ಹಿಡಿಯದ ಹಾದಿ
'ನಾನು ಕಾಡಿನಲ್ಲಿ ಸಾಗುತ್ತಿದ್ದೆ. ನನ್ನ ಮುಂದೆ ದಾರಿ ಕವಲೊಡೆದಿತ್ತು. ಒಂದರಲ್ಲಿ ತುಂಬಾ ಮಂದಿ ಓಡಾಡಿ ಅದು ಸವೆದಿತ್ತು. ಇನ್ನೊಂದು ಅಷ್ಟು ಧೂಳಾಗಿರಲಿಲ್ಲ. ನಾನು ಎರಡನೆ ಹಾದಿಯನ್ನೇ ಆರಿಸಿಕೊಂಡೆ. ಅದು ನನ್ನನ್ನು ಇಲ್ಲಿಗೆ ಕರೆತಂದಿತು...'
ಇದು, ರಾಬರ್ಟ್ ಫ್ರಾಸ್ಟ್ ಎಂಬ ಆಂಗ್ಲ ಕವಿಯ ಸುಪ್ರಸಿದ್ಧವಾದ ಕವಿತೆಯೊಂದರ ಸಂಗ್ರಹ ಭಾವಾನುವಾದ. ಇದರ ನೀತಿ ಸುಸ್ಪಷ್ಟ ಹಾಗೂ ಸರಳ. ಎಲ್ಲರೂ ಆರಿಸಿಕೊಂಡ ಹಾದಿಯಲ್ಲೇ ನಡೆಯುವುದು ಸುಲಭ. ಯಾಕೆ ಅದನ್ನೇ ಆರಿಸಿಕೊಂಡೆ ಎಂದು ಪ್ರಶ್ನಿಸಿದರೆ ಉಳಿದವರು ನಡೆದಿದ್ದಾರಲ್ಲ ಎಂಬ ಸಿದ್ಧ ಉತ್ತರವೂ ಇದೆ. ಅಲ್ಲಿ ನಡೆಯಲು ಕಷ್ಟವೂ ಇಲ್ಲ. ಕಣ್ಣು ಮುಚ್ಚಿಕೊಂಡೇ ನಡೆಯಬಹುದಾದಷ್ಟು ಸವೆದಿರುತ್ತದೆ ಆ ದಾರಿ. ಅಲ್ಲಿ ಈ ಮೊದಲು ನಡೆದವರಿಗೂ, ನಿಮಗೂ ಅನುಭವದಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ. ಉಳಿದವರು ತಲುಪುವ ಗುರಿಗೂ, ನಿಮ್ಮ ಗುರಿಗೂ ಕೂಡ ಭಿನ್ನಭೇದವಿಲ್ಲ.
ಆದರೆ ವಿಭಿನ್ನವಾದ ಹಾದಿಯನ್ನು ಆರಿಸಿಕೊಂಡವರು ಹಾಗಲ್ಲ. ಅವರು ಜೀವನದಲ್ಲಿ ಪಡೆಯುವ ಅನುಭವಗಳು, ಮುಖಾಮುಖಿಯಾಗುವ ಮನುಷ್ಯರು, ತಲುಪುವ ಗುರಿ, ಪಡೆಯುವ ಮನಸ್ಸಿನ ಪರಿಷ್ಕಾರ ಎಲ್ಲವೂ ಬೇರೆ. ಇಲ್ಲಿ ನಡೆಯುವಾತ ಹೇಗೆ ಭಿನ್ನನೋ, ಅವನ ಸಂಕಷ್ಟವೂ ಭಿನ್ನವೇ. ಇಲ್ಲಿ ಆತನಿಗೆ ಸಹಾಯ ಮಾಡಬಲ್ಲವರೂ ಬಹಳ ಇಲ್ಲ. ಯಾಕೆಂದರೆ ಅಂಥ ಹಾದಿಗಳನ್ನು ಆರಿಸಿಕೊಂಡವರೂ ಹೆಚ್ಚಿನವರಲ್ಲ.
ನೀವು ಅರ್ಥ ಮಾಡಿಕೊಳ್ಳಬೇಕಾದ್ದು- ಇಂದು ಅತ್ಯಂತ ಯಶಸ್ವಿ ಮಂದಿ ಎಂದು ನಾವು ಯಾರನ್ನು ಗೌರವಿಸುತ್ತೇವೋ ಅವರು ಇಂಥ ಭಿನ್ನ ಹಾದಿಗಳಲ್ಲಿ ನಡೆದವರು. ಯಶಸ್ಸು ಎಂದರೆ ಇಲ್ಲಿ ಹಣದ ವಿಚಾರವಲ್ಲ. ಮನುಷ್ಯನ ಜೀವಿತ ಪವಿತ್ರವಾದದ್ದು ಎಂದು ನಂಬಿ, ಅದು ಎಂಥ ಮಹತ್ವವಾದದ್ದನ್ನು ಸಾಧಿಸಬಲ್ಲದು ಎಂದು ಸಾಧಿಸಿ ತೋರಿಸಿ, ಎಲ್ಲರಿಗೂ ಮಾದರಿಯಾಗಬಲ್ಲ ಬದುಕನ್ನು ಬಾಳಿದವರೇ ಇಲ್ಲಿ ಯಶಸ್ವಿ ಎಂಬ ಪದದ ಅಧಿಕಾರಿಗಳು. ಎಲ್ಲರೂ ಡಾಕ್ಟರ್, ಎಂಜಿನಿಯರ್ ಆಗುತ್ತಾರೆ, ನೀವೂ ಆಗುವುದರಲ್ಲೇನಿದೆ ಮಹಾ? ಕೊನೆಗೂ ತನ್ನ ಜೀವಿತಾವಧಿಯಲ್ಲಿ ಎಷ್ಟು ಮಂದಿಗೆ ದಿಕ್ಕಾದ ಎಂಬುದೇ ಅಲ್ಲವೇ ಸಾವಿರಾರು ಜನ ನಿಮ್ಮನ್ನು ನೆನೆಯುವಂತೆ ಮಾಡುವ ವಾಸ್ತವ? ಯಾರಿಗೂ ಒದಗದೆ, ತನ್ನಷ್ಟಕ್ಕೆ ತಾನು ಬದುಕಿ, ಕೊನೆಗೊಂದು ದಿನ ಇಲ್ಲವಾಗುವ ವ್ಯಕ್ತಿ ಯಾವ ಹಾದಿಯನ್ನೂ ಉಳಿಸಿ ಹೋಗುವುದಿಲ್ಲ. ಮಹಾತ್ಮರು ನಡೆದ ದಾರಿಯಲ್ಲಿ ನಡೆಯುವುದೂ ಒಂದು ಭಿನ್ನ ಅನುಭವವೇ ಎಂಬುದನ್ನು ಮರೆಯುವಂತಿಲ್ಲ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.