ನರೇಂದ್ರ ಮೋಡಿ
ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ಪಡೆದಿದ್ದ ಆ ಬಾಲಕನಿಗೆ ಬಹುಮಾನ ಪಡೆಯಲು ಹೋಗುವಾಗ ನೆಟ್ಟಗೊಂದು ಪ್ಯಾಂಟೂ ಇರಲಿಲ್ಲ. ಅಣ್ಣನ ನೆರವಿನಿಂದ ಪ್ಯಾಂಟು ಹೊಲಿಸಿ, ಬಹುಮಾನ ಪಡೆದ ಆ ಬಾಲಕನಿಗೆ ಮುಂದೊಂದು ದಿನ ತಾನು ಸಹಸ್ರಾರು ಕೋಟಿ ರು. ವ್ಯವಹರಿಸುವ ಬ್ಯಾಂಕಿನ ಒಡೆಯನಾಗುತ್ತೇನೆಂದು ಗೊತ್ತಿರಲಿಲ್ಲ!
ಚಾರ್ಟೆರ್ಡ್ ಅಕೌಂಟೆಂಟ್ ಆಗಲು ಹೊರಟಿದ್ದ ಇವರು ಈಗ ಬ್ಯಾಂಕಿಂಗ್ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರು. ಚೆನ್ನೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ರಾಷ್ಟ್ರೀಕೃತ ಇಂಡಿಯನ್ ಓವರ್ಸೀಸ್ ಬ್ಯಾಂಕ್ (ಐಓಬಿ)ಗೆ ಅಧ್ಯಕ್ಷರು!
ಇವರು ಅಪ್ಪಟ ಕನ್ನಡಿಗ. ಮಂಗಳೂರಿನ ಡಾ. ಎಂ. ನರೇಂದ್ರ. ಕಷ್ಟದಲ್ಲೇ ಬೆಳೆದು, ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪೂರೈಸಿದವರು. ತಂದೆ ಮಂಗಳೂರು ಕುಳಾಯಿಯ ಎಂ. ಶಂಕರನಾರಾಯಣಯ್ಯ ಮತ್ತು ತಾಯಿ ಎಂ. ಸುಮತಿ. ಕುಳಾಯಿ ವಿದ್ಯಾದಾಯಿನಿ ಶಾಲೆಯಲ್ಲಿ ಇವರ ತಂದೆ ಶಿಕ್ಷಕರಾಗಿ ನಿವೃತ್ತರಾದವರು. ಐವರು ಗಂಡು ಹಾಗೂ ಇಬ್ಬರು ಹೆಣ್ಣು ಹೀಗೆ ಒಟ್ಟು ಏಳು ಜನ ಮಕ್ಕಳಲ್ಲಿ ನರೇಂದ್ರ ಒಬ್ಬರು. ಆ ಕಾಲದಲ್ಲಿ ಎಲ್ಲರಿಗೂ ಉತ್ತಮ ಶಿಕ್ಷಣ, ಉತ್ತಮ ಬಟ್ಟೆ ಕಷ್ಟಸಾಧ್ಯವಾದ ಮಾತು. ಚಿಕ್ಕಂದಿನಲ್ಲಿ ತಾಯಿ ಜತೆ ತರಕಾರಿ, ಹೂವು, ಹಣ್ಣುಹಂಪಲು ಬೆಳೆದು ಮಾರಾಟಕ್ಕೆ ಕೈಜೋಡಿಸಿದರು. ಬಳಿಕ ಗೋವಿಂದದಾಸ್ ಕಾಲೇಜಿನಲ್ಲಿ ಬಿ.ಕಾಂ.ನಲ್ಲಿ ಮೂರನೇ ರ್ಯಾಂಕ್ ಪಡೆದಿದ್ದಕ್ಕೆ ಬಂಗಾರದ ಪದಕ ಬಂತು. ಬಳಿಕ ನರೇಂದ್ರ ಮುಟ್ಟಿದ್ದೆಲ್ಲವೂ ಚಿನ್ನ!
ಆಫೀಸರ್ಸ್ ಟ್ರೈನಿಂಗ್ ಜತೆಯಲ್ಲಿ ಸಂಜೆ ಕಾಲೇಜಿನಲ್ಲಿ ಎಸ್ಡಿಎಂ ವಿದ್ಯಾಸಂಸ್ಥೆಯಲ್ಲಿ ಕಾನೂನು ವ್ಯಾಸಂಗ. ಈ ನಡುವೆಯೇ ಕುಳಾಯಿ ಯುವಕ ಸಂಘದ ಅಧ್ಯಕ್ಷ. 1975ರಲ್ಲಿ ಕಾರ್ಪೋರೇಷನ್ ಬ್ಯಾಂಕ್ನಲ್ಲಿ ಆಫೀಸರ್ಸ್ ಟ್ರೈನಿ ಆಗಿ ಸೇರ್ಪಡೆ, ಬಳಿಕ 1980ರಲ್ಲಿ ಕಾರ್ಪೋರೇಶನ್ ಬ್ಯಾಂಕ್ ಬೈಕಂಪಾಡಿ ಶಾಖೆ ಪ್ರಬಂಧಕರಾಗಿ ನೇಮಕ. ಅಲ್ಲಿಂದ ಬಳಿಕ ನರೇಂದ್ರ ನಡೆದದ್ದೇ ದಾರಿ.
ದೇಶದೆಲ್ಲೆಡೆ ದುಡಿತ. ಒಳಗೊಳಗೆ ಕನ್ನಡದ ತುಡಿತ. 1981ರಲ್ಲಿ ಗೋವಾ, ಬಳಿಕ ಅಹಮದಾಬಾದ್ ಅಲ್ಲಿಂದ ದೆಹಲಿಗೆ ವರ್ಗಾವಣೆ. ಬಳಿಕ ಮುಂಬೈಗೆ ಡಿಜಿಎಂ ಆಗಿ ಬಡ್ತಿ. ಮತ್ತೆ ದೆಹಲಿ, ಮತ್ತೆ ಸಿಜಿಎಂ ಆಗಿ ಬಡ್ತಿ... ಹೀಗೆ ಒಂದೊಂದೇ ಮೆಟ್ಟಿಲು ಹತ್ತಿ ಬ್ಯಾಂಕಿಂಗ್ ಕ್ಷೇತ್ರದ ಎಲ್ಲ ಮಜಲುಗಳನ್ನು ಕಂಡರು. 2008ರಲ್ಲಿ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಸೇರ್ಪಡೆ. ಮತ್ತೆ 2010ರಿಂದ ಇಂಡಿಯನ್ ಓವರಸೀಸ್ ಬ್ಯಾಂಕ್ ಅಧ್ಯಕ್ಷರಾಗಿ ನೇಮಕ.
ಉದ್ಯೋಗ ನಿಮಿತ್ತ ದೇಶದ ವಿವಿಧೆಡೆ ಕಾರ್ಯಾಚರಿಸುತ್ತಿದ್ದರೂ ಮನಸ್ಸು ಕನ್ನಡಕ್ಕಾಗಿ ತುಡಿಯುತ್ತಿತ್ತು. ಗೋವಾದಲ್ಲಿರುವಾಗ ಮಡಗಾಂವ್ ಕನ್ನಡಿಗರ ಸಂಘ, ಅಹ್ಮದಾಬಾದ್ನಲ್ಲಿ ಕನ್ನಡ ಸಂಘ ಸ್ಥಾಪಿಸಿ ಅಲ್ಲಿ ಕರಾವಳಿಯ ಯಕ್ಷಗಾನ ಹಾಗೂ ಹರಿಕಥಾ ಕಲಾವಿದರನ್ನು ಕರೆಸಿ ಅಲ್ಲಿ ಕಾರ್ಯಕ್ರಮ ಮಾಡಿಸುತ್ತಿದ್ದರು. ದೆಹಲಿಯಲ್ಲಿದ್ದಾಗ ಕನ್ನಡ ರಾಜೇಂದ್ರ ಬಳಗ ಸ್ಥಾಪಿಸಿದ್ದರು.
ಜಸ್ಟ್ ಮಾತ್ ಮಾತಲ್ಲಿ...
ನೀವು ಕನಸು ಕಂಡಿದ್ರಾ, ರಾಷ್ಟ್ರೀಕೃತ ಬ್ಯಾಂಕೊಂದರ ಸಿಎಂಡಿ ಆಗುತ್ತೀರೆಂದು?
ಬ್ಯಾಂಕ್ ವಿಷಯದಲ್ಲಿ ಆರಂಭದಲ್ಲಿ ಆಸಕ್ತಿಯಿತ್ತು. ಆದರೆ ಸಿಎಂಡಿ ಆಗುತ್ತೀನೆಂದು ಗೊತ್ತಿರಲಿಲ್ಲ. ನಾನು ಚಾರ್ಟೆರ್ಡ್ ಅಕೌಂಟೆಂಟ್ ಆಗಲು ಹೊರಟಿದ್ದೆ. ಬಿಕಾಂನಲ್ಲಿ ಮೂರನೇ ರ್ಯಾಂಕ್ ಗಳಿಸಿದ್ದರಿಂದ, ಆಗ ಕಾರ್ಪೋರೇಷನ್ ಬ್ಯಾಂಕ್ನಲ್ಲಿ ರ್ಯಾಂಕ್ ಹೋಲ್ಡರ್ಗಳನ್ನು ನೇರವಾಗಿ ನೇಮಿಸಿಕೊಳ್ಳುತ್ತಿದ್ದರು. ನನ್ನದೂ ಆಯ್ಕೆ ಆಯ್ತು.
ಸಾಧನೆ ತೃಪ್ತಿ ತಂದಿದೆಯಾ?
ಖಂಡಿತ. ಮಾಧ್ಯಮಿಕ ಶಿಕ್ಷಣವನ್ನು ಕನ್ನಡದಲ್ಲೇ ಪೂರೈಸಿ ಈಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪಳಗಿದ್ದೇನೆ. ಮ್ಯಾನೇಜರ್ನಿಂದ ಸಿಎಂಡಿವರೆಗೆ ಉತ್ತವಾಗಿ ಕೆಲಸ ನಿರ್ವಹಿಸಿದ ತೃಪ್ತಿಯಿದೆ. ನಾನು ಐಓಬಿಯಲ್ಲಿ ಅಧಿಕಾರ ಸ್ವೀಕರಿಸಿದಾಗ ಬ್ಯಾಂಕ್ 1800 ಶಾಖೆ ಹೊಂದಿತ್ತು, ಈಗ ಅದು 2720ಕ್ಕೇರಿದೆ. ವಹಿವಾಟು ರು. 2ಲಕ್ಷ ಕೋಟಿಯಿಂದ ರು. 3,54000 ಕೋಟಿಗೆ ಏರಿದ್ದು ಬ್ಯಾಂಕಿಂಗ್ ಕ್ಷೇತ್ರದ ದಾಖಲೆ.
ಹೇಗಿತ್ತು ನಿಮ್ಮ ಬಾಲ್ಯ?
