ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿ
ಮನೆಯಲ್ಲಿ ತಂದೆ ಅಥವಾ ಹಿರಿಯರು ಮನೆಯ ಸಂಪೂರ್ಣ ಜವಾಬ್ದಾರಿ ವಹಿಸುವಂತೆ ಪೊಲೀಸ್ ಇನ್ಸ್‌ಪೆಕ್ಟರ್ ಠಾಣೆಯ ಜವಾಬ್ದಾರಿ ವಹಿಸುತ್ತಾರೆ. ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿ ವಹಿಸುತ್ತಾರೆ.
ಪೊಲೀಸ್ ಇನ್ಸ್‌ಪೆಕ್ಟರ್ ಠಾಣೆಯಲ್ಲಿಲ್ಲದ ವೇಳೆ ಎಎಸ್‌ಐ ಠಾಣಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಾರೆ.
ಚುರುಕು ಬುದ್ಧಿ ಇರುವವರನ್ನು ಅಪರಾಧಿ/ಆರೋಪಿ ಪತ್ತೆಗೆ ನಿಯೋಜಿಸುತ್ತಾರೆ. ಈಗ ರಾಜ್ಯದ ಎಲ್ಲಾ ಠಾಣೆಗಳಲ್ಲೂ ಪೊಲೀಸ್ ಐಟಿ ಜಾರಿಯಾಗಿರುವ ಕಾರಣ ಕಂಪ್ಯೂಟರ್ ಬಗ್ಗೆ ಜ್ಞಾನ ಇರುವವರನ್ನು ಕಂಪ್ಯೂಟರ್ ಕೆಲಸಕ್ಕೆ ನೇಮಿಸುತ್ತಾರೆ. ಅಂದರೆ, ದೂರುಗಳು, ವಿಲೇವಾರಿಯಾದ ಪ್ರಕರಣಗಳು, ವಾರೆಂಟ್, ಸಮನ್ಸ್ ನೀಡುವುದು ಸೇರಿದಂತೆ ಕಂಪ್ಯೂಟರ್‌ನಲ್ಲಿ ಮಾಡಬಹುದಾದ ಕೆಲಸವನ್ನು ಅವರು ಗಮನಿಸುತ್ತಾರೆ.
ಆರೋಪಿಗಳನ್ನು ಜೈಲಿಗೆ ಕರೆದುಕೊಂಡು ಹೋಗುವುದು, ಪ್ರಕರಣದ ವಾದ- ವಿವಾದ ನಡೆಯುವಾದ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವುದು, ಆರೋಪಿ ನ್ಯಾಯಾಲಯಕ್ಕೆ ಹಾಜರಾಗದಿದ್ದಲ್ಲಿ ಅವರಿಗೆ ವಾರೆಂಟ್, ಸಮನ್ಸ್ ನೀಡುವುದು, ತಲೆಮರೆಸಿಕೊಂಡಿದ್ದಲ್ಲಿ ಅವರನ್ನು ಹಿಡಿದು ಕರೆತರುವ ಕೆಲಸಗಳನ್ನು ಇನ್ಸ್‌ಪೆಕ್ಟರ್ ಆದೇಶಿಸಿದವರು ಪಾಲಿಸುತ್ತಾರೆ. ಅದಕ್ಕೆ ಪ್ರತ್ಯೇಕ ಸಿಬ್ಬಂದಿ ಇರುತ್ತಾರೆ.
ಸಿವಿಲ್ ಕೋರ್ಟ್ ಹಾಗೂ ಸಿಟಿ ಕೋರ್ಟ್‌ಗೆ ಪ್ರತ್ಯೇಕ ಪೊಲೀಸ್ ಪೇದೆ ಇರುತ್ತಾರೆ. ತಮ್ಮ ಠಾಣೆ ವ್ಯಾಪ್ತಿಗೆ ಬರುವ ಪ್ರಕರಣ ಕಟಕಟೆಗೆ ಯಾವಾಗ ಬರುತ್ತದೆ, ಯಾರಿಗೆ ವಾರಂಟ್, ಸಮನ್ಸ್ ನೀಡಬೇಕು ಎಂಬುದು ಸೇರಿ ನ್ಯಾಯಾಲಯಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಗಮನಹರಿಸುತ್ತಾರೆ. ಹೈಕೋರ್ಟ್‌ಗೆ ಪ್ರತ್ಯೇಕ ಪೇದೆ ಇರುವುದಿಲ್ಲ. ಅಗತ್ಯಬಿದ್ದಲ್ಲಿ ಅವರಲ್ಲೇ ಯಾರಾದರೂ ಒಬ್ಬರು ನಿರ್ವಹಿಸುತ್ತಾರೆ.
-ಶಾಂತ ತಮ್ಮಯ್ಯ