ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನರೇಂದ್ರನ ಕಾರ್ಯಶೀಲ ವ್ಯಕ್ತಿತ್ವ

Mainashree
Updated On : 25 Jul 2013, 12:04 pm

ಶ್ರೀರಾಮಕೃಷ್ಣ ಮಹಾಸಂಘದ ಇತಿಹಾಸದಲ್ಲಿ ತೀವ್ರ ಆಧ್ಯಾತ್ಮಿಕ ಸಾಧನೆ ಎಂಬುದರ ಇನ್ನೊಂದು ಹೆಸರೇ ಬಾರಾನಗೋರ್ ಮಠ. ಮಠದಲ್ಲಿ ತೀವ್ರ ಆಧ್ಯಾತ್ಮಿಕ ಸಾಧನೆಯೊಂದಿಗೆ ಆಳವಾದ ತತ್ವ್ತಾಭ್ಯಾಸವೂ ನಡೆಯುತ್ತಿತ್ತು. ಪಾಶ್ಚಾತ್ಯ ತತ್ವಶಾಸ್ತ್ರಜ್ಞರಾದ ಕ್ಯಾಂಟ್, ಹೆಗಲ್, ಸ್ಪೆನ್ಸರ್ ಮುಂತಾದವರ ವಾದಗಳನ್ನು ಹಾಗೂ ನಾಸ್ತಿಕವಾದಿಗಳ, ಭೌತವಾದಿಗಳ ಸಿದ್ಧಾಂತಗಳನ್ನು ಅಧ್ಯಯನ ಮಾಡುತ್ತಿದ್ದರು. ಧರ್ಮದೊಂದಿಗೆ ಇತಿಹಾಸ, ಸಮಾಜಶಾಸ್ತ್ರ, ಸಾಹಿತ್ಯ, ಕಲೆ, ವಿಜ್ಞಾನಗಳನ್ನು ಅಭ್ಯಾಸ ಮಾಡಿ, ಅವುಗಳ ಕುರಿತಾಗಿ ಚರ್ಚಿಸುತ್ತಿದ್ದರು. ಷಡ್ದರ್ಶನಗಳನ್ನು ಚೆನ್ನಾಗಿ ವಿಮರ್ಶಿಸಿ ಅವುಗಳಲ್ಲಿ ಪರಸ್ಪರ ತಾಳೆಯಾಗುವ ವಿಷಯಗಳು ಯಾವುವು, ವಿರುಧ ವಿಷಯಗಳು ಯಾವುವು ಎಂಬುದನ್ನು ಅರಿಯುತ್ತಿದ್ದರು. ವೇದಾಂತ ತತ್ತ್ವಗಳನ್ನು, ಬೌದ್ಧ ತತ್ತ್ವಗಳನ್ನು ಹೋಲಿಸಿ ನೋಡುತ್ತಿದ್ದರು. ಇವುಗಳಲ್ಲಿನ ಸಾಮಾನ್ಯ ಅಂಶಗಳು, ವೈಶಿಷ್ಟ್ಯಗಳನ್ನು ವಿಚಾರ ಮಾಡುತ್ತಿದ್ದರು. ಕೆಲವೊಮ್ಮೆ ಕ್ರೈಸ್ತ ಪಾದ್ರಿಗಳು ಬಂದು ಇವರೊಂದಿಗೆ ಚರ್ಚಿಸುತ್ತಿದ್ದರು.
'ಏಳಿ, ಎದ್ದೇಳಿ! ದಿವ್ಯಾಮೃತವನ್ನು ಪಾನಮಾಡಬೇಕೆಂಬವರೆಲ್ಲ ಎದ್ದೇಳಿ' ಎಂದು ರಾಗವಾಗಿ ಹಾಡುತ್ತಾ, ಸೋದರ ಸನ್ಯಾಸಿಗಳನ್ನೆಲ್ಲ ನಸುಕಿನಲ್ಲೇ ಎಬ್ಬಿಸುವುದರಿಂದ ಹಿಡಿದು, ಅರ್ಧರಾತ್ರಿ ಕಳೆದ ಮೇಲೂ ಮಠದ ತಾರಸಿಯ ಮೇಲೆ ಗುರುಭಾಯಿಗಳೊಂದಿಗೆ ಕುಳಿತು ಭಾವಾವೇಶದಿಂದ ಭಜನೆ ಮಾಡುವುದು, ದೀರ್ಘ ಚರ್ಚೆಯಲ್ಲಿ ತೊಡಗುವುದು ಹೀಗೆ ನರೇಂದ್ರ ದಿನವೆಲ್ಲಾ ಒಂದಲ್ಲ ಒಂದು ಕಾರ್ಯದಲ್ಲಿ ತೊಡಗಿರುತ್ತಿದ್ದ. ಇದರ ಮಧ್ಯೆ ಭಕ್ತಾದಿಗಳು ಬರುತ್ತಿದ್ದರು. ಪಂಡಿತರು ವಾದ, ಚರ್ಚೆಯಲ್ಲಿ ತೊಡಗುತ್ತಿದ್ದರು. ಆದರೆ ನರೇಂದ್ರ ಮಾತ್ರ ಯಾವ ಕಾರಣಕ್ಕೂ ಒಂದು ಕ್ಷಣವೂ ಬೇಸರಿಸುತ್ತಿರಲಿಲ್ಲ. ಅವನ ಈ ಕಾರ್ಯಶೀಲತೆಯೇ ಸೋದರಶಿಷ್ಯರಿಗೆ ಅತ್ಯುತ್ಸಾಹವನ್ನು ತುಂಬುತ್ತಿತ್ತು.

-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement