ಉತ್ಥಾನ ಶತಕ
ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಸೆಂಚುರಿ ಬಾರಿಸಿದೆ. ನಾಡಿನಾದ್ಯಂತ...
ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಸೆಂಚುರಿ ಬಾರಿಸಿದೆ. ನಾಡಿನಾದ್ಯಂತ ದೇವಾಲಯಗಳ ಜೀರ್ಣೋದ್ಧಾರ ಕೈಗೆತ್ತಿಕೊಂಡಿರುವ ಟ್ರಸ್ಟ್ ನೂರನೇ ದೇವಾಲಯವನ್ನು ಸಂಪೂರ್ಣಗೊಳಿಸಿದೆ. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಹೆಗ್ಗಡೆ ಅಧ್ಯಕ್ಷತೆಗೂ ನೂರು ದಾಟಿದೆ.
ಧರ್ಮೋತ್ಥಾನ ಟ್ರಸ್ಟ್ನ 100ನೇ ದೇವಸ್ಥಾನ ಶಿವಮೊಗ್ಗ ಸಾಗರ ನಂದೀತಳೆ ಹೊಸಗುಂದ ಶ್ರೀಉಮಾಮಹೇಶ್ವರ ದೇವಾಲಯ. ಇದು ಪೂರ್ತಿ ಶಿಲಾಮಯ ದೇವಸ್ಥಾನವಾಗಿ ಮೈತಳೆಯಲಿರುವುದು ಇನ್ನೊಂದು ವಿಶೇಷ. ಇಲ್ಲಿರುವುದು 11ನೇ ಶತಮಾನಕ್ಕೆ ಸೇರಿರಬಹುದಾದ ದೇವಾಲಯ. ಸರಳ ವಿನ್ಯಾಸದ ಈ ದೇವಾಲಯ ಪಾಳುಬಿದ್ದಿತ್ತು. ಶ್ರೀ ಉಮಾಮಹೇಶ್ವರ ದೇವರಲ್ಲದೆ, ಗಣೇಶ, ಸುಬ್ರಹ್ಮಣ್ಯ ಮತ್ತು ಮಹಿಷಾಸುರ ಮರ್ದಿನಿ ಸಾನ್ನಿಧ್ಯವಿದೆ. ಸಮೀಪದಲ್ಲೇ ಪ್ರಸನ್ನ ನಾರಾಯಣ ದೇವಾಲಯ, ಕಂಚಿ ಕಾಳಮ್ಮ ದೇವಾಲಯ, ಲಕ್ಷ್ಮೀ ಗಣಪತಿ ದೇವಾಲಯ ನಿರ್ಮಾಣವಾಗಬೇಕಾಗಿದೆ. ದೇವಾಲಯ ಪರಿಸರಕ್ಕೆ ಪೂರಕವಾಗಿ ವಿಶಾಲ ಪುಷ್ಕರಣಿ, ಕಲ್ಲಿನ ಧ್ವಜಸ್ತಂಭ, ಗೋಶಾಲೆ ನಿರ್ಮಾಣವಾಗಿದ್ದು, ದೇವರ ಕಾಡು ಸಂರಕ್ಷಣೆಗೊಂಡಿದೆ.
2007ರಲ್ಲಿ 100ನೇ ದೇವಸ್ಥಾನವಾಗಿ ಇದನ್ನು ಧರ್ಮೋತ್ಥಾನ ಟ್ರಸ್ಟ್ ಸ್ವೀಕರಿಸಿತು. ರು. 21.57 ಲಕ್ಷ ವೆಚ್ಚವಾಗಿದೆ ಎನ್ನುತ್ತಾರೆ ಟ್ರಸ್ಟ್ ಕಾರ್ಯದರ್ಶಿ ಎ.ವಿ.ಶೆಟ್ಟಿ. ಇಲ್ಲಿ ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ, ಮುಂದಿನ ವರ್ಷ ಮಾರ್ಚ್ಗೆ ಬ್ರಹ್ಮಕಲಶಾಭಿಷೇಕ ಏರ್ಪಡಿಸುವ ಉದ್ದೇಶ ಇದೆ ಎನ್ನುತ್ತಾರೆ ಉಮಾಮಹೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಎನ್.ಶಾಸ್ತ್ರಿ.
