ವಿಭೂತಿ ಮದ್ದು
ಅದು ತುರ್ತುಪರಿಸ್ಥಿತಿಗಲ್ಲ. ಏನಿದ್ರೂ ಅಲೋಪತಿ ಮಾತ್ರ ಓಕೆ... ಅಂತೆಲ್ಲ ಭಾರತೀಯರೇ ಆಯುರ್ವೇದದ ಬಗ್ಗೆ ಮೂಗು...
ಅದು ತುರ್ತುಪರಿಸ್ಥಿತಿಗಲ್ಲ. ಏನಿದ್ರೂ ಅಲೋಪತಿ ಜತೆಗೆ ಮಾತ್ರ ಓಕೆ... ಅಂತೆಲ್ಲ ಭಾರತೀಯರೇ ಆಯುರ್ವೇದದ ಬಗ್ಗೆ ಮೂಗು ಮುರಿಯುತ್ತಾರೆ. ಇನ್ನು ವಿದೇಶಗಳಲ್ಲಿ ಆಯುರ್ವೇದದ ಪರವಾಗಿ ಕೆಲಸ ಮಾಡುವುದೆಂದರೆ ಮಹಾ ಪರಿಶ್ರಮದ ಕೆಲಸವೇ ಸರಿ.
ಅಂಥ ಭಗೀರಥ ಪ್ರಯತ್ನದಲ್ಲಿ ತೊಡಗಿದವರು ಡಾ.ವಿಭೂತಿ ಎಸ್.ರಾವ್. ಆಸ್ಟ್ರೇಲಿಯಾ ಅವರ ಕಾರ್ಯಕ್ಷೇತ್ರ. ಅವರು ತವರಿಂದ ತಂದ ಸಂಪತ್ತೆಂದರೆ ಆಯುರ್ವೇದ.
ಉತ್ತರ ಪ್ರದೇಶದಲ್ಲಿ ಹುಟ್ಟಿ ಬೆಳೆದು ಕರ್ನಾಟಕದ ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದಿಕ್ ಕಾಲೇಜಿನಲ್ಲಿ ವೈದ್ಯಕೀಯ ಮಾಡಿದ ವಿಭೂತಿ, ಮದುವೆಯಾದದ್ದು ಆಯುರ್ವೇದದ ಕುಟುಂಬದಲ್ಲಿ ಹುಟ್ಟಿ ಬೆಳೆದ ವೈದ್ಯರನ್ನು. ಮದುವೆಯಾದೊಡನೆಯೇ ಆಸ್ಟ್ರೇಲಿಯಾಗೆ. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಡಾ. ವಿಭೂತಿ ತಮ್ಮ ಪಯಣದ ಬಗ್ಗೆ ಬೈ ಟು ಕಾಫಿ ಜತೆ ಮಾತನಾಡಿದ್ದು ಹೀಗೆ:
ಬಾಲ್ಯದ ದಿನಗಳು
ಉತ್ತರ ಪ್ರದೇಶದ ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ, 4 ಮಂದಿ ತಮ್ಮ ತಂಗಿಯರೊಂದಿಗೆ ಬೆಳೆದವಳು. ಚಿಕ್ಕಂದಿನಿಂದಲೂ ಮೆರಿಟ್ ಸ್ಟೂಡೆಂಟ್. ಅಪ್ಪ ಅಮ್ಮನಿಗೆ ಇವರು ವೈದ್ಯೆಯಾಗಬೇಕೆಂಬ ಆಸೆ. ಹಾಗಾಗಿ ಸೈನ್ಸ್ ಓದಿ 11 ಮತ್ತು 12ನೇ ತರಗತಿ ಮುಗಿಸಿದರು. ಆ ಊರಿನಲ್ಲಿದ್ದ ಒಂದೇ ಒಂದು ಬಾಯ್ಸ್ ಕಾಲೇಜಿನಲ್ಲಿ ಓದಿ ಎಂಟ್ರೆನ್ಸ್ ಮುಗಿಸಿದಾಗ ವಯಸ್ಸಿನ್ನೂ 16 ಎಂಬ ಕಾರಣಕ್ಕೆ 1 ವರ್ಷ ಕಾಯಬೇಕಾಯ್ತು. ಆ 1 ವರ್ಷದ ಬ್ರೇಕ್ನಲ್ಲಿ ದೆಹಲಿಯಲ್ಲಿ ಮೆಡಿಕಲ್ ಕೋಚಿಂಗ್. ಮುಂದಿನ ವರ್ಷ ಆಯುರ್ವೇದ ಓದಲು ಹಾಸನಕ್ಕೆ.
ಮೊದಲೇ ನಾರ್ಥ್ ಇಂಡಿಯನ್, ಭಾಷೆ ಗೊತ್ತಿಲ್ಲ. ಈರುಳ್ಳಿ, ಬೆಳ್ಳುಳ್ಳಿ ತಿಂದು ಗೊತ್ತಿಲ್ಲ. ಕನ್ನಡ ಕಲಿತು, ಹಾಸ್ಟೆಲ್ ಊಟ ರೂಢಿಸಿಕೊಂಡು, ಎಲ್ಲರೊಡನೆ ಹೊಂದಿಕೊಂಡು ಇಲ್ಲೂ ಮೆರಿಟ್ ಸ್ಟೂಡೆಂಟ್ ಆಗಿ ಎನ್ಎಸ್ಎಸ್ ಇತ್ಯಾದಿ ಚಟುವಟಿಕೆಗಳಲ್ಲಿ ಪಾಲ್ಗೊಂಡು ತನ್ನ ಛಾಪನ್ನೊತ್ತಿದರು.
ಆಯುರ್ವೇದ ಕುಟುಂಬ
ಬೆಂಗಳೂರಿನ ಹೆಸರಾಂತ ಆಯುರ್ವೇದ ವೈದ್ಯ ದಂಪತಿಗಳಾದ ಡಾ. ವಿ.ಆರ್. ಪದ್ಮನಾಭ ರಾವ್ ಮತ್ತು ಡಾ. ಶುಭಂಕರಿ ಪಿ. ರಾವ್ ಅವರ ಮಗ, ಆಯುರ್ವೇದ ವೈದ್ಯನ ಜತೆ ಮದುವೆಯ ಪ್ರಸ್ತಾಪ. ಬನಾರಸ್ ಯೂನಿವರ್ಸಿಟಿಯಲ್ಲಿ ಪಿ.ಜಿ. ಮಾಡುವ ಕನಸು ತ್ಯಜಿಸಿ ಮದುವೆಗೆ ಒಪ್ಪಿಗೆ.
ವಿಭೂತಿಯವರಿಗೆ ಇದ್ದ ಕನಸು, ಆಯುರ್ವೇದದ ಸುಗಂಧವನ್ನು ಆಸ್ಟ್ರೇಲಿಯಾದ ಮನೆ ಮನೆಗೆ ತಲುಪಿಸಬೇಕೆಂಬುದು. ಆಸ್ಟ್ರೇಲಿಯಾ ನ್ಯಾಚುರೋಪತಿ ಅಸೋಷಿಯೇಷನ್ ಮೆಂಬರ್ ಆಗಿ ಪ್ರಾಕ್ಟೀಸ್ ಮಾಡಲು ಲೈಸೆನ್ಸ್, ಇನ್ಷೂರೆನ್ಸ್ ಮಾಡಿಸಿ ಕ್ಯಾನ್ಬೆರಿಯಲ್ಲಿ ಚಿಕ್ಕ ಕ್ಲಿನಿಕ್ ತೆಗೆದರು.
ಆಸ್ಟ್ರೇಲಿಯದ ರೋಗಿಗಳು
ಆಸ್ಟ್ರೇಲಿಯದ ಪೇಶೆಂಟ್ಸ್ ಇಲ್ಲಿಗಿಂತ ವಿಭಿನ್ನ. ಅವರನ್ನು ಪೇಶೆಂಟ್ ಅನ್ನಬಾರದು, ಕ್ಲೈಯಂಟ್ಸ್ ಅನ್ನಬೇಕು. ಇವರ ಬಳಿ ಬರುವ ಬಹುತೇಕ ಕ್ಲೈಯಂಟ್ಸ್ ಹಿರಿಯರು. ಏಜಿಂಗ್ ತಡೆಯಬೇಕು, ಯಂಗ್ ಆಗಿ ಕಾಣಬೇಕು, ಸ್ಟ್ರೆಸ್ ಕಡಿಮೆಯಾಗಬೇಕು, ಆರೋಗ್ಯವಾಗಿರಬೇಕು ಎಂಬೆಲ್ಲ ಬಯಕೆ. ಕಾಡುವ ಮತ್ತೊಂದು ತೊಂದರೆ ಮನೋವೇದನೆ. ಒಂಟಿತನ ಅವರನ್ನು ಖಿನ್ನರಾಗಿಸುತ್ತದೆ. ಹಾಗಾಗಿ ಆಯುರ್ವೇದದ ಹಿನ್ನೆಲೆಯೊಂದಿಗೆ ಓರ್ವ ಯೋಗ ಥೆರಪಿಸ್ಟ್ ಜೊತೆ ಸೇರಿ ವರ್ಕ್ಷಾಪ್ಗಳನ್ನು ನಡೆಸುತ್ತಾ ಆಯುರ್ವೇದದ, ಯೋಗದ ಪ್ರಾಮುಖ್ಯತೆ ತಿಳಿಸಲಾರಂಭಿಸಿದರು.
ಮನೆಮನೆಗೆ ಆಯರ್ವೇದ
ಅಲ್ಲಿನವರಿಗೆ, ಎಲ್ಲವೂ ಮನವರಿಕೆಯಾಗಬೇಕು. ಇಲ್ಲಿನಂತೆ ಮಾತ್ರೆ, ಪೌಡರ್, ಸಿರಪ್ ನೀಡಿದರೆ ಸಮಾಧಾನವಾಗುವುದಿಲ್ಲ. ತಾವೇ ಪೌಡರ್ ಮಾಡಿ, ಅದರ ಟೆಕ್ಚರ್, ವಾಸನೆ ಎಲ್ಲ ಮುಟ್ಟಿ, ಫೀಲ್ ಮಾಡಿ ನೋಡಿ ಒಪ್ಪಿಗೆಯಾದರೆ ತೊಗೋತಾರೆ. ಒಮ್ಮೆ ನಂಬಿಕೆ ಮೂಡಿತೆಂದರೆ ಸ್ಟ್ರಿಕ್ಟ್ ಆಗಿ ಪಾಲಿಸುತ್ತಾರೆ.
ತಮ್ಮ ಎಲ್ಲಾ ಕ್ಲೈಯಂಟ್ಸ್ ಮನೆಗೆ ಹೋಗಿ ಅರಿಶಿನ, ಶುಂಠಿ, ಅಶ್ವಗಂಧ, ಅಮೃತಬಳ್ಳಿ, ತುಳಸಿ ಮುಂತಾದ ಆಯುರ್ವೇದೀಯ ಗಿಡ ಮೂಲಿಕೆಗಳನ್ನು ಪಾಟ್ಗಳಲ್ಲಿ ಬೆಳೆಸಲು ಕಲಿಸಿ, ಅವುಗಳ ಪ್ರಾಮುಖ್ಯತೆ ತಿಳಿಸುವಲ್ಲಿ ಸಫಲರಾದರು. ಸಧ್ಯ ಶಿರೋಧಾರ, ಬಸ್ತಿ ಮುಂತಾದ ಚಿಕಿತ್ಸೆಗಳನ್ನು ನೀಡುತ್ತಿದ್ದು ಕ್ರಮೇಣ ಇನ್ನಿತರ ಚಿಕಿತ್ಸೆ ನೀಡಬೇಕೆಂದಿದ್ದಾರೆ.
ಅಪ್ಪ-ಅಮ್ಮ ಹೆಮ್ಮೆ ಪಡುವಂತೆ ಅವರು ಕಲಿಸಿದ ವಿದ್ಯೆ ಮುಂದುವರಿಸಿದ್ದೇನೆ. ನನ್ನ ನಾಡಿಗೆ ಮರಳಿ ಅತ್ತೆ ಮಾವಂದಿರಿಗೆ ನೆರವಾಗಿ ನಿಲ್ಲುವಾಸೆಯಿದೆ ಅಂತ ಮುಗುಳ್ನಗುತ್ತಾರೆ ಡಾ. ವಿಭೂತಿ.
- ಗೀತಾ ಶ್ರೀನಿವಾಸನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.