ಓದು ಬರಿಸುವ ಮಂತ್ರ
ನಾರಾಯಣ ದೀಕ್ಷಿತನೆಂಬ ಹುಡುಗನನ್ನು ವಿದ್ಯಾಭ್ಯಾಸಕ್ಕಾಗಿ ಅವನ ತಂದೆ ಗುರುಕುಲಕ್ಕೆ ಸೇರಿಸಿದನು. ಗುರುಕುಲದಲ್ಲಿ ಹನ್ನೆರಡು ವರ್ಷ ಓದಬೇಕಾಗಿತ್ತು. ಆದರೆ ಆ ಹುಡುಗ ಜಡಭರತನಂತೆ ಸೋಮಾರಿ. ಬೆಳಗ್ಗೆ ಬೇಗನೇ ಎದ್ದು ಪಾಠಗಳನ್ನು ಉರುಹಾಕಬೇಕೆಂದರೆ ಅವನಿಗೆ ಬಹಳ ಕಷ್ಟವಾಗುತ್ತಿತ್ತು. ಇನ್ನು ಹನ್ನೆರಡು ವರ್ಷ ಹೇಗೆ ಓದುವುದು ಎಂದನಿಸಿ, ತಲೆಯ ಮೇಲೆ ಗುಡ್ಡ ಹೊತ್ತವನಂತೆ ಕುಳಿತುಬಿಟ್ಟ.
ಒಂದು ಸಾರಿ ಗುರುಕುಲಕ್ಕೆ ಸ್ವಾಮೀಜಿಯೊಬ್ಬರು ಬಂದರು. ಅವರು ದೊಡ್ಡ ಪಂಡಿತರೆಂದೂ, ಮಂತ್ರಶಾಸ್ತ್ರಗಳನ್ನೆಲ್ಲ ಕರಗತಮಾಡಿಕೊಂಡವರೆಂದು ಉಪಾಧ್ಯಾಯರು ಹೇಳುವುದನ್ನು ನಾರಾಯಣ ಕೇಳಿಸಿಕೊಂಡ. ಒಂದು ದಿನ ಸ್ವಾಮೀಜಿ ಸಂಜೆಯ ಹೊತ್ತಿನಲ್ಲಿ ಮರದ ಕೆಳಗೆ ಕುಳಿತು ಯಾವುದೋ ಗ್ರಂಥವನ್ನು ಓದುತ್ತಿದ್ದರು. ನಾರಾಯಣ ಅವರ ಬಳಿಗೆ ಹೋಗಿ, 'ಸ್ವಾಮೀಜಿ, ಸುಲಭವಾಗಿ ಓದು ಬರುವಂತಹ ಮಂತ್ರವೇನಾದರೂ ಇದೆಯೇ?' ಎಂದು ಆಸೆಯಿಂದ ಕೇಳಿದ.
ಸ್ವಾಮೀಜಿ ಆತನ ಮುಖವನ್ನು ಒಮ್ಮೆ ನೋಡಿ, ಕಣ್ಮುಚ್ಚಿ 'ಇದೆಯಪ್ಪಾ ಇದೆ. ಸರಸ್ವತಿಯ ಅನುಗ್ರಹ ಪಡೆಯಲು ಒಂದು ಮಂತ್ರವಿದೆ' ಎಂದರು.
'ಹಾಗಾದರೆ ಆ ಮಂತ್ರವನ್ನು ದಯಮಾಡಿ ನನಗೆ ಉಪದೇಶಿಸಬೇಕು' ಎಂದು ನಾರಾಯಣ ಸಾಷ್ಟಾಂಗ ನಮಸ್ಕಾರ ಮಾಡಿ ಕೈ ಮುಗಿದನು.
ಸ್ವಾಮೀಜಿ ಮುಗುಳುನಗುತ್ತ, 'ಅದಕ್ಕೇನು! ಉಪದೇಶಿಸುತ್ತೇನೆ. ಆ ಮಂತ್ರವನ್ನು ಪ್ರತಿದಿನ ಬೆಳಗಿನ ಜಾವ ನಾಲ್ಕು ಗಂಟೆಗೇ ಎದ್ದು, ತಣ್ಣೀರಿನಲ್ಲಿ ಸ್ನಾನ ಮಾಡಿ, ನೂರೆಂಟು ಸಾರಿ ಜಪಿಸಬೇಕು. ಹಾಗೆ ಹದಿನಾಲ್ಕು ವರ್ಷ ಮಾಡಿದರೆ ಸರಸ್ವತಿ ಎಲ್ಲಾ ವಿದ್ಯೆಗಳನ್ನೂ ಅನುಗ್ರಹಿಸುತ್ತಾಳೆ. ನಾಳೆ ಬೆಳಗ್ಗೆ ಸ್ನಾನ ಮಾಡಿ ಬಾ. ಉಪದೇಶಿಸುತ್ತೇನೆ' ಎಂದರು.
ಅದನ್ನು ಕೇಳಿ ನಾರಾಯಣ ಹೆದರಿ, ಸ್ವಾಮೀಜಿಯ ಪಾದ ಮುಟ್ಟಿ 'ಆ ಮಂತ್ರ ಬೇಡ ಸ್ವಾಮೀಜಿ. ಈಗಿರುವ ಪದ್ಧತಿಯಲ್ಲೇ ವಿದ್ಯೆ ಕಲಿಯುತ್ತೇನೆ' ಎಂದ.
ಟಎಚ್. ಶಿವರಾಮ ಭಟ್, ಹತ್ತೊಕ್ಕಲು