ಗ್ರಾಮೀಣ ಬದುಕು ರಿಯಾಲಿಟಿ ಶೋ ಆಗಲಾರದೆ?
ನೈಜತೆಯೇ ಮಾಯ
ರಿಯಾಲಿಟಿ ಶೋ ಎಂದರೆ ನೈಜತೆಯ ಪ್ರದರ್ಶನ. ಈಗ ರಿಯಾಲಿಟಿ ಶೋಗಳ ಹೆಸರಿನಲ್ಲಿ ಪ್ರಸಾರವಾಗುತ್ತಿರುವ ಬಹುತೇಕ ಕಾರ್ಯಕ್ರಮಗಳಲ್ಲಿ ನೈಜತೆಯನ್ನುಳಿದು ಇನ್ನೆಲ್ಲವೂ ಕಾಣಸಿಗುತ್ತವೆ. 'ಎದೆತುಂಬಿ ಹಾಡುವೆನು', 'ಕಾನ್ಷಿಡೆಂಟ್ ಸ್ಟಾರ್ ಸಿಂಗರ್' ನಂತಹ ಕಾರ್ಯಕ್ರಮಗಳು ನೈಜತೆಗೆ ಹತ್ತಿರವೆನಿಸಿ ಆಪ್ತವೆನಿಸಿದ್ದವು. ಆದರೆ ಕ್ರಮೇಣ ರಿಯಾಲಿಟಿ ಶೋಗಳಲ್ಲಿ ಟಿ.ಆರ್.ಪಿ.ಗೋಸ್ಕರ ನೇಯ್ದ ಅವಾಸ್ತವಿಕತೆಗಳೇ ಹೆಚ್ಚು. ಕೆಲವೊಮ್ಮೆ ಅಶ್ಲೀಲತೆ, ಉತ್ಪ್ರೇಕ್ಷೆಗಳು ಇರುತ್ತವೆ. ಮಕ್ಕಳ ರಿಯಾಲಿಟಿ ಶೋಗಳಲ್ಲಂತೂ ಸೋತ ಪುಟ್ಟಮಕ್ಕಳ ನೋವಿನ ಅಳುವನ್ನು ಭಾವ ತೀವ್ರತೆಯ ಕ್ಷಣವನ್ನು ವೈಭವೀಕರಿಸುವುದು ಅದಾವ ನೈಜತೆ? ರಿಯಾಲಿಟಿ ಶೋ ಹೆಸರಿನಲ್ಲಿ ಪ್ರೇಕ್ಷಕರಿಗೆ ಮಂಕುಬೂದಿ ಎರಚಿದ ಶೋವೊಂದು ಬಿಗ್ ಫೂಲಿಶ್‌ನೆಶ್ ಮೆರೆಯಿತು. ಈ ರಿಯಾಲಿಟಿ ಶೋಗಳು ಎಲ್ಲ ಸಮಯದಲ್ಲಿಯೂ ಪ್ರೇಕ್ಷಕರನ್ನು ಮರಳು ಮಾಡಲಾರವು. ಪ್ರೇಕ್ಷಕ ಸದಾ ಮೂರ್ಖನಾಗಲಾರ. ಕೊನೆಗೆ ಗೆಲ್ಲುವುದು ನೈಜತೆಯೇ. ರಿಯಾಲಿಟಿ ಶೋಗಳ ಮತ್ತೊಂದು ಬಹುಮುಖ್ಯ ಋಣಾತ್ಮಕ ಅಂಶವೆಂದರೆ ಅವುಗಳು ಯಾವಾಗಲೂ ನಗರ ಕೇಂದ್ರಿತವಾಗಿರುವುದು. ಗ್ರಾಮೀಣ ಜನರು ಯಾವಾಗಲೂ ಇವುಗಳಿಂದ ವಂಚಿತರೇ! ಹಳ್ಳಿಗರ ಬದುಕಿನ ದಾರಿ ರಿಯಾಲಿಟಿ ಶೋಗಳ ವಸ್ತುಗಳಾಗಲಾರವೇ? ಸಿನಿಮಾ ತಾರೆ, ಕ್ರೀಡಾಪಟು, ಉದ್ಯಮಿ, ರಾಜಕಾರಣಿಗಳು ಮಾತ್ರ ಸೆಲೆಬ್ರಿಟಿಗಳೇ?
-ಶೀಲಾ ಸತ್ಯೇಂದ್ರಸ್ವಾಮಿ, ಹರವೆ ಮಠ
ಜನರೇನು ಮೂರ್ಖರೇ?
ಸಾಂಪ್ರದಾಯಿಕ ಧಾರಾವಾಹಿಗಳ ಸಂಕೋಲೆಗೆ ಸಿಲುಕಿ, ಮಕ್ಕಿಕಾಮಕ್ಕಿ ಕಥೆ ನೋಡಿ ಬೇಸತ್ತ ಜನಕ್ಕೆ ತಂಪೆರೆದಿದ್ದು ರಿಯಾಲಿಟಿ ಶೋಗಳು. ಮನರಂಜನೆಗೆ ಬೇರೆಯದೇ ಆದ ದಾರಿಯನ್ನು ವಾಹಿನಿಗಳು ಕಂಡುಕೊಂಡಿದ್ದು ಈ ಮೂಲಕವೇ. ಆದ್ದರಿಂದಲೇ ಜನ ಬೇಗನೆ ರಿಯಾಲಿಟಿ ಶೋಗೆ ಒಗ್ಗಿಕೊಂಡರು. ಕಡಿಮೆ ಸಮಯದಲ್ಲೇ ರಿಯಾಲಿಟಿ ಶೋಗಳು, ಅವುಗಳ ಸ್ಪರ್ಧಿಗಳು ಮನೆ ಮಾತಾಗಿದ್ದು ಆಶ್ಚರ್ಯವೇನಲ್ಲ. ಆದರೆ ರಿಯಾಲಿಟಿ ಶೋಗಳಲ್ಲಿ ರಿಯಾಲಿಟಿಯೇ ಇಲ್ಲಾ ಎಂದು ತಿಳಿಯಲು ಬಹಳ ಸಮಯ ಹಿಡಿಯಲಿಲ್ಲ. ಸಾಗರದಷ್ಟು ನಿರೀಕ್ಷೆ ಇಟ್ಟು ಶೋ ನೋಡಿದರೆ ಅಷ್ಟೇ ನಿರಾಶೆ ಖಂಡಿತ. ಅನವಶ್ಯಕ ಜಗಳ, ವಿವಾದಗಳು ಕೆಲವು ಸಲ ಅತಿರೇಕಕ್ಕೆ ಹೋಗಿ ಪರಸ್ಪರ ವೈಯುಕ್ತಿಕ ನಿಂದನೆ, ಟೀಕೆ, ಅಳು ಅಲ್ಲಿಗೆ ರಿಯಾಲಿಟಿ ಶೋನ ರಿಯಾಲಿಟಿ ಮಣ್ಣುಪಾಲು. ಸೂತ್ರಧಾರನ ತಾಳಕ್ಕೆ ತಕ್ಕಂತೆ ಸ್ಪರ್ಧಿಗಳು ನಡೆಯುತ್ತಾರೆ ಎಂದು ತಿಳಿಯಲು ಇದಕ್ಕಿಂತ ನಿದರ್ಶನ ಬೇಕೇ ? ಗಿಮಿಕ್‌ಗಳನ್ನು ಬದಿಗಿಟ್ಟು ರಿಯಾಲಿಟಿ ಶೋಗಳು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಾಗಲಿ.
- ಮಂಜ ಎನ್, ಬೆಳವಾಡಿ ಗ್ರಾಮ