ಜಿಪುಣನಿಗೆ ಬುದ್ಧಿ
ಒಂದೂರಿನಲ್ಲಿ ಬಾಬಯ್ಯನೆಂಬ ಜಿಪುಣಾಗ್ರೇಸರನಿದ್ದ. ಅವನಿಗೆ ಬೇಕಾದಷ್ಟು ಆಸ್ತಿಪಾಸ್ತಿಗಳಿದ್ದರೂ ಬಹುದೊಡ್ಡ ಜಿಪುಣನೆಂದು ಹೆಸರು ಪಡೆದಿದ್ದನು. ಒಂದು ಸಾರಿ ಚಿಕ್ಕಾಸು ಕೂಡಾ ಖರ್ಚಾಗದಂತೆ ತೀರ್ಥಯಾತ್ರೆ ಮಾಡಿ ಬರಬೇಕೆಂಬ ಅಪೇಕ್ಷೆ ಅವನಿಗಾಯಿತು. ಅದಕ್ಕೆ ಒಂದು ದಾರಿಯನ್ನು ಹುಡುಕಿದ ಬಾಬಯ್ಯ. ಆತ ಕುಂಟ ಹಾಗೂ ಕುರುಡ ಹಾಗೂ ಮೂಕನಂತೆ ನಟಿಸುತ್ತ, ಅಂತಹ ಬರಹವಿರುವ ಫಲಕವೊಂದನ್ನು ಕೊರಳಲ್ಲಿ ನೇತುಹಾಕಿಕೊಂಡು ಹೊರಟನು.
ಒಂದು ದಿನ ಬಾಬಯ್ಯ ಒಂದು ತೀರ್ಥಕ್ಷೇತ್ರದಲ್ಲಿ ಭಿಕ್ಷೆ ಬೇಡಿಕೊಂಡಿದ್ದಾಗ ಅವನ ಊರಿನವನೇ ಆದ ಗೋಪಣ್ಣ ಹಾಗೂ ಕಿಟ್ಟಣ್ಣ ಅವನನ್ನು ನೋಡಿದರು. ಅವನ ಕೊರಳಿನಲ್ಲಿ ನೇತಾಡುತ್ತಿದ್ದ ಫಲಕವನ್ನು ಓದಿ ಅವಾಕ್ಕಾದರು!
ಗೋಪಣ್ಣ, ಕಿಟ್ಟಣ್ಣನೊಂದಿಗೆ 'ಅಯ್ಯೋ ಪಾಪ! ಈ ಬಾಬಯ್ಯನಿಗೆ ನಮ್ಮ ಊರು ಪೂರಾ ನೆರೆಯಲ್ಲಿ ಮುಳುಗಿತೆಂದು ಹೇಳಿದರೂ ಕೇಳಿಸುವಂತಿಲ್ಲ. ಇನ್ನು ಬರೆದು ತೋರಿಸೋಣವೆಂದರೆ ಕಣ್ಣು ಕೂಡಾ ಕಾಣಿಸುತ್ತಿಲ್ಲ' ಎಂದನು.
ಈ ಮಾತುಗಳನ್ನು ಕೇಳಿಸಿಕೊಂಡ ಬಾಬಯ್ಯ ಹೌಹಾರಿಹೋದ. ತಾನು ಕುರುಡ, ಮೂಕನೆಂಬುದನ್ನು ಮರೆತು, ಗಾಬರಿಯಿಂದ 'ಏನು ಏನು? ನಮ್ಮ ಊರು ನೆರೆಯಲ್ಲಿ ಮುಳುಗಿತೇ? ನನ್ನ ದೊಡ್ಡ ಮನೆ, ಒಳಗಿದ್ದ ಧಾನ್ಯದ ಚೀಲವೆಲ್ಲಾ ನೀರಿನಲ್ಲಿ ಮುಳುಗಿಹೋಯಿತೇ? ಅಯ್ಯಯ್ಯೋ!' ಎಂದು ಗೋಳಾಡತೊಡಗಿದ.
ಅಷ್ಟರವರೆಗೂ ಬಾಬಯ್ಯನನ್ನು ಕುರುಡ, ಮೂಕ, ಕುಂಟನೆಂದುಕೊಂಡಿದ್ದ ಜನ ಬಾಬಯ್ಯನನ್ನು ಹಣ್ಣುಗಾಯಿ, ನೀರುಗಾಯಿ ಮಾಡಿಬಿಟ್ಟರು.
ಗೋಪಣ್ಣ ಹಾಗೂ ಕಿಟ್ಟಣ್ಣ ದೂರದಲ್ಲಿ ಇದನ್ನೆಲ್ಲ ನೋಡುತ್ತಿ ನಿಂತಿದ್ದನ್ನು ಕಂಡ ಬಾಬಯ್ಯ 'ತನಗೆ ಬುದ್ಧಿ ಕಲಿಸಲಿಕ್ಕಾಗಿಯೇ ಹೀಗೆ ಮಾಡಿದ್ದಾರೆ' ಎಂದು ಅರಿತುಕೊಂಡ.
-ಎಚ್. ಶಿವರಾಮ ಭಟ್, ಹತ್ತೊಕ್ಕಲು