ಸನ್ಯಾಸಿಗಳ ಸಾಧನಾಜೀವನ!
ತಾವು ವಿಧಿವತ್ತಾಗಿ ಸನ್ಯಾಸ ಸ್ವೀಕರಿಸುವ ಬಗ್ಗೆ ನರೇಂದ್ರ ತನ್ನ ಸೋದರಶಿಷ್ಯರ ಅಭಿಪ್ರಾಯವನ್ನು ಕೇಳಿದ. ಅವರೆಲ್ಲರೂ ಅದಕ್ಕೆ ಹೃತ್ಪೂರ್ವಕವಾಗಿ ಸಮ್ಮತಿಸಿದರು. 1887ರ ಜನವರಿ 3ನೇ ವಾರದ ಒಂದು ದಿನ ಅವರೆಲ್ಲ ವಿರಜಾ ಹೋಮ ಮಾಡಿ, ವಿದ್ಯುಕ್ತ ಕರ್ಮಗಳನ್ನು ಪೂರೈಸಿ ಸನ್ಯಾಸಿಗಳಾದರು. ವಿಧಿಗಳೆಲ್ಲ ಮುಗಿದ ಮೇಲೆ ನರೇಂದ್ರ ತನ್ನ ಸೋದರ ಶಿಷ್ಯರಿಗೆ ಹೊಸ ಸನ್ಯಾಸನಾಮಗಳನ್ನು ಕೊಟ್ಟ. ತನಗೆ 'ವಿವೇಕಾನಂದ' ಎಂಬ ಹೆಸರನ್ನಿಟ್ಟುಕೊಂಡ.
ಯುವ ಸನ್ಯಾಸಿಗಳು ಈಗ ಮಠದಲ್ಲಿದ್ದುಕೊಂಡೇ ಹೆಚ್ಚಿನ ಸಾಧನೆಯಲ್ಲಿ ತೊಡಗಿದರು. ನರೇಂದ್ರ ತನ್ನ ಮನೆಯ ಕಡೆಗೂ ಗಮನ ಕೊಡಬೇಕಾಗಿತ್ತು. ಅವನ ಮನೆಗೆ ಸಂಬಂಧಿಸಿದ ಮೊಕದ್ದಮೆ ನ್ಯಾಯಾಲಯದಲ್ಲಿತ್ತು. ಅವನೇ ಓಡಾಡಬೇಕಾಗಿತ್ತು. ಆದರೆ ತಿಂಗಳಲ್ಲಿ ಹೆಚ್ಚಿನ ದಿನಗಳನ್ನು ಮಠದಲ್ಲೇ ಕಳೆಯುತ್ತಿದ್ದ. ಮುಂದೆ ಪರಿವ್ರಾಜಕ ಸನ್ಯಾಸಿಯಾಗಿ ಪ್ರಯಾಣ ಕೈಗೊಳ್ಳುವವರೆಗೆ ಅಂದರೆ ಸುಮಾರು 3 ವರ್ಷಗಳ ಕಾಲ ನಿರಂತರವಾಗಿ ತನ್ನ ಸೋದರಶಿಷ್ಯರಿಗೆ ಮಾರ್ಗದರ್ಶನ ನೀಡುತ್ತಿದ್ದ.
ಮಠದಲ್ಲಿನ ಜೀವನ ನಿಜಕ್ಕೂ ಬಡತನದ್ದಾಗಿತ್ತು. ಆದರೆ ಆ ಬಡತನದ ಬಗ್ಗೆ ಅವರಿಗೆ ಲಕ್ಷ್ಯವೇ ಇರಲಿಲ್ಲ. ಅಧ್ಯಾತ್ಮಿಕ ಸಾಧನಾಮಾರ್ಗದಲ್ಲಿ ಮುನ್ನಡೆಯುವುದೊಂದೇ ಅವರಿಗಿರುವ ಆಲೋಚನೆ. ಒಂದೆರಡು ತುಂಡು ಕಾವಿಬಟ್ಟೆ, ಒಂದು ಚಾಪೆ, ಜಪಮಾಲೆ ಮತ್ತು ಒಂದು ತಂಬೂರಿ ಇವೇ ಅವರ ಆಸ್ತಿ. ಸದಾ ಧ್ಯಾನ, ಚರ್ಚೆ, ಭಜನೆ, ಅಧ್ಯಯನಗಳಲ್ಲೇ ಮುಳುಗಿದ್ದ ಅವರಿಗೆ ಗುರುವು ಒದಗಿಸಿಕೊಟ್ಟರೆ ಊಟ. ಧ್ಯೇಯ ಸಾಧನೆಗಾಗಿ ಹಂಬಲಿಸುತ್ತಿದ್ದ ಅವರಿಗೆ ಲೌಕಿಕ ಜೀವನಾವಶ್ಯಕ ವಸ್ತುಗಳನ್ನು ಒದಗಿಸಿಕೊಳ್ಳುವಲ್ಲಿ ಸ್ವಲ್ಪವೂ ಆಸಕ್ತಿಯಿರಲಿಲ್ಲ.
-ಆನಂದ ಎಸ್.ಎನ್.
anandsn193@gmail.com