ಬಾಲ್ಯ ಎಲ್ಲರಂತೆಯೇ ಇತ್ತು. ತುಂಬಾ ಕಷ್ಟದಲ್ಲೇ ಬೆಳೆದಿದ್ದೇನೆ. ನನಗೊಬ್ಬನಿಗಾಗಿ ಆಗ ಎಲ್ಲರೂ ಕಷ್ಟದಲ್ಲೇ ಬೆಳೆದರು. ತಂದೆ ಶಿಕ್ಷಕರಾಗಿದ್ದರೂ, ಆಗಿನ ಕಡಿಮೆ ಸಂಬಳದಲ್ಲಿ ಜೀವನ ಸರಿದೂಗಿಸಲು ಅಮ್ಮನ ಜೊತೆ ನಾವೂ ಕೈಜೋಡಿಸಿದ್ದೆವು. ಅಮ್ಮ ಕಟ್ಟಿ ಕೊಡುತ್ತಿದ್ದ ಹೂವಿನ ಮಾಲೆಯನ್ನು ರಸ್ತೆ ಬದಿಯಲ್ಲಿ ನಿಂತು ಮಾರಿದ್ದೇನೆ. ತರಕಾರಿ, ಹಣ್ಣು ಹಂಪಲು ಬೆಳೆಯಲು, ಮಾರಲು ಅಮ್ಮನಿಗೆ ನೆರವಾಗಿದ್ದೇನೆ. ಅದೂಇದು ಕೆಲಸ ಮಾಡಿಕೊಂಡೇ ಓದುತ್ತಿದ್ದೆ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಮಾರ್ಕ್ಸ್ ಬಂತು. ಬಿ.ಕಾಂ ಮತ್ತು ಕಾನೂನು ಡಿಗ್ರಿಯಲ್ಲಿ ಮೂರನೇ ರ್ಯಾಂಕ್ ಬಂತು. ಈ ನಡುವೆಯೇ ಯುವಕ ಸಂಘದಲ್ಲಿ ಸಕ್ರಿಯನಾಗಿರುತ್ತಿದ್ದೆ. ನಮ್ಮ ಅಮ್ಮ ಕುಳಾಯಿ ಮಹಿಳಾ ಮಂಡಳಿಯ ಸ್ಥಾಪಕಾಧ್ಯಕ್ಷೆ. ಸಮಾಜ ಸೇವೆ, ಪಾಪದ ಜನರ ಬಗ್ಗೆ ತುಡಿತ, ಶಿಸ್ತು ನನಗೆ ಅಪ್ಪ, ಅಮ್ಮನಿಂದ ಬಂದ ಬಳುವಳಿ. ಅದರಿಂದಾಗಿಯೇ ನಾನು ಇಷ್ಟೆಲ್ಲ ಸಾಧಿಸಲು ಸಾಧ್ಯವಾಯಿತು.
ಕುಟುಂಬದೊಂದಿಗೆ ಹೇಗೆ ಕಾಲ ಕಳೆಯುತ್ತೀರಿ?
ಉಡುಪಿ ಅಂಬಲಪಾಡಿಯ ನಾಗರತ್ನಾಳೊಂದಿಗೆ 1983 ರಲ್ಲಿ ವಿವಾಹವಾಯ್ತು. ಇಬ್ಬರು ಗಂಡು ಮಕ್ಕಳಿದ್ದು, ಈಗ ಅವರು ಉದ್ಯೋಗದಲ್ಲಿದ್ದಾರೆ. ಹೆಚ್ಚಿನ ಸಮಯ ಬ್ಯಾಂಕ್ನಲ್ಲೇ ಕಳೆಯುವುದರಿಂದ ಬಿಡುವಿರುವಾಗ ಕುಟುಂಬದೊಂದಿಗೆ ಕಳೆಯುತ್ತೇನೆ.
ಹವ್ಯಾಸಗಳು?
ಬಿಡುವಿನ ಸಮಯವನ್ನು ಮ್ಯಾನೇಜ್ಮೆಂಟ್ ಪುಸ್ತಕಗಳನ್ನು ಓದುವುದು, ಲಯನ್ಸ್ ಕ್ಲಬ್, ಜೇಸಿ ಕ್ಲಬ್ಗಳಲ್ಲಿ ಸಕ್ರಿಯನಾಗಿದ್ದೇನೆ. ಕನ್ನಡ ಸಂಘ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ.
-ರಾಘವೇಂದ್ರ ಅಗ್ನಿಹೋತ್ರಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.