ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಯಾವುದೂ ಯಃಕಶ್ಚಿತವಲ್ಲ

Mainashree
Updated On : 24 Jul 2013, 2:28 am

ನೆರೆಮನೆಯವರು ನಮ್ಮ ಅಂತಸ್ತು, ವಿದ್ಯೆ, ಜಾತಿ ಇವುಗಳಲ್ಲಿ ಯಾವುದಾದರೊಂದಕ್ಕೆ ಸರಿಗಟ್ಟದಿದ್ದರೂ ಅವರನ್ನು ದೂರ ಇಡುತ್ತೇವೆ. ಬಸ್ಸಿನಲ್ಲಿ ಹತ್ತಿರ ಕುಳಿತವರೊಂದಿಗೆ ಮಾತನಾಡುವುದಿಲ್ಲ. ಬೀದಿಯಲ್ಲಿ ತರಕಾರಿ, ಹೂವು ಮಾರುತ್ತ ಬರುವವರ ಪರಿಚಯ ನಮಗೆ ಬೇಕಾಗಿಲ್ಲ. ನಾವು, ನಮ್ಮ ಕುಟುಂಬ, ನಮ್ಮ ಆಫೀಸು ಇಷ್ಟರಲ್ಲೇ ನಾವು ಬ್ಯುಸಿ. ನಮ್ಮ ಕಚೇರಿಗಳಲ್ಲೂ ನಾವು ಆಫೀಸ್‌ಬಾಯ್‌ಗಳನ್ನು ಎಷ್ಟು ಕೆಲಸಕ್ಕೆ ಬೇಕೋ ಅಷ್ಟು ಹತ್ತಿರ ಮಾತ್ರ ಇಟ್ಟಿರುತ್ತೇವೆ. ಆತನೇನಾದರೂ ಮನೆಯ ಸಂಕಷ್ಟ ಹೇಳಿಕೊಳ್ಳಲು ಬಂದರೆ ದೂರ ಅಟ್ಟುತ್ತೇವೆ.
ನೆನಪಿಟ್ಟಿರಿ, ನೀವು ಯಾವತ್ತಾದರೂ ಸಂಕಷ್ಟಕ್ಕೆ ಸಿಲುಕಿದಾಗ, ಯಾರನ್ನು ದೂರ ಇಟ್ಟಿದ್ದಿರೋ ಅದೇ ನೆರೆಮನೆಯಾತನೇ ನಿಮ್ಮನ್ನು ಕಾಪಾಡುವುದು. ಪಿಕ್‌ಪಾಕೆಟ್ ಆದರೆ ನೆರವಿಗೆ ಬರಲು ಸಹಪ್ರಯಾಣಿಕರೇ ಬೇಕು. ಬಚ್ಚಲು ಮನೆ ಮೋರಿ ಕಟ್ಟಿಕೊಂಡರೆ ಕ್ಲೀನ್ ಮಾಡುವ ಜನ ಕರೆತರಲು ಒದಗುವವನು ಅದೇ ಬೀದಿಹೋಕ ತರಕಾರಿ ಮಾರಾಟಗಾರನೇ ಹೊರತು ಅನ್ಯರಲ್ಲ. ಅಷ್ಟಿದ್ದರೂ ನಾವು ನಮಗಿಂತ ಕಡಿಮೆ ಅದೃಷ್ಟವಂತರನ್ನು ಕ್ಷುಲ್ಲಕ ವ್ಯಕ್ತಿಗಳೆಂಬಂತೆ ನೋಡುತ್ತೇವಲ್ಲ, ಯಾಕೆ?
'ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ಇಲ್ಲಿ ಯಾವುದಕ್ಕೂ ಮೊದಲಿಲ್ಲ, ಕೊನೆಯೂ ಇಲ್ಲ. ಇಲ್ಲಿ ಯಾವುದೂ ಯಃಕಶ್ಚಿತವಲ್ಲ...' ಎಂದು ಮಹಾಕವಿ ಕುವೆಂಪು ತಮ್ಮ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯ ಆರಂಭದಲ್ಲಿ ಹೇಳಿದ್ದು ಇಲ್ಲಿ ನೆನಪಾಗುತ್ತಿದೆ. ಯಃಕಶ್ಚಿತ್ ಎಂದು ಯಾವುದೂ ಇಲ್ಲ. ನಮ್ಮ ಜೀವನದಲ್ಲಿ ನಾವು ಕೆಲವು ಸಂದರ್ಭಗಳಲ್ಲಿ ಕೆಲವಕ್ಕೆ ಪ್ರಾಧಾನ್ಯ ಕೊಡುತ್ತೇವೆ ಎಂಬುದಷ್ಟೇ ನಿಜ. ನಮಗೆ ನೇರ ಉಪಕಾರಕ್ಕೆ ಒದಗದೆ ಹೋದದ್ದೆಲ್ಲವೂ ಕನಿಷ್ಟ ಎಂದು ಭಾವಿಸಬೇಕಾಗಿಲ್ಲ. ಹಿಂದೆಂದೋ ನೀವು ಈಜು ಕಲಿತು, ಅದು ತನಗೆ ಬೇಕಾಗಿಲ್ಲ ಎಂದು ಮರೆತುಬಿಟ್ಟಿದ್ದೀರಿ. ಬದುಕಿನ ಯಾವುದೋ ದುರಂತ ಘಳಿಗೆಯಲ್ಲಿ ನೀವು ಕಲಿತ ಅರೆಬರೆ ಈಜೇ ನಿಮ್ಮನ್ನು ಕಾಪಾಡಬಲ್ಲದು ಅಲ್ಲವೆ? ಆಸಕ್ತಿಯಿಲ್ಲದೆ ಹೆಣಿಗೆ ಕಲಿತ ರಾಜಕುಮಾರಿ, ಕಳ್ಳರ ಬಂಧನದಲ್ಲಿದ್ದಾಗ ತನ್ನ ಹೆಣಿಗೆ ಕೌಶಲವನ್ನೇ ಉಪಯೋಗಿಸಿ ಬಂಧನದಿಂದ ಪಾರಾದ ಕತೆಯನ್ನು ನೀವು ಕೇಳಿರಬಹುದಲ್ಲವೆ? ಅಲ್ಲರೂ ನಮಗೆ ಒದಗುವವರೇ, ಎಲ್ಲವೂ ನಮಗೆ ಉಪಕ್ಕಾರಕ್ಕಾಗುವಂಥದೇ. ಆದ್ದರಿಂದ ಯಾರನ್ನೂ 'ಹಚಾ' ಎಂದು ದೂರ ತಳ್ಳದಿರಿ. ತಲೆ ತಿನ್ನುವವರನ್ನೂ ಮನರಂಜನೆಗೆ ಉಪಯೋಗಿಸಿ! <

-  ಸಹನೆ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement