ಘನತೆಯ ಬೆಲೆ
ಬೆಡ್ವಿನ್ ಪೇಟೆಗೆ ಮಗನನ್ನೂ ಕರೆದುಕೊಂಡು ಹೊರಟ. ಪೇಟೆಯ ಜನಜಂಗುಳಿಯ ಮಧ್ಯೆ ಅವನ ಮಗ ಕಳೆದುಹೋದ. ದಿಕ್ಕುತಪ್ಪಿ ಸುತ್ತುತ್ತಿದ್ದ ಮಗುವನ್ನು ಒಬ್ಬ ಕಳ್ಳ ಹೊತ್ತೊಯ್ದ.
ಮಗನನ್ನು ಹುಡುಕುತ್ತ ಅಲೆದೂ ಅಲೆದು ಸುಸ್ತಾಗಿ ಬೆಡ್ವಿನ್ ಕೊನೆಗೆ ಡಂಗುರ ಹೊಡೆಸಿದ. ಹುಡುಕಿಕೊಟ್ಟವರಿಗೆ ಸಾವಿರ ನಾಣ್ಯಗಳ ಬಹುಮಾನ! ಎಂದು ಹೇಳಿದ. ಡಂಗುರವನ್ನು ಕೇಳಿಸಿಕೊಂಡ ಕಳ್ಳ, ಈಗಲೇ ಈ ಮಗುವನ್ನು ಒಪ್ಪಿಸಿದರೆ ಸಾವಿರ ನಾಣ್ಯಗಳು ಮಾತ್ರ ಸಿಗುತ್ತವೆ. ಇನ್ನೂ ಒಂದೆರಡು ದಿನ ಸತಾಯಿಸಿದರೆ ಹೆಚ್ಚು ಗಳಿಸುವ ಅವಕಾಶವಿದೆ ಎಂದು ಯೋಚಿಸಿದ.
ಎರಡನೇ ದಿನ ಬೆಡ್ವಿನ್ ಐನೂರು ನಾಣ್ಯಗಳ ಬಹುಮಾನವನ್ನು ಸಾರಿದ. ಮೂರನೇ ದಿನ ಡಂಗುರ ಕೇಳಿದ ಕಳ್ಳನಿಗೆ ಆಸೆಯೆಲ್ಲ ಇಳಿದುಹೋಯಿತು. ಅಂದು ಬಹುಮಾನದ ಮೊತ್ತವನ್ನು ನೂರು ನಾಣ್ಯಗಳಿಗೆ ಇಳಿಸಿದ್ದ! ಇನ್ನು ಕಾಯುತ್ತ ಕೂತರೆ ಪ್ರಯೋಜನವಿಲ್ಲವೆಂದು ಕಳ್ಳ, ಮಗುವನ್ನು ಒಪ್ಪಿಸಿದ. ಬಹುಮಾನದ ಮೊತ್ತ ಪಡೆಯುವುದಕ್ಕಿಂತಲೂ, ದಿನಗಳೆಯುತ್ತಲೇ ಬಹುಮಾನದ ಮೊತ್ತ ಕಡಿಮೆ ಮಾಡಿದ್ದೇಕೆ ಎನ್ನುವುದು ಕಳ್ಳನಿಗೆ ತಿಳಿಯಬೇಕಾಗಿತ್ತು. ಅದನ್ನು ಬೆಡ್ವಿನ್ನಲ್ಲಿ ಕೇಳಿದ.
'ನನ್ನ ಮಗ ಮೂರು ದಿನದಿಂದಲೂ ನಿನ್ನ ಬಳಿಯೇ ಇದ್ದನೆಂದು ನನಗೆ ಗೊತ್ತಿತ್ತು. ಅಪಹರಣವಾದ ಮೊದಲ ದಿನ ನನ್ನ ಮಗ ನೀನು ಕೊಟ್ಟ ಏನನ್ನೂ ತಿನ್ನಲಿಲ್ಲ, ಅಲ್ಲವೇ?' 'ಹೌದು' ಎಂದ ಕಳ್ಳ. ಅಂದರೆ ಮೊದಲ ದಿನ ನನ್ನ ಮಗ ತುಂಬ ಘನತೆವೆತ್ತ ಮನುಷ್ಯನಂತೆ ವರ್ತಿಸಿದ. ತನ್ನ ಅಪಹರಣ ಮಾಡಿದವನ ಕೈಯಿಂದ ರೊಟ್ಟಿಯಿರಲಿ ನೀರು ಕೂಡ ಪಡೆಯಲು ಅವನ ಮನಸ್ಸು ನಿರಾಕರಿಸಿತು. ಆದರೆ, ಎರಡನೇ ದಿನ ಅವನು ಸ್ವಲ್ಪ ಮೆತ್ತಗಾಗಿದ್ದ. ನೀನು ಕೊಟ್ಟ ಊಟವನ್ನು ತೆಗೆದುಕೊಂಡು ತಿಂದ. ಅಂದರೆ, ಎರಡನೇ ದಿನಕ್ಕೆ ಅವನ ಘನತೆ ಆತ್ಮಪ್ರತಿಷ್ಠೆಗಳು ಸ್ವಲ್ಪಮಟ್ಟಿಗೆ ಇಳಿದಿದ್ದವು. ಕಳ್ಳ ಕೊಟ್ಟ ಊಟವನ್ನು ಉಣ್ಣುವಷ್ಟರ ಮಟ್ಟಿಗೆ ಘನತೆಯ ಜತೆ ರಾಜಿ ಮಾಡಿಕೊಂಡಿದ್ದ. ಇನ್ನು ಮೂರನೆಯ ದಿನದ ಹೊತ್ತಿಗೆ ಊಟದ ಹೊತ್ತಾಗುತ್ತಲೇ ನಿನ್ನನ್ನು ಕರೆದು ರೊಟ್ಟಿ ಕೊಡು ಎಂದು ಕೇಳಿದ.' 'ಅಂದರೆ, ಮೂರನೆಯ ದಿನದ ಮಟ್ಟಿಗೆ ಅವನ ಘನತೆಯ ಬೆಲೆ ಕುಸಿದುಹೋಗಿತ್ತು. ಅವನು ಮತ್ತು ಕಳ್ಳನ ನಡುವೆ ಏನೇನೂ ಅಂತರ ಇರಲಿಲ್ಲ. ಇಬ್ಬರೂ ಬೇರೆಯವರ ಸ್ವತ್ತಿಗೆ ಕೈಚಾಚುವುದನ್ನು ಕಲಿತುಬಿಟ್ಟಿದ್ದರು! ಹಾಗಾಗಿಯೇ ಅವನ ಬೆಲೆ ಇಳಿಸಿದೆ' ಎಂದ ಬೆಡ್ವಿನ್. ಉತ್ತರ ಕೇಳಿದ ಕಳ್ಳ ತಲೆತಗ್ಗಿಸಿ ಹೊರನಡೆದ.
-ರೋಹಿತ್ ಚಕ್ರತೀರ್ಥ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.