ಬದುಕೆಂಬ ಸುತ್ತಾಟ
ಸರಳರೇಖೆ ಯಾವತ್ತೂ ಅಂದವಾಗಿ ಕಾಣಿಸುವುದಿಲ್ಲ. ಸರ್ರನೆ ಎಳೆದು ಮುಗಿಸಿದ ಗೀಟು ಅದು. ಅದೇ ರೇಖೆ ತುಸು ವಕ್ರವಾಗಿದ್ದರೆ, ಅಲ್ಲೊಂದು ಸೌಂದರ್ಯ ನಿರ್ಮಾಣವಾಗುತ್ತದೆ. ಕಲಾವಿದನ ನಿರ್ದೇಶನದಲ್ಲಿ ಒಡಮೂಡಿದರಂತೂ, ಅಮೋಘ ಚಿತ್ರವಾಗಿಯೇ ಪಿಸುಗುಟ್ಟುತ್ತದೆ. ರಂಗೋಲಿಯನ್ನು ಬೇಕಾದರೂ ಕಲ್ಪಿಸಿಕೊಂಡು ಬಿಡಿ.
ಆದರೆ, ಈ ರೇಖಾಸಿದ್ಧಾಂತ ಬದುಕಿಗೆ ಅನ್ವಯಿಸುತ್ತದೆ ಅಂತ ಹೇಳಲಿಕ್ಕಾಗದು. ನೇರವಾಗಿ ಬದುಕಿದರೆ, ನೀವು ನಿಷ್ಠುರ. ವಕ್ರವಾಗಿ ಬದುಕಿದರೆ 'ಇವ್ನು ಸರಿಯಿಲ್ಲಪ್ಪ' ಎಂಬ ದೂರು. ರೇಖೆಗಳಂತೆ ಮನುಷ್ಯನ ಆಲೋಚನೆಗಳು ಯಾವತ್ತೂ ಸ್ಪಷ್ಟ ಹಾದಿ ಹಿಡಿದು ಚಲಿಸುವುದಿಲ್ಲ. ಸಮಯ ಸಂದರ್ಭ ನಿಮ್ಮ ಹೆಜ್ಜೆಯನ್ನು ತಪ್ಪಿಸುತ್ತವೆ. ಇನ್ನೊಂದು ಹಾದಿಯಲ್ಲಿ ಮುಳ್ಳಿದೆ, ಅಪಾಯವಿದೆ ಎಂದು ಗೊತ್ತಾದರೆ ನಮ್ಮ ಚಲನೆಯ ದಿಕ್ಕೇ ತಪ್ಪುತ್ತದೆ. ಆಗ ನಾವೊಂದಿಷ್ಟು ಸುತ್ತಾಡಲೇಬೇಕು. ಸ್ಪಷ್ಟತೆ ಇಲ್ಲದಿದ್ದರೆ, ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಅಂತಾರಲ್ಲ ಹಾಗೂ ಸಾಗಬೇಕಾದೀತು. ಆಗ ನಮಗೆ ದಕ್ಕುವುದು ಅನುಭವ. ಇಂಥ ಅನುಭವಗಳಿಂದಲೇ ಬದುಕು ಗಟ್ಟಿಯಾಗುವುದು. ನಮ್ಮಲ್ಲೊಂದು ಆತ್ಮವಿಶ್ವಾಸ ಮನೆಮಾಡುವುದು.
ಈ ತತ್ತ್ವದ ಪ್ರಕಾರ ಬದುಕೊಂದು ವಕ್ರರೇಖೆಯೇ. ಅನುಭವ ಆಗದ ಮನುಷ್ಯರು ಈ ಏಳು ಖಂಡಗಳಲ್ಲಿಲ್ಲ. ಎಲ್ಲ ಸುಖಗಳಿದ್ದೂ ರಾತ್ರೋರಾತ್ರಿ ಬದುಕಿನ ದೋಣಿ ಬದಲಿಸಿದ ಬುದ್ಧ ಮನೆಯಲ್ಲೇ ಇದ್ದಿದ್ದರೆ ಜ್ಞಾನೋದಯ ಪಡೆಯುತ್ತಿದ್ದನೇ? ಆ ಜ್ಞಾನೋದಯ ಕೂಡ ಅನುಭವದ ಪ್ರೇರಣೆಯಿಂದಾಗಿದ್ದಲ್ಲವೇ?
ನೀವೇನೋ ಆಗಲು ಕನಸು ಕಂಡಿರುತ್ತೀರಿ. ಕೂಡಲೇ ಆ ಕನಸು ಕೈಗೆಟಕುವುದಿಲ್ಲ. ಸತಾಯಿಸುತ್ತದೆ. ಅಷ್ಟಕ್ಕೇ ಬೇಸರಪಡುವುದೇ? ಆ ಕ್ಷಣವನ್ನು ಪೂರ್ತಿಯಾಗಿ ಅನುಭವಿಸಿ. ಅದು ಕಲಿಸುವ ಪಾಠಗಳನ್ನು ತನ್ಮಯರಾಗಿ ಧ್ಯಾನಿಸಿ. ಆಗ ನಿಮ್ಮ ಹೆಜ್ಜೆಯ ತಪ್ಪುಗಳು ಅರಿವಾಗುತ್ತವೆ. ಅಷ್ಟಕ್ಕೇ ಚಿಂತಿಸದೆ, ಪ್ರಯತ್ನ ಸುರಿದು ಮತ್ತೆ ಮುಂದಡಿ ಇಟ್ಟರೆ ನೀವು ಮರುದಿನ ಬೆಳಗ್ಗೆಯೇ ಗುರಿಯ ಬಾಗಿಲಲ್ಲಿ ನಿಂತಿರುತ್ತೀರಿ.
ಈ ಬದುಕೇ ಒಂದು ಪ್ರವಾಹ. ಕೊಚ್ಚಿ ಹೋಗುವಾಗ ಮುಂದೆ ಬಂಡೆ ಸಿಕ್ಕರೆ, ಭಾವಗಳು ಅಪ್ಪಳಿಸಿ ನಾಲ್ಕು ಪಾಲಾಗಬಹುದು. ಅದನ್ನೇ ನೀವು ದ್ವಂದ್ವ ಅಂತಾದರೂ ಕರೆಯಬಹುದು. ಮತ್ತೆ ಆ ಭಾವಗಳನ್ನು ಒಮ್ಮತಕ್ಕೆ ತಂದು, ಮುಂದೆ ಸಾಗುವುದು ಅನಿವಾರ್ಯ ಮತ್ತು ಕರ್ತವ್ಯ.
ಸಂಯಮವೆಂಬುದು ನಮ್ಮ ತಿಜೋರಿಯಲ್ಲಿದ್ದರೆ, ಬದುಕಿನ ಪಯಣ ತೀರಾ ಸುಲಭ. ನಿಂತು ನಿಂತು ಹೊರಡುವುದರಲ್ಲೂ ಸುಖವಿದೆ. ನಮಗಂತ ಒಂದು ಹಾದಿ ನಿಶ್ಚಯವಾಗಿಯೇ ಇರುತ್ತದೆ. ಯಾವುದೇ ಪರಿಚಯದ ಪ್ರದೇಶಗಳೂ ಅಲ್ಲಿ ಸಿಗುವುದಿಲ್ಲ. ಸುತ್ತಿಕೊಂಡು ಹೋಗಿ, ಮತ್ತೆ ಅದೇ ಸ್ಥಳಕ್ಕೆ ಬಂದರೂ ಗುರಿಯ ಜಪ ನಿಲ್ಲಿಸಬಾರದು. ಏಕೆಂದರೆ, ನಾವು ಕನಸಿನ ಬೆನ್ನೇರಿದವರು!
- ಸಹನೆ