ಮನುಷ್ಯ ಯಂತ್ರವಲ್ಲ
ಬೆಳಗ್ಗೆ ಏಳಲು ಅಲಾರಂ ಕ್ಲಾಕ್ ಇಟ್ಟುಕೊಂಡಿರುತ್ತೇವೆ. ಅಡುಗೆ ಮಾಡಲು ಕಿಚನ್‌ನಲ್ಲಿ ಅತ್ಯಾಧುನಿಕ ಸಾಧನಗಳಿವೆ. ಅಡುಗೆ ಮಾಡಿದರೆ ಉಂಟು, ಇಲ್ಲವಾದರೆ ಫ್ರಿಜ್ ಇದ್ದೇ ಇದೆ. ಕೈಯೊಡ್ಡಿದರೆ ನಲ್ಲಿಯಿಂದ ತಾನೇ ಬಿಸಿನೀರು ಬರುತ್ತದೆ. ಇವತ್ತಿನ ಕಾರ್ಯಕ್ರಮಗಳು ಏನೇನು ಎಂದು ತಿಳಿಸಲು ಮೊಬೈಲ್ ನೋಟ್ ಇದೆ. ಮನೆಗೆ ಬೀಗ ಹಾಕಲು ಮರೆತರೂ ಸೆಲ್‌ಫೋನ್ ಎಚ್ಚರಿಸುತ್ತದೆ. ಕಚೇರಿ ಒಂದೇ ಕಿಲೋಮೀಟರ್ ದೂರ ಇದ್ದರೂ ಹೋಗಲು ಕಾರೇ ಬೇಕು. ಸಂಜೆ ಪಾರ್ಕಿನಲ್ಲಿ ವಾಕಿಂಗ್ ಮಾಡಿದರೂ ಪರವಾಗಿಲ್ಲ. ಕಾಗದ ತಲುಪಿಸಲು ಅಂಚೆಯವನ ಹಂಗೇ ಇಲ್ಲ. ಸಂವಹನಕ್ಕೆ ಮುಖಾಮುಖಿ ಅಗತ್ಯವಿಲ್ಲ, ಫೇಸ್‌ಬುಕ್ ಇದೆಯಲ್ಲ!
ಇದೇ ನಮ್ಮ ಆಧುನಿಕ ಬದುಕು. ಇಲ್ಲೆಲ್ಲ ಏನಾಗುತ್ತಿದೆ ಗಮನಿಸಿದಿರಾ? ಮನುಷ್ಯ ನಿಧಾನವಾಗಿ, ತನ್ನ ಸಹವಾಸಿಯ ಅವಲಂಬನೆ, ಸಂಪರ್ಕಗಳನ್ನು ತೊರೆದು, ಯಂತ್ರಗಳ ಜತೆ ಹೆಚ್ಚು ಹೆಚ್ಚು ಬೆರೆಯುತ್ತಿದ್ದಾನೆ. ಅವುಗಳೇ ಅವನಿಗೆ ಎಲ್ಲವೂ ಆಗುತ್ತಿವೆ. ನಿಧಾನವಾಗಿ ಆರಂಭವಾಗುವ ಅವಲಂಬನೆ ಕೊನೆ ಕೊನೆಗೆ ಅನಿವಾರ್ಯತೆಯಾಗಿ ಬದಲಾಗುತ್ತದೆ. ಕೊನೆಗೆ ಯಾವುದು ಇಲ್ಲದೆ ನಮ್ಮ ಹಿರಿಯರು ಶತಮಾನಗಳ ಕಾಲ ಜೀವಿಸಿದ್ದರೋ, ಅದಿಲ್ಲದೆ ನ್ಮಮ ಬದುಕೇ ಇಲ್ಲ ಎಂಬಂಥ ಪರಿಸ್ಥಿತಿ ಏರ್ಪಡುತ್ತದೆ. ಅಂಥ ಪರಿಸ್ಥಿತಿಯನ್ನು ನಾವೇ ಸೃಜಿಸಿಕೊಂಡಿರುತ್ತೇವೆ.
ಯಂತ್ರಗಳ ಮೇಲೆ ಅತಿಯಾದ ಅವಲಂಬನೆ ಸಲ್ಲ ಎಂಬುದನ್ನು ನಮ್ಮ ಚಿಂತಕರು ಹೇಳುತ್ತಲೇ ಬಂದಿದ್ದಾರೆ. ಅತಿಯಾದ ಯಂತ್ರಬಳಕೆಯಿಂದಾಗಿ, ಮನುಷ್ಯ ಮನುಷ್ಯನನ್ನು ನಿರಾಕರಿಸಲು ಶುರು ಮಾಡುತ್ತಾನೆ. ಸಂವಹನಗಳು ಏರ್ಪಡುವುದಿಲ್ಲ. ಇದರಿಂದಾಗಿ ಸಮುದಾಯಗಳೇ ಏಕಾಂಗಿಯಾಗಿಬಿಡುತ್ತವೆ. ಮಾತುಕತೆಗಳ ಕೊರತೆಯು ಮನುಷ್ಯರ ನಡುವೆ, ಸಮುದಾಯಗಳ ನಡುವೆ ಬಿರುಕಿಗೆ ಕಾರಣವಾಗುತ್ತದೆ.
ಇದಕ್ಕಿಂತಲೂ ಮುಖ್ಯವಾದ್ದು, ಮನುಷ್ಯನೇ ಪೊಳ್ಳಾಗುವುದು. ಮಾನವನಿಗೆ ಅಪಾರವಾದ ಧಾರಣಾಶಕ್ತಿ ಇದೆ. ಆತ ತನ್ನ ಸುತ್ತಮುತ್ತಲಿನಲ್ಲಿ ಒಂದಾಗಬಲ್ಲ, ಪರಿಸರದಲ್ಲಿ ಒಂದಾಗಿ ಬೆರೆಯಬಲ್ಲ. ನಿಸರ್ಗವನ್ನು ತನ್ನೊಳಗೂ ತೆಗೆದುಕೊಂಡು ಅಪಾರವಾದ ವಾತ್ಸಲ್ಯವುಳ್ಳ ಮಹನೀಯನಾಗಬಲ್ಲ. ಆದರೆ ಯಂತ್ರಗಳು ಹೀಗಾಗದಂತೆ ತಡೆದು, ಮಾವನನನ್ನು ಕ್ಷುಲ್ಲಕ ಜೀವಿಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತವೆ. ಹೀಗಾಗಿಯೇ, ಮಹಾತ್ಮ ಗಾಂಧೀಜಿಯವರೂ ಯಾಂತ್ರೀಕರಣವನ್ನು ವಿರೋಧಿಸುತ್ತಿದ್ದರು. 'ಇದುವರೆಗೆ ಆವಿಷ್ಕಾರವಾದದ್ದರಲ್ಲೆಲ್ಲ ಮಾನವನೇ ಅತ್ಯಂತ ಪ್ರಭಾವಿ ಕಂಪ್ಯೂಟರ್' ಎಂಬ ಜಾನ್ ಎಫ್. ಕೆನಡಿಯ ಮಾತು ಇದನ್ನು ಪರಿಗಣಿಸಿಯೇ ಹೇಳಿದ್ದು.
-ಸಹನೆ