171 ದಾಟಿದೆ
ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರವನ್ನು 1991ರಿಂದ ಧರ್ಮೋತ್ಥಾನ ಟ್ರಸ್ಟ್ನಿಂದ ಕೈಗೊಳ್ಳಲಾಗುತ್ತಿದೆ. ಪೂಜೆ ನಡೆಯುವ ದೇವಸ್ಥಾನಕ್ಕೆ ಮೊದಲ ಆದ್ಯತೆ. ಹೊಸಗುಂದ 100ನೇ ದೇವಾಲಯವಾದರೂ ಈಗ ಈ ಸಂಖ್ಯೆ 171 ದಾಟಿದೆ. ಇವುಗಳಲ್ಲಿ 154 ದೇವಸ್ಥಾನಗಳ ಕೆಲಸ ಪೂರ್ಣಗೊಂಡಿದೆ. 16 ದೇವಸ್ಥಾನಗಳಲ್ಲಿ ಪೂಜಾವಿಧಿ ಪ್ರಾರಂಭವಾಗಬೇಕು. 112 ದೇವಸ್ಥಾನಗಳ ಕೆಲಸಕ್ಕೆ ಪ್ರಾಚ್ಯವಸ್ತು ಇಲಾಖೆ ಸಹಭಾಗಿತ್ವ ಸಿಕ್ಕಿದೆ. ಈವರೆಗೆ ಟ್ರಸ್ಟ್ ರು. 1494 ಲಕ್ಷ ವೆಚ್ಚ ಮಾಡಿದ್ದು, ರು. 561 ಲಕ್ಷ ಟ್ರಸ್ಟ್ನಿಂದ, ರು. 449 ಲಕ್ಷ ಸರ್ಕಾರಿ ಅನುದಾನದಿಂದ, ರು. 484 ಲಕ್ಷ ದೇವಸ್ಥಾನ ಸಮಿತಿಯಿಂದ ಭರಿಸಲಾಗಿದೆ. 25 ಜಿಲ್ಲೆಗಳಲ್ಲಿ ಧರ್ಮೋತ್ಥಾನ ಟ್ರಸ್ಟ್ ಕೆಲಸ ನಡೆಯುತ್ತಿದೆ.
- ಡಾ.ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ
ವಿಶ್ವೇಶ್ವರ ಭಟ್ ಸಹಿತ 9 ಮಂದಿ
ಕನ್ನಡಪ್ರಭ ಮತ್ತು ಸುವರ್ಣ ಸುದ್ದಿವಾಹಿನಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಶತಾವಧಾನಿ ಆರ್.ಗಣೇಶ್, ಡಾ.ಜಯಶ್ರೀ, ಡಾ.ಅಶ್ವತ್ಥ್ಥನಾರಾಯಣ, ಹಂಪ ನಾಗರಾಜಯ್ಯ ಸೇರಿ 9 ಮಂದಿಯ ಧರ್ಮೋತ್ಥಾನ ಟ್ರಸ್ಟ್ನ ಸಲಹಾ ಸಮಿತಿ ಪುನಾರಚಿಸಲಾಗಿದೆ. ಡಾ.ಹೆಗ್ಗಡೆ ಈ ಸಲಹಾ ಸಮಿತಿಗೆ ಅಧ್ಯಕ್ಷರು. ಆರು ತಿಂಗಳಿಗೊಮ್ಮೆ ಸಭೆ ಸೇರಿ ಪ್ರಾಚೀನತೆ ಉಳಿಸಿಕೊಂಡು ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ಬಾರದಂತೆ ಜೀರ್ಣೋದ್ಧಾರ ಕೈಗೊಳ್ಳಬೇಕಾದ ಬಗೆಯನ್ನು ಈ ಸಮಿತಿ ನಿರ್ಧರಿಸುತ್ತದೆ.
- ಆತ್ಮಭೂಷಣ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.