕೆಂಪು ದ್ರಾಕ್ಷಿಯನ್ನು ಹೆಚ್ಚು ಬಳಸುವುದು ಉಪಯುಕ್ತ' ಎನ್ನುತ್ತಾರೆ ತಜ್ಞರು.
ಚೀನಾ ಮತ್ತು ಜಪಾನ್‌ಗಳಲ್ಲಿ ಶತಮಾನಗಳಷ್ಟು ಹಿಂದೆ ಕೆಂಪು ದ್ರಾಕ್ಷಿ ಪ್ರಮುಖ ಔಷಧವಾಗಿತ್ತು. ಅದರಲ್ಲೂ ರಕ್ತಕ್ಕೆ ಸಂಬಂಧಿಸಿದ ಯಾವುದೇ ತೊಂದರೆ ಇದ್ದರೂ ಕೆಂಪು ದ್ರಾಕ್ಷಿಯನ್ನು ಮುಖ್ಯವಾಗಿ ಬಳಸುತ್ತಿದ್ದರು. ಅದರಲ್ಲಿರುವ ರೆಸ್ವೆರಾಟ್ರೋಲ್ ಎನ್ನುವ ಪದಾರ್ಥ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಗುಣ ಹೊಂದಿದೆ ಎನ್ನುವುದನ್ನು ಪತ್ತೆ ಮಾಡಿದವರೂ ಜಪಾನೀಯರೇ. ಈ ರೆಸ್ವೆರಾಟ್ರೋಲ್ ಇದೆಯಲ್ಲ, ಇದು ಸಾಮಾನ್ಯದ್ದಲ್ಲ. ದ್ರಾಕ್ಷಿಯಲ್ಲಿರುವ ಎಲ್ಲಾ ಪೌಷ್ಟಿಕ ಅಂಶಗಳನ್ನು, ಖನಿಜಗಳನ್ನು ಔಷಧವಾಗಿ ಪರಿವರ್ತಿಸುತ್ತದೆ. ರಕ್ತದ ಪ್ಲೇಟ್ಲೆಟ್‌ಗಳು ಗುಂಪುಗೂಡುವುದನ್ನು ತಪ್ಪಿಸುವ ಮೂಲಕ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಸಸ್ಯಾಹಾರವಲ್ಲದೆ ಅನ್ಯಾಹಾರ ಸೇವಿಸುವ ಅಭ್ಯಾಸ ಇರುವವರಂತೂ ಕೆಂಪು ದ್ರಾಕ್ಷಿ ತಿನ್ನುವುದು ಒಳ್ಳೆಯದು. ಏಕೆಂದರೆ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವ ಶಕ್ತಿ ಇದಕ್ಕಿದೆ.
'ರೆಸ್ವೆರಾಟ್ರೋಲ್ ದ್ರಾಕ್ಷಿಯ ಸಿಪ್ಪೆಯಲ್ಲಿರುತ್ತದೆ. ಹೀಗಾಗಿ ಹಾಗೇ ತಿಂದರೆ ಪ್ರಯೋಜನ ಹೆಚ್ಚು. ರಸ ಮಾಡಿಕೊಂಡು ಕುಡಿದರೆ ಅಲ್ಪಪ್ರಮಾಣದ ರೆಸ್ವೆರಾಟ್ರೋಲ್ ಮಾತ್ರ ದೇಹ ಸೇರುತ್ತದೆ. ಕೆಂಪು ದ್ರಾಕ್ಷಾ ರಸ ಸೇವಿಸುವವರು ಊಟದ ಜತೆಯಲ್ಲಿ ಕುಡಿಯುವುದು ಆರೋಗ್ಯಕರ. ಕೊಬ್ಬು ಅಧಿಕ ಪ್ರಮಾಣದಲ್ಲಿ ಶೇಖರವಾಗದಂತೆ ನೋಡಿಕೊಳ್ಳುತ್ತದೆ ಎನ್ನುವ ಕಾರಣಕ್ಕಾಗಿ ಇಂಥ ಸಲಹೆ. ಹಾಗಂತ ದ್ರಾಕ್ಷಾ ರಸವನ್ನು ಅತಿಯಾಗಿ ಸೇವಿಸಿದರೆ ಹೃದಯದ ತೊಂದರೆಗೆ ದಾರಿಯಾಗುತ್ತದೆ' ಎನ್ನುತ್ತಾರೆ ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ಕೃಷಿ ಕಾಲೇಜು ಪ್ರೊಫೆಸರ್ ಆಗಿದ್ದ ಡಾ. ಲೆರೊಯ್ ಕ್ರೀಸೆ. ರಕ್ತದ ತೊಂದರೆಗೆ ನೀಲಿ ಅಥವಾ ಬೇರೆ ಬಣ್ಣದ ದ್ರಾಕ್ಷಿ ಅಷ್ಟೊಂದು ಉಪಯುಕ್ತವಲ್ಲ ಎನ್ನುವುದು ಅವರ ಅಭಿಪ್ರಾಯ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com