ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಹು ಭಾಷಿ ಬಾಲ

ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಇಂಗ್ಲಿಷ್, ಫ್ರೆಂಚ್, ಚೈನೀಸ್...!

Mainashree
Updated On : 24 Jul 2013, 12:56 pm

ತುಂಗಭದ್ರಾ ನದಿಯಲ್ಲಿ ನಿಮ್ಮನ್ನು ತೇಲಿಸುವ ಈ ಹುಡುಗ ಬಹುಭಾಷಿ.

ಹೆಸರು- ವೆಂಕಟೇಶ್. ವಯಸ್ಸು- 16. ಶಿಕ್ಷಣ- ಸರಕಾರಿ ಪ್ರಾಥಮಿಕ ಶಾಲೆ. ಮಾತನಾಡುವ ಭಾಷೆಗಳು- ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಇಂಗ್ಲಿಷ್, ಫ್ರೆಂಚ್, ಚೈನೀಸ್...!
ಇದ್ಯಾರೀ ಪ್ರತಿಭೆ ಎಂದುಕೊಂಡಿರಾ? ಹಂಪಿಗೆ ಬನ್ನಿ. ಅಲ್ಲಿನ ತುಂಗಭದ್ರಾ ನದಿಯಲ್ಲಿ ತೆಪ್ಪದಲ್ಲಿ ಕುಳಿತು ತೇಲಿ. ಅದನ್ನು ಓಡಿಸುತ್ತಿರುವವನೇ ಈ ಬಾಲಕ.
ಹಂಪಿ ಎಂಬ ಪ್ರವಾಸಿ ತಾಣಕ್ಕೆ ದೇಶದ ವಿವಿಧೆಡೆಗಳಿಂದ, ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಪ್ರವಾಸಿಗರಿಗೆ ಹಂಪಿಯ ಇತಿಹಾಸದ ಬಗ್ಗೆ ವಿವರಿಸಲು ಅನೇಕ ಗೈಡ್‌ಗಳಿದ್ದಾರೆ. ಅವರು ಕನಿಷ್ಠ ಪದವಿ ಪಡೆದಿರುವವರಾಗಿದ್ದು, ಉತ್ತಮ ಇಂಗ್ಲಿಷ್ ಮಾತನಾಡುತ್ತಾರೆ. ಆದರೆ ಈತ ತುಂಗಭದ್ರಾ ನದಿಯ ದಡದಲ್ಲಿ ನಿಂತು ಪ್ರಾದೇಶಿಕ ಭಾಷೆಗಳ ಜತೆಗೆ ವಿದೇಶಿ ಭಾಷೆಗಳನ್ನೂ ನಿರರ್ಗಳವಾಗಿ ಮಾತನಾಡಬಲ್ಲ. ಜತೆಗೆ ಆತನ ಪುಟ್ಟ ದೋಣಿಯಲ್ಲಿ ತುಂಗಭದ್ರಾ ನದಿಯಲ್ಲಿ ಪಯಣಿಸುವ ಅಷ್ಟೂ ಸಮಯ ನಿಮಗೆ ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ವಿವರಿಸಿ, ನದಿ ಪಾತ್ರದಲ್ಲಿರುವ ಐತಿಹಾಸಿಕ ಜಾಗಗಳ ವಿವರವನ್ನೂ ನೀಡುತ್ತಾನೆ.
ದೋಣಿ ವಿಹಾರಕ್ಕಾಗಿ ಈತ ಪಡೆಯುವುದು ಅತ್ಯಲ್ಪ ಮೊತ್ತವಾದರೂ ಆತ ನೀಡುವ ಮನರಂಜನೆ ಎಂದಿಗೂ ನೆನಪಿನಲ್ಲಿ ಉಳಿಯುತ್ತದೆ. ಆರೇಳು ಜನರನ್ನು ಕೂರಿಸಿಕೊಂಡ ತೆಪ್ಪವನ್ನು ನದಿ ಹರಿಯುವಿಕೆಗೆ ವಿರುದ್ಧವಾಗಿ ಆತ ಹುಟ್ಟು ಹಾಕಿ ಸಾಗಿಸುತ್ತಿದ್ದರೆ ನೋಡುಗರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬೇಕು.
ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಪಡೆದು, ಜೀವನದ ದೋಣಿ ಸಾಗಿಸಲು ದೋಣಿಗೆ ಹುಟ್ಟುಹಾಕುವ ಕಾಯಕದಲ್ಲಿ ನಿರತನಾಗಿದ್ದಾನೆ ವೆಂಕಟೇಶ್. ಕುಟುಂಬದ ವೃತ್ತಿ ಕೂಲಿ. ನದಿಯಲ್ಲಿ ದೋಣಿ ನಡೆಸಲು ಗುತ್ತಿಗೆ ಪಡೆದ ಗುತ್ತಿಗೆ ದಾರನಿಂದ ಈತನಿಗೆ ಪ್ರತಿನಿತ್ಯ 100 ರು. ಕೂಲಿ ಸಿಗುತ್ತದೆ. ಇದಲ್ಲದೆ ಪ್ರವಾಸಿಗರು ನೀಡುವ ಪುಡಿಗಾಸು ಈತನ ಕೈಸೇರುತ್ತದೆ ಅಷ್ಟೆ. ಆದರೆ ವೆಂಕಟೇಶ್ ಎಂಬ ಬಾಲ ಅಂಬಿಗ ಯಾವುದೇ ಪಳಗಿದ ಅಂಬಿಗನಿಗೆ ಕಡಿಮೆ ಇಲ್ಲವೆಂಬಂತೆ ನದಿಯಲ್ಲಿ ದೋಣಿಗೆ ಹುಟ್ಟು ಹಾಕುತ್ತಾನೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿಗಳನ್ನು ನಿರರ್ಗಳವಾಗಿ ಮಾತನಾಡುತ್ತಾನೆ. ಫ್ರೆಂಚ್ ಮತ್ತು ಚೈನೀಸ್ ಭಾಷೆಗಳನ್ನೂ ಪ್ರವಾಸಿಗರಿಗೆ ಅರ್ಥವಾಗುವಷ್ಟು ಮಾತನಾಡುತ್ತಾನೆ. ಇವೆಲ್ಲ ಕಲಿಯಲು ಸಾಧ್ಯವಾಗಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಆತ ನೀಡುವ ಉತ್ತರ- ವೃತ್ತಿಯಲ್ಲಿ ಎದುರಾದ ಪ್ರಯಾಣಿಕರೇ ತನಗೆ ಭಾಷೆ ಕಲಿಸಿದ್ದಾರೆ ಎಂಬುದು.
ವೆಂಕಟೇಶ್‌ನ ದಿನದ ಆದಾಯ ಸುಮಾರು 100 ರುಪಾಯಿ. ಪರಿಸರದ ಮೇಲೆ ಎಲ್ಲಿಲ್ಲದ ಪ್ರೀತಿ. ಹಾಗಾಗಿಯೇ ಪ್ರಯಾಣಿಕರಿಗೆ ಪ್ಲಾಸ್ಟಿಕ್ ಮತ್ತಿತರ ಘನ ತ್ಯಾಜ್ಯ ವಸ್ತುಗಳ ಬಳಕೆಯಿಂದ ಆಗುವ ಅನಾಹುತಗಳ ಬಗ್ಗೆ ವಿವರಿಸಿ ಅವುಗಳಿಂದ ದೂರವಿರುವಂತೆ ಸೂಚಿಸುತ್ತಾನೆ. ವೆಂಕಟೇಶನ ಈ ಕಾಯಕಕ್ಕೆ ಸಾಥ್ ನೀಡಿರುವವರು ಹಂಪಿ ಕನ್ನಡ ವಿವಿಯ ಪ್ರವಾಸೋದ್ಯಮ ಡಿಪ್ಲೊಮೋ ಪಡೆದು, ಗೈಡ್ ಆಗಿರುವ ಮಂಜುನಾಥ್ ಗೌಡ. ಹಂಪಿಯ ಸಮಗ್ರ ಮಾಹಿತಿ ನೀಡುವ ಜತೆಗೆ, ಪರಿಸರ ಮಾಲಿನ್ಯ ತಡೆಗೆ ಅಳಿಲು ಸೇವೆ ಸಲ್ಲಿಸುವ ವೆಂಕಟೇಶ್ ಯುವಕರಿಗೆ ಮಾದರಿ. 

- ಎಲ್.ಅಶ್ವತ್ಥನಾರಾಯಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments