ವೃದ್ಧಾಪ್ಯ ತಡೆಯಲು ಚಹಾ ಕುಡಿಯಿರಿ!
ಕೆಲವರನ್ನು ನೋಡಿದ್ದೇನೆ. ಅವರಿಗೆ ನೀವು ಎಷ್ಟೇ ಹೊತ್ತಿಗೆ ಚಹಾ ಕೊಡಿ. ಆಸ್ವಾದಿಸಿಕೊಂಡು ಕುಡಿಯುತ್ತಾರೆ. ಹತ್ತು ನಿಮಿಷದ ಹಿಂದೆ ಚಹಾ ಕುಡಿದಿರಲಿ, ಪುನಃ ಯಾರಾದರೂ ಟೀ ಕುಡಿಯಲು ಕಂಪನಿ ಕೊಡುವಂತೆ ಕರೆದರೆ ಅವರೊಂದಿಗೆ ಹಾಜರ್. ಚಹಾದ ರುಚಿ ಅಂಥಾದ್ದು. ಚಹಾದಿಂದ ಪಿತ್ಥ ಜಾಸ್ತಿಯಾಗುತ್ತದೆ, ಜೀರ್ಣಶಕ್ತಿ ಕಡಿಮೆಯಾಗುತ್ತದೆ ಎಂದು ಹೇಳುವವರೂ ಇದ್ದಾರೆ. ಅವರವರ ದೇಹಸ್ಥಿತಿ ಆಧರಿಸಿ ಅದು ಸ್ವಲ್ಪಮಟ್ಟಿಗೆ ನಿಜ ಕೂಡ. ಶರೀರಕ್ಕೂ ಧಾರಣ ಶಕ್ತಿ ಎನ್ನುವುದು ಇರುತ್ತದೆಯಲ್ಲವೆ? ಅದನ್ನೂ ಮೀರಿ ಯಾವುದನ್ನಾದರೂ ಸೇವಿಸಿದಾಗ ಅನಾರೋಗ್ಯ ಕಾಡುತ್ತದೆ. ಇನ್ನು ಈಗೀಗ ಗ್ರೀನ್ ಟೀ ಕೂಡ ನಮ್ಮಲ್ಲಿ ಜನಪ್ರಿಯವಾಗುತ್ತಿದೆ. ಹಾಲು ಹಾಕದೇ ಬರಿ ಡಿಕಾಕ್ಷನ್ ಅಥವಾ ಅದಕ್ಕೆ ಲಿಂಬು ರಸ ಸೇರಿಸಿ ಕುಡಿದರೆ ಪಿತ್ಥ ಮತ್ತಿತರ ಸಮಸ್ಯೆಗಳ ಭಯವಿಲ್ಲ ಎಂದು ಗೆಳೆಯರು ಹೇಳುವುದನ್ನೂ ಕೇಳಿದ್ದೇನೆ. ಇವತ್ತು ಚಹಾ ಜಾಗತಿಕ ಪಾನೀಯ ಎನ್ನುವುದು ಸುಳ್ಳಲ್ಲ. ಬಹಳ ಹಿಂದೆ ಭಾರತ, ಚೀನಾಗಳಲ್ಲಷ್ಟೇ ಪ್ರಚಲಿತದಲ್ಲಿದ್ದ ಇದು ಈಗ ವಿಶ್ವವ್ಯಾಪಿ. ಜಗತ್ತಿನಲ್ಲಿ ನೀರು ಬಿಟ್ಟರೆ ಅತಿಹೆಚ್ಚು ಜನ ಕುಡಿಯುವ ಪಾನೀಯ ಎನ್ನುವ ಹೆಗ್ಗಳಿಕೆಯೂ ಚಹಾಕ್ಕೆ ಇದೆ.
ನಮ್ಮ ಬದುಕು ಮತ್ತು ಆಹಾರ ಪದ್ಧತಿಗಳ ಅವಿಭಾಜ್ಯ ಅಂಗವೇ ಆಗಿ ಹೋಗಿರುವ ಚಹಾ ನಮ್ಮ ನಡುವಿನ 'ಕೈಗೆಟುಕುವ ಡಾಕ್ಟರ್' ಎಂದರೂ ತಪ್ಪಲ್ಲ. ಅನೇಕ ಆ್ಯಂಟಿ ಆಕ್ಸಿಡೆಂಡ್‌ಗಳನ್ನು ಹೊಂದಿರುವ ಚಹಾ, ಎಚ್‌ಡಿಎಲ್ ಕೊಲೆಸ್ಟರಾಲ್ ಹೆಚ್ಚಿಸಿ, ಎಲ್‌ಡಿಎಲ್ ಕೊಲೆಸ್ಟರಾಲ್ ಅನ್ನು ನಿಯಂತ್ರಿಸುತ್ತದೆ ಎನ್ನುವ ವಿಚಾರವನ್ನು ವಿವರವಾಗಿಯೇ ಚರ್ಚಿಸಿದ್ದೇವೆ. ಇದಲ್ಲದೆ, ಚಹಾ ಜೀವಕೋಶಗಳಿಗೆ ಹಾನಿಯಾಗುವುದನ್ನು ತಪ್ಪಿಸಬಲ್ಲದು. ವಂಶವಾಹಿಗಳಿಗೆ (ಡಿಎನ್‌ಎ) ಧಕ್ಕೆಯಾಗುವುದನ್ನು ತಡೆಯಬಲ್ಲದು. ಕ್ಯಾನ್ಸರ್ ಮತ್ತು ಹೃದ್ರೋಗಗಳಿಗೆ ಕಾರಣವಾಗುವ ಅನೇಕ ಸಂಗತಿಗಳನ್ನು ನಿಯಂತ್ರಿಸಬಲ್ಲದು. ಆಮ್ಲಜನಕ ಮುಕ್ತ ಮೂಲಧಾತುಗಳ ರಚನೆ ವಿರುದ್ಧ ಹೋರಾಡಬಲ್ಲದು. ಈಗಿನ ಜಮಾನಾದ ಮಂತ್ರವಾಗಿರುವ 'ಆ್ಯಂಟಿ ಏಜಿಂಗ್' (ವೃದ್ಧಾಪ್ಯ ತಡೆಗಟ್ಟುವುದು) ಕೂಡ ಚಹಾ ಮಾಡಬಲ್ಲ ಮ್ಯಾಜಿಕ್‌ಗಳಲ್ಲಿ ಒಂದು. ಇನ್ನು ನಾವೀಗ ಚರ್ಚೆ ಮಾಡುತ್ತಿರುವ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವಲ್ಲಿಯೂ ಇದರ ಪಾತ್ರವಿದೆ. ಇವೆಲ್ಲ ವಿಜ್ಞಾನಿಗಳು ಪ್ರಯೋಗಗಳ ಮೂಲಕ ಕಂಡುಕೊಂಡಿರುವ ಸತ್ಯ.
ನಮಗೆ ಗೊತ್ತಿರುವುದು ಹಸಿರು ಚಹಾ. ಅದೇ ಹಳೆಯ ಕಾಲದಿಂದಲೂ ನಮ್ಮಲ್ಲಿ ಚಾಲ್ತಿಯಲ್ಲಿರುವುದು. ಏಷ್ಯದ ಬಹಳಷ್ಟು ರಾಷ್ಟ್ರಗಳವರು ಕುಡಿಯುವುದು ಇದನ್ನೇ. ಗ್ರೀನ್ ಟೀ ಬಂದದ್ದು ಈಚೆಗಷ್ಟೇ. ಅದು ಅಮೆರಿಕನ್ನರ ಬಳುವಳಿ. ಇವೆರಡರ ಜತೆಗೆ ಅಷ್ಟಾಗಿ ಬಳಕೆಯಲ್ಲಿಲ್ಲದ ಊಲಾಂಗ್ ಟೀ ಎನ್ನುವುದೂ ಇದೆ. ನೀವು ಗ್ರೀನ್ ಟೀ ಅಥವಾ ಬ್ಲ್ಯಾಕ್ ಟೀ ಯಾವುದನ್ನೇ ಕುಡಿಯಿರಿ, ರಕ್ತ ಹೆಪ್ಪುಗಟ್ಟುವುದರ ವಿರುದ್ಧ ಅದರ ಪರಿಣಾಮ ಒಂದೇ ಎನ್ನುವುದು ಚೀನಾದ ಅಗ್ರಗಣ್ಯ ಚಹಾ ಸಂಶೋಧಕ ಲೊ ಫು ಕಿಂಗ್ ಅವರ ಸ್ಪಷ್ಟ ಅಭಿಪ್ರಾಯ.
ಚಹಾ ರಕ್ತನಾಳಗಳ ರಕ್ಷಕ ಎನ್ನುವುದು ಪತ್ತೆಯಾದದ್ದು ಹೇಗೆ ಗೊತ್ತಾ?
